ಅಗ್ನಿಪಥ್ ಯೋಜನೆ ಜಾರಿಯಾದ್ರೆ ಯುವಕರೇ ಸರ್ಕಾರದ ಸಮಾಧಿ ಕಟ್ತಾರೆ: ರೈತ ಮುಖಂಡರು
* ಅಗ್ನಿಪಥ್ ಯೋಜನೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರತಿಭಟನೆ
* ಶ್ರಿಮಂತರ ಮಕ್ಕಳಿಗೆ ಸಂಸ್ಕಾರದ ಅಗತ್ಯತೆ ಇದೆ
* ಮೂರು ಬಿಟ್ಟವರು ಊರಿಗೆ ದೊಡ್ಡವರಂತೆ ಕೇಂದ್ರ ಸರ್ಕಾರ ವರ್ತನೆ ಮಾಡ್ತಿದೆ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಜೂ.24): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಗೆ ಸೇನೆ ಸೇರಬಯಸುವ ಅಭ್ಯರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಆ ಯೋಜನೆಗೆ ರೈತ ಮುಖಂಡರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದು(ಶುಕ್ರವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕೇವಲ ಎರಡೂವರೆ ವರ್ಷಗಳ ಕಾಲ ಮಾತ್ರ ಅವರನ್ನು ಬಳಸಿಕೊಂಡು ಆ ನಂತರ ಅವರನ್ನು ಸೇನೆಯಿಂದ ಕೈಬಿಡುವುದು ಯಾವ ನ್ಯಾಯ. ಈ ಯೋಜನೆ ಯುವಕರನ್ನು ದಾರಿ ತಪ್ಪಿಸುವ ಯೋಜನೆಯಾಗಿದ್ದು, ಕೂಡಲೇ ಈ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
2015ರ ಉತ್ತರ ಪತ್ರಿಕೆ ನೀಡಲು ಸತಾಯಿಸುತ್ತಿರುವ ಕೆಪಿಎಸ್‌ಸಿ..!
ಮೂರು ಬಿಟ್ಟವರು ಊರಿಗೆ ದೊಡ್ಡವರಂತೆ ಕೇಂದ್ರ ಸರ್ಕಾರ ವರ್ತನೆಯನ್ನ ಮಾಡುತ್ತಿದೆ. ಅಗ್ನಿಪಥ್ ಯೋಜನೆ ಬಡವರ ಮಕ್ಕಳ ಬದುಕನ್ನ ಬೀದಿಗೆ ತಳ್ಳುತ್ತಿದ್ದಾರೆ. ಇದೊಂದು ದೊಡ್ಡ ಹುನ್ನಾರಾಗಿದೆ. ಕೇಂದ್ರ ಸರ್ಕಾರ ವೈಫಲ್ಯವನ್ನ ಮುಚ್ಚಿಕ್ಕೊಳ್ಳುವ ಪಿತೂರಿ ಇದಾಗಿದೆ. ಎನ್‌ಆರ್‌ಸಿಸಿ, ಎನ್‌ಐಎ ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿತ್ತು. ಅಗ್ನಿ ವೀರರನ್ನ ಬಳಸಿಕೊಂಡು ಅವರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಅವರ ಹುನ್ನಾರ ಇದಾಗಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಗ್ನಿಪಥ್ ಯೋಜನೆಯನ್ನ ಕೋಟ್ಯಾಂತರ ಜನರು ಬೀದಿಗೆ ಇಳಿದು ವಿರೋಧ ಮಾಡುತ್ತಿದ್ದರೆ ಆಡಳಿತ ಪಕ್ಷದ ಮುಖಂಡರುಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಗ್ನಿಪಥ್ ಯೋಜನೆ ಒಳ್ಳೆಯದು ಆಗಿತ್ತು ಅಂದ್ರೆ ಅವರ ಮಕ್ಕಳನ್ನ ಅಂದ್ರೆ ಬಿಜೆಪಿ ಆರ್‌ಎಸ್‌ಎಸ್ ನವರಿದ್ದಾರೆ. ಅವರ ಮಕ್ಕಳನ್ನ ಅಗ್ನಿವೀರರನ್ನಾಗಿ ಮಾಡಿ ನೋಡೋಣ ಎಂದು ಆಕ್ರೋಶ ಹೊರಹಾಕಿದರು.
ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!
ಅಗ್ನಿಪಥ್ ಯೋಜನೆ ಬಹಳ ಒಳ್ಳೆಯದು ಅಂದ್ರೆ ನಿಮ್ಮ ಮಕ್ಕಳನ್ನ ಅಗ್ನಿಪಥ್‌ಗೆ ಕಳಿಸಿ ನೋಡೋಣ ನಿಮ್ಮ ಮಕ್ಕಳು ವಿದೇಶದಲ್ಲಿ ಎಸಿ ರೂಂನಲ್ಲಿ ಇದ್ದು ದೊಡ್ಡ ದೊಡ್ಡ ಹುದ್ದೆಯಲ್ಲಿರಬೇಕು ಬಡವರ ಮಕ್ಕಳು ಕಾವಲು ಕಾಯಬೇಕು ಇದು ಯಾವ ನ್ಯಾಯ ಎಂದರು. ಶ್ರಿಮಂತರ ಮಕ್ಕಳಿಗೆ ಸಂಸ್ಕಾರದ ಅಗತ್ಯತೆ ಇದೆ. ಬಡವರ ಮಕ್ಕಳಿಗೆ ಇಲ್ಲ, ನಿಜವಾಗಲೂ ನೀವು ದೇಶದ ಕಲ್ಯಾಣ ಬಯಸೋದು ಆದರೆ ನಿಮ್ಮ ಮಕ್ಕಳನ್ನ ಅಗ್ನಿ ವೀರರನ್ನಾಗಿ ಮಾಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸವಾಲ್ ಹಾಕಿದ್ದರು. ಹೋರಾಟ ಮಾಡುವವರ ವಿರುದ್ಧ ನೀವು ಈ ಯೋಜನೆ ಜಾರಿಗೆ ತಂದಿದ್ದೆ ಆದರೆ ಇದೆ ಯುವಕರು ನಿಮ್ಮ ಸಮಾಧಿಯನ್ನ ಕಟ್ಟುತ್ತಾರೆ ಎಂದು ಡಾ.ವೆಂಕನಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಅಗ್ನಿಪಥ್ ಯೋಜನೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ರಾಜ್ಯದಾದ್ಯಂತ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ಒಂದು ವೇಳೆ ಈ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯದೇ ಹೋದಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ರೈತ ಸಂಘಟನೆಗಳು ಮುಂದಾಗುತ್ತವೆ ಎಂದು ರೈತ ಮುಖಂಡರು ಎಚ್ಚರಿಸಿದರು.