Asianet Suvarna News Asianet Suvarna News

ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!

*  ಬಿಎಂಟಿಸಿಯಿಂದ ಬರುವ ಗುಜರಿ ಬಸ್‌ನಿಂದಲೂ 3 ಲಕ್ಷ ಕಿಮೀ ಓಡಿಸಬಹುದು
*  ಬಳಿಕ ಗುಜರಿ ಹಾಕಿದರೆ ಅದರಿಂದಲೂ ಲಾಭ ಬರುತ್ತೆ
*  ಒಂದು ಬಸ್‌ ಗುಜರಿಗೆ ಹಾಕಿದರೆ ಕನಿಷ್ಠವೆಂದರೂ 2ರಿಂದ 3 ಲಕ್ಷ ಆದಾಯ 
 

Profit from BMTC Scrap Buses for NWKRTC grg
Author
Bengaluru, First Published Jun 24, 2022, 6:12 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.24):  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಿಎಂಟಿಸಿಯಲ್ಲಿ ಸಂಚರಿಸಿದ ಹಳೆಯ ಬಸ್‌ಗಳನ್ನು ಖರೀದಿಸುತ್ತಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ರೀತಿ ತರುವ ಬಸ್‌ಗಳಿಂದಲೂ ಲಾಭವಾಗುತ್ತದೆ ಎಂಬ ಹೊಸ ಬಗೆಯ ಲೆಕ್ಕಾಚಾರ ವಾಯವ್ಯ ಸಾರಿಗೆ ಸಂಸ್ಥೆ ಮಾಡಿದೆ.

ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಯಲ್ಲಿನ ಲಕ್ಷಗಟ್ಟಲೇ ಕಿಮೀ ಓಡಾಡಿದ 100 ಬಸ್‌ಗಳನ್ನು ಸಂಸ್ಥೆಯೂ ಖರೀದಿಸಲು ಮುಂದಾಗಿದೆ. ನಾವೇನು ಮಲತಾಯಿ ಮಕ್ಕಳಾ? ಎಂದೆಲ್ಲ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ವಾಯವ್ಯ ಸಾರಿಗೆ ಸಂಸ್ಥೆಯೂ ಹಳೆ ಬಸ್‌ಗಳಿಂದಲೂ ಹೇಗೆ ಲಾಭವಾಗುತ್ತದೆ ಎಂಬುದನ್ನು ತಿಳಿಸುತ್ತಿದೆ.

ಬಿಎಂಟಿಸಿ ಹಳೆ ಬಸ್‌ ಉತ್ತರ ಕರ್ನಾಟಕಕ್ಕೆ..!

ಹೇಗೆ ಲಾಭ?:

ಖರೀದಿಸಲು ಉದ್ದೇಶಿಸಿರುವ ಬಸ್‌ಗಳು ಸದ್ಯ 7ರಿಂದ 8 ಲಕ್ಷ ಕಿಲೋ ಮೀಟರ್‌ ಓಡಾಡಿವೆ. ಪ್ರತಿ ಬಸ್‌ನ್ನು ಕನಿಷ್ಠವೆಂದರೂ 11 ಲಕ್ಷ ಕಿಲೋ ಮೀಟರ್‌ ವರೆಗೂ ಓಡಿಸಬಹುದು. ಅಂದರೆ ಇನ್ನೂ 3ರಿಂದ 4 ಲಕ್ಷ ಕಿಮೀ ಓಡಿಸುವಷ್ಟುಸಾಮರ್ಥ್ಯ ಈ ಬಸ್‌ಗಳಿವೆ. ಸದ್ಯಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಲಾಭದಲ್ಲಿಲ್ಲ. ಈಗ ಹೊಸ ಬಸ್‌ ಖರೀದಿಸಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕರಿಗೆ ಸೇವೆಯಂತೂ ನೀಡಲೇಬೇಕು. ಅದಕ್ಕಾಗಿ ಈ ಬಸ್‌ಗಳು ಇನ್ನು ಎರಡ್ಮೂರು ವರ್ಷಗಳ ಕಾಲ ಓಡಿಸಬಹುದಾಗಿದೆ. ಇದು ಒಂದೆಡೆಯಾದರೆ, ಇನ್ನೊಂದೆಡೆ ಇವುಗಳನ್ನು ಗುಜರಿಗೆ ಹಾಕುವುದರಿಂದಲೂ ಲಾಭ ಬರುತ್ತದೆ.

ಒಂದು ಬಸ್‌ನ್ನು ಗುಜರಿಗೆ ಹಾಕಿದರೆ ಕನಿಷ್ಠವೆಂದರೂ 2ರಿಂದ 3 ಲಕ್ಷ ಆದಾಯ ಬರುತ್ತದೆ. ಈಗ ಬಿಎಂಟಿಸಿಯಲ್ಲಿ . 50 ಸಾವಿರದಿಂದ . 1 ಲಕ್ಷ ಕೊಟ್ಟು ಖರೀದಿಸಲಾಗುತ್ತದೆ. 100 ಬಸ್‌ಗಳನ್ನು ತಲಾ . 1 ಲಕ್ಷಕ್ಕೆ ಖರೀದಿಸಿದರೂ . 1 ಕೋಟಿ ಆಗುತ್ತದೆ. ಅವುಗಳನ್ನು ಓಡಿಸಿ ನಂತರ ಗುಜರಿಗೆ ಹಾಕಿದರೂ ಅದರಿಂದ . 2ರಿಂದ . 3 ಕೋಟಿ ಆದಾಯ ಬರುತ್ತದೆ. ಅಂದರೆ ಇಲ್ಲಿ 2ರಿಂದ 3 ಲಕ್ಷ ಕಿಮೀ ಓಡಿಸಿದ ನಂತರವೂ ಅವುಗಳನ್ನು ಗುಜರಿಗೆ ಹಾಕಿದರೆ ಒಂದು ಬಸ್‌ನಿಂದ ಕನಿಷ್ಠವೆಂದರೂ . 1ರಿಂದ . 2 ಲಕ್ಷ ಆದಾಯವಾಗುತ್ತದೆ. ಅಂದರೆ . 1ರಿಂದ . 2 ಕೋಟಿ ವರೆಗೂ ಆದಾಯ. ಹೀಗೆ ಅಲ್ಲಿಂದ ತಂದು ಓಡಿಸುವ ಜತೆಗೆ ಆಮೇಲೆ ಗುಜರಿಗೆ ಹಾಕಿದರೂ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ವಾಯವ್ಯ ಸಾರಿಗೆ ಸಂಸ್ಥೆಯದ್ದು.

ಬಾಗಲಕೋಟೆ: ವಾಯವ್ಯ ಸಾರಿಗೆಗೆ ಗುಜರಿ ಬಸ್ ಖರೀದಿಸಿದ್ರೆ ಕರವೇಯಿಂದ ಉಗ್ರ ಹೋರಾಟ

ಆಕ್ರೋಶ:

ಆದರೂ ಹೀಗೆ ಹಳೆ ಬಸ್‌ ಖರೀದಿಸಲು ಮುಂದಾಗಿರುವ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಏನೇ ಸಮಜಾಯಿಷಿ ನೀಡಲು ಮುಂದಾದರೂ ಅದಕ್ಕೆ ಸಾರ್ವಜನಿಕ ವಲಯದಲ್ಲಿ ಮಾತ್ರ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಮುಖ್ಯಮಂತ್ರಿಗಳು ಇದೇ ಭಾಗದವರೇ. ಹಿಂದಿನಿಂದಲೂ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲೇ ಇದೆ. ಈ ಭಾಗದಲ್ಲಿ ಸದಾಕಾಲ ಹಳೆ ಬಸ್‌ಗಳನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಅನುದಾನ ನೀಡಿ ಹೊಸ ಬಸ್‌ ಖರೀದಿಗೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.

ಸದ್ಯದ ಪರಿಸ್ಥಿತಿಯಲ್ಲಿ ಹೊಸ ಬಸ್‌ ಖರೀದಿಸುವ ಶಕ್ತಿ ವಾಯವ್ಯ ಸಾರಿಗೆಗಿಲ್ಲ. ಬಿಎಂಟಿಸಿಯಿಂದ ಹಳೆ ಬಸ್‌ ಖರೀದಿಸಲಾಗುತ್ತಿದೆ. ಹಳೆ ಬಸ್‌ಗಳಾದರೂ ಇನ್ನೂ 2-3 ಲಕ್ಷ ಕಿಲೋ ಮೀಟರ್‌ ಓಡಿಸಬಹುದು. ಏನು ಇಲ್ಲ ಎನ್ನುವುದಕ್ಕಿಂತ ಏನಾದರೂ ಇದೆ ಎನ್ನುವುದು ಉತ್ತಮ ಅಲ್ವಾ. ಈಗ ಜನರಿಗೆ ಸೇವೆ ಸಲ್ಲಿಸಬೇಕು. ಆ ನಿಟ್ಟಿನಲ್ಲಿ ಯೋಚಿಸಲಾಗಿದೆ. ಬಳಿಕ ಇವುಗಳನ್ನು ಗುಜರಿಗೆ ಹಾಕುವುದರಿಂದ ಲಾಭ ಬರುತ್ತದೆ ಅಂತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ ತಿಳಿಸಿದ್ದಾರೆ.  
 

Follow Us:
Download App:
  • android
  • ios