Asianet Suvarna News Asianet Suvarna News

ಹೂವಿನಹಡಗಲಿ: ಯೂರಿಯಾ ಗೊಬ್ಬರಕ್ಕೆ ಮತ್ತೆ ನೂಕುನುಗ್ಗಲು

* ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ಘಟನೆ
* ಗೊಬ್ಬರ ಮಾರಾಟವನ್ನೇ ಸ್ಥಗಿತಗೊಳಿಸಿದ ಸೊಸೈಟಿ ಸಿಬ್ಬಂದಿ
* ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಕೆ ಮಾಡದ ಅಧಿಕಾರಿಗಳು 
 

Farmers Faces Problems for Urea Fertilizer at Huvina Hadagali in Vijayanagara grg
Author
Bengaluru, First Published Jul 16, 2021, 8:36 AM IST

ಹೂವಿನಹಡಗಲಿ(ಜು.16): ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ನಿಲ್ಲುವಂತೆ ಕಾಣಿಸುತ್ತಿಲ್ಲ. ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ತಳ್ಳಾಟ, ನೂಕಾಟವಾದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಮಾನ್ಯರ ಮಸಲವಾಡ ಸೊಸೈಟಿ ವ್ಯಾಪ್ತಿಗೆ ಒಳಪಟ್ಟಿರುವ ಚಿಕ್ಕಕೊಳಚಿ ಗ್ರಾಮದಲ್ಲಿ ಗುರುವಾರ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ತಿಳಿದ 300ಕ್ಕೂ ಅಧಿಕ ರೈತರು ಗೋದಾಮಿನ ಮುಂದೆ ಜಮಾಯಿಸಿದ್ದರು. ಬೇಡಿಕೆ ಹೆಚ್ಚಾಗುತ್ತಿದಂತೆಯೇ ಪ್ರತಿ ಬಿಪಿಎಲ್‌ ಕಾರ್ಡ್‌ಯೊಂದಕ್ಕೆ 2 ಚೀಲ ಮಾತ್ರ ಯೂರಿಯಾ ಗೊಬ್ಬರ ನೀಡುತ್ತೇವೆಂದು ಸೊಸೈಟಿ ಸಿಬ್ಬಂದಿ ಹೇಳಿದರು. ಆಗ ರೈತರು ಹಾಗೂ ಸೊಸೈಟಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ತಳ್ಳಾಟ, ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಿಬ್ಬಂದಿ ಗೊಬ್ಬರ ಮಾರಾಟವನ್ನೇ ಸ್ಥಗಿತಗೊಳಿಸಿದರು. ಹೀಗಾಗಿ ರೈತರು ಬರಿಗೈಯಲ್ಲಿ ವಾಪಸ್‌ ಮನೆಗಳಿಗೆ ತೆರಳಿದರು.

ಹೂವಿನಹಡಗಲಿ ತಾಲೂಕಿನಲ್ಲಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಸದ್ಯ ಬೆಳೆಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರೈತರಿಗೆ ಗುಡ್‌ನ್ಯೂಸ್: ಕೊನೆಗೂ ರಾಜ್ಯಕ್ಕೆ ಬರ್ತಿದೆ ನ್ಯಾನೋ ಯೂರಿಯಾ

ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ರೈತರು ಯೂರಿಯಾ ಗೊಬ್ಬರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಹೊರೆಯಾಗದಂತೆ ತಾಲೂಕಿನ ಪ್ರತಿಯೊಂದು ಸೊಸೈಟಿಗಳಲ್ಲಿ ರಸಗೊಬ್ಬರ ಮಾರಾಟ ಮಾಡುವಂತೆ ಈ ಹಿಂದೆ ಸೊಸೈಟಿ ಕಾರ್ಯದರ್ಶಿಗಳ ಸಭೆ ಮಾಡಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆ ಹಳ್ಳಿಗಳಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘ(ವಿಎಸ್‌ಎಸ್‌ಎನ್‌)ದವರು ರೈತರ ಬೇಡಿಕೆಗೆ ತಕ್ಕಂತೆ ವಿವಿಧ ರೀತಿಯ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ 18 ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಪ್ರತಿನಿತ್ಯ 225 ಟನ್‌ ಯೂರಿಯಾ ಗೊಬ್ಬರ ಪೂರೈಕೆಯಾಗುತ್ತಿದೆ. ಆದ್ಯತೆ ಆಧಾರದ ಮೇಲೆ ಸೊಸೈಟಿಗಳಿಗೆ ರಸಗೊಬ್ಬರ ಪೂರೈಕೆಯಾಗುತ್ತಿದ್ದು, ಜತೆಗೆ ಪಟ್ಟಣ ಹಾಗೂ ಹಳ್ಳಿಗಳಲ್ಲಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟಗಾರರೂ 250 ಟನ್‌ ಯೂರಿಯಾ ಗೊಬ್ಬರ ಮಾರಾಟ ಮಾಡಿದ್ದಾರೆ. ಉಳಿದಂತೆ 2- 3 ದಿನಗಳಲ್ಲಿ ಬೇರೆ ಬೇರೆ ಕಂಪನಿಗಳ ಯೂರಿಯಾ ಗೊಬ್ಬರ ಕೂಡಾ ಬರಲಿದೆ. ರೈತರು ಯಾವುದೇ ಗೊಂದಲಕ್ಕೆ ಒಳಗಾಗದಂತೆ, ಗೊಬ್ಬರ ಖರೀದಿ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್‌ ಆಶ್ರಫ್‌ ಮಾಹಿತಿ ನೀಡಿದರು.

ರೈತರು ತಮ್ಮ ಜಮೀನಿನಲ್ಲಿ ಎಷ್ಟುಬಿತ್ತನೆಯಾಗಿದೆ ಎಂಬುದನ್ನು ಅರಿತು ಅದಕ್ಕೆ ಬೇಕಾದಷ್ಟುಮಾತ್ರ ಗೊಬ್ಬರ ಖರೀದಿಸುತ್ತಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಬೇಡಿಕೆಗೆ ತಕ್ಕಂತೆ ಯೂರಿಯಾ ಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಚಿಕ್ಕಕೊಳಚಿ ಗ್ರಾಮದ ರೈತರೊಬ್ಬರು ಹೇಳಿದ್ದಾರೆ.  

ಹತ್ತಾರು ರಸಗೊಬ್ಬರ ಉತ್ಪಾದನೆ ಕಂಪನಿಗಳು ಯೂರಿಯಾ ಉತ್ಪಾದಿಸುತ್ತಾರೆ. 2- 3 ದಿನಗಳಲ್ಲಿ ಗೊಬ್ಬರ ಕೊಪ್ಪಳ ಮತ್ತು ಬಳ್ಳಾರಿಗೆ ಬಂದ ನಂತರ ಪೂರೈಕೆಯಾಗುತ್ತದೆ. ನಿತ್ಯ 250 ಟನ್‌ ಯೂರಿಯಾ ಗೊಬ್ಬರ ಹಡಗಲಿಗೆ ಪೂರೈಕೆಯಾಗುತ್ತಿದೆ. ರೈತರು ಗೊಂದಲಕ್ಕೆ ಸಿಲುಕದೇ ಸಮಾಧಾನದಿಂದ ಖರೀದಿ ಮಾಡಬೇಕು ಎಂದು ಹೂವಿನಹಡಗಲಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಹ್ಮದ್‌ ಆಶ್ರಫ್‌ ತಿಳಿಸಿದ್ದಾರೆ.
 

Follow Us:
Download App:
  • android
  • ios