ಈರುಳ್ಳಿ ನಾಟಿಗೆ ರೈತರ ಪರ​ದಾಟ| ಬೆಲೆ ಹೆಚ್ಚಿ​ದ್ದರಿಂದ ಈರುಳ್ಳಿ ಬೆಳೆ​ಯಲು ಮುಂದಾದ ರೈತ| ಈರುಳ್ಳಿ ಸಸಿಗೂ ಹೆಚ್ಚಾದ ದರ| ಕಳೆದ ಎರಡು ತಿಂಗಳ ಹಿಂದೆ ಈರುಳ್ಳಿ ಬೀಜ ಪ್ರತಿ ಕೆಜಿಗೆ 500 ದರದಲ್ಲಿ ಮಾರಾಟ| ಆದರೆ ಈಗ 600 ರಿಂದ 800 ದರದಲ್ಲಿ ಮಾರಾಟ| ಕಂಪನಿ ಬೀಜ​ವಾ​ದರೆ ಪ್ರತಿ ಕೆಜಿಗೆ 1500-2000 ದರ​|

ಬಸವರಾಜ ನಂದಿಹಾಳ 

ಬಸವನಬಾಗೇವಾಡಿ(ಡಿ.15):ಒಂದು ಕಡೆ ಈರುಳ್ಳಿ ದರ ಗಗನಕ್ಕೇರು​ತ್ತಿ​ದ್ದರೆ, ಇನ್ನೊಂದು ಕಡೆ ರೈತ​ರಿಗೆ ಈರುಳ್ಳಿ ಬೆಳೆಯುವುದೇ ಚಿಂತೆಯಾಗಿದೆ. ಹವಾಮಾನದ ವೈಪರೀತ್ಯದಿಂದಾಗಿ ಈರುಳ್ಳಿ ಈ ಬಾರಿ ಮಾರುಕಟ್ಟೆಗೆ ಅಷ್ಟಾಗಿ ಬಾರದ್ದರಿಂದ ಈರುಳ್ಳಿ ಬೆಲೆ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ವಿಪರೀತ ಮಂಜಿನಿಂದಾಗಿ ಈರುಳ್ಳಿ ಬೆಳೆಗಾರರು ಸಸಿ ಮಾಡಲು ಹಾಕಿದ್ದ ಉಳ್ಳಿ ಅಗಿ (ಈರುಳ್ಳಿ ಸಸಿ ಅಥವಾ ಈರುಳ್ಳಿ ತೆರ​ವು) ಕರಗಿ ಹೋಗುತ್ತಿವೆ. ಇದರಿಂದಾಗಿ ಉಳ್ಳಿ ಅಗಿ ದರ ಕೂಡ ಜಾಸ್ತಿಯಾಗಿದೆ. ಬೇಸಿಗೆ ಕಾಲದಲ್ಲಿ ಈರುಳ್ಳಿ ಬೆಳೆಯುವ ರೈತರು ದೀಪಾವಳಿ ಪಾಡ್ಯ ದಿನದಿಂದ ಸಸಿ ಮಾಡಲು ಸಿದ್ಧತೆ ಮಾಡುತ್ತಾರೆ. ಈ ಸಸಿಗಳನ್ನು ಎರಡು ತಿಂಗಳ ನಂತರ ನಾಟಿ ಮಾಡುತ್ತಾರೆ. ಇದೀಗ ಹವಾಮಾನ ವೈಪರೀತ್ಯದಿಂದಾಗಿ ಮತ್ತೆ ನಾಟಿ ಮಾಡಲು ಬೀಜಕ್ಕಾಗಿ ರೈತರು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಈರುಳ್ಳಿ ಬೀಜ (ರೈತರು ತಯಾ​ರಿ​ಸಿ​ದ್ದು) ಪ್ರತಿ ಕೆಜಿಗೆ 500 ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಈಗ 600 ರಿಂದ 800 ದರದಲ್ಲಿ ಮಾರಾಟವಾಗುತ್ತಿದೆ. ಕಂಪನಿ ಬೀಜ​ವಾ​ದರೆ ಪ್ರತಿ ಕೆಜಿಗೆ 1500-2000 ದರ​ವಿದೆ. ಉಳ್ಳಿ ಅಗಿಯ ದರ​ವೂ ಸಹಿತ ಹೆಚ್ಚಾ​ಗಿದೆ. ಈ ಬಾರಿ ಈರುಳ್ಳಿ ಬೆಲೆ ಹೆಚ್ಚಾಗಿರುವುದನ್ನು ನೋಡಿ ಅನೇಕ ರೈತರು ಈ ಸಲ ಹೆಚ್ಚು ಈರುಳ್ಳಿ ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಉಳ್ಳಿ ಅಗಿ ಸಿಗುತ್ತಿಲ್ಲ. ಉಳ್ಳಿ ಅಗಿ ಇದ್ದವರಿಗೆ ಲಾಭವಾಗುತ್ತಿದೆ.

ಈರುಳ್ಳಿ ಸಸಿ ತಯಾರಿಸಬೇಕಾದರೆ ಎರಡು ತಿಂಗಳು ಬೇಕಾಗುತ್ತದೆ. ಈರುಳ್ಳಿ ನಾಟಿಯಾದ ನಂತರ ಮೂರುವರೆ ತಿಂಗಳದಿಂದ ನಾಲ್ಕೂವರೆ ತಿಂಗಳಿಗೆ ಕಟಾವಿಗೆ ಬರುತ್ತದೆ. ಇದಕ್ಕೆ ಪೂರಕವಾದ ವಾತಾವರಣ ಇದ್ದರೆ ಈರುಳ್ಳಿ ಇಳುವರಿ ಚೆನ್ನಾಗಿ ಬರುತ್ತದೆ. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯ ಪರಿಣಾಮ ಬೀರಿದರೆ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ. ಈ ವರ್ಷದ ವಾತಾವರಣ ನೋಡಿದರೆ ಈರುಳ್ಳಿ ದರ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನ್ನ​ಲಾ​ಗು​ತ್ತಿದೆ.
ಬೇಸಿಗೆ ಕಾಲದಲ್ಲಿ ಈರುಳ್ಳಿ ಫಸಲು ಕಡಿಮೆ ಬರುವುದ​ರಿಂದ ಈರುಳ್ಳಿ ದರ ಇದೇ ರೀತಿ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈರುಳ್ಳಿ ಬೆಲೆ ಗಗನಕ್ಕೇರಿ​ದರೂ ರೈತರಿಗೆ ಲಾಭ ಸಿಕ್ಕಿಲ್ಲ. ಇದು ದಲ್ಲಾಳಿಗಳ ಪಾಲಾಗುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಈರುಳ್ಳಿ ಬೆಲೆ ಹೆಚ್ಚಾದ ಪರಿಣಾಮ ಈರುಳ್ಳಿ ಬೀಜದ ಕೊರತೆ ಇರುವುದ​ರಿಂದ ಬೇಸಿಗೆಯಲ್ಲಿ ಈರುಳ್ಳಿ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ನಮ್ಮ ಜಿಲ್ಲೆಯಲ್ಲೇ ಅತೀ ಹೆಚ್ಚು ಈರುಳ್ಳಿ ಬೆಳೆಯುವುದು ಮಸೂತಿ, ಮಲಘಾಣ, ತೆಲಗಿ, ರೋಣಿಹಾಳ, ಕೊಲ್ಹಾರ, ಬಳೂತಿ, ಮಟ್ಟೀಹಾಳದಲ್ಲಿ. ಈ ಭಾಗದಲ್ಲೂ ಕಡಿಮೆ ನಾಟಿ ಮಾಡಲಾಗಿದೆ ಎಂದು ಮಸೂತಿ ಗ್ರಾಮದ ಪ್ರಗತಿಪರ ರೈತ ಆನಂದ ಬಿಸ್ಟಗೊಂಡ ಅವರು ಹೇಳಿದ್ದಾರೆ.