ಬಾರದ ಮಳೆ: ಯಾದಗಿರಿಯಲ್ಲಿ ಅಳಿದುಳಿದ ಬೆಳೆ ಸಂರಕ್ಷಣೆಗೆ ರೈತರ ಹರಸಾಹಸ..!
ಬಾಡುತ್ತಿರುವ ಬೆಳೆ: ತಂಬಿಗೆಯಲ್ಲಿ ನೀರು ಹಾಕಿ ಬೆಳೆ ರಕ್ಷಣೆ ಯತ್ನ, ವಡಗೇರಾದ ಉಳ್ಳೇಸೂಗೂರು ತಾಂಡಾದಲ್ಲಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹರಿಸುವಿಕೆ, ವಡಗೇರಾದ ಕಮಲಾ ನಾಯ್ಕ್ ತಾಂಡಾದಲ್ಲಿ ಸ್ಪಿಂಕ್ಲರ್ ಬಳಸಿ ಬೆಳೆಗಳಿಗೆ ನೀರುಣಿಸುವ ಯತ್ನ.
ಯಾದಗಿರಿ(ಜು.16): ಬಾರದ ಮಳೆಯಿಂದಾಗಿ ರೈತಾಪಿ ವರ್ಗವನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ಮುಂಗಾರು ಕೊರತೆ ಮಧ್ಯೆಯೂ, ನಿರೀಕ್ಷಿತ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಈಗಲೂ ಮಳೆಯ ಕೊರತೆಯಿಂದ ಬಾಡುತ್ತಿರುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಅಳಿದುಳಿದ ಬೆಳೆಗಳ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಹೀಗಾಗಿ, ಬಾಡುತ್ತಿರುವ ಬೆಳೆಗಳಿಗೆ ಜೀವ ತುಂಬಲು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ತಾಂಡಾದಲ್ಲಿ ರೈತರು ಹತ್ತಿ ಬೆಳೆಗಳಿಗೆ ನೀರುಣಿಸಲು ತಂಬಿಗೆಯ ಮೂಲಕ ಸಾಲುಸಾಲಾಗಿ ನೀರು ಹಾಕುತ್ತಿದ್ದರೆ, ವಡಗೇರಾ ತಾಲೂಕಿನ ಉಳ್ಳೆಸೂಗೂರು ತಾಂಡಾದಲ್ಲಿ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸುವ ಯತ್ನಕ್ಕಿಳಿದರೆ, ಕಮಲಾನಾಯ್ಕ್ ತಾಂಡಾದಲ್ಲಿ ಸ್ಪಿಂಕ್ಲರ್ ಮೂಲಕ ನೀರು ಹರಿಸುವ ಹರಸಾಹಸ ನಡೆಸುತ್ತಿದ್ದಾರೆ.
ಆ್ಯಂಬುಲೆನ್ಸ್ನಲ್ಲೇ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ದೋರನಹಳ್ಳಿ ತಾಂಡಾದ ರೈತರು ಹತ್ತಿ ಬೆಳೆಗೆ ಕುಟುಂಬ ಸಮೇತ ಪ್ರತಿ ದಿನ ಮೂರು ಬಾರಿ ಬಕೆಟ್‌ಗಳಲ್ಲಿ ನೀರು ಸಂಗ್ರಹಿಸಿ, ತಂಬಿಗೆ ಮೂಲಕ ನೀರು ಹಾಕಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದು ಅನಿವಾರ‍್ಯ ಎನ್ನುತ್ತಾರೆ ರೈತರಾದ ಸಂಗಪ್ಪ ಹಾಗೂ ಸರಿತಾ. ಇತ್ತ, ವಡಗೇರಾ ತಾಲೂಕಿನ ಉಳ್ಳೆಸೂಗೂರಿನಲ್ಲಿ ಬಲದೇವನಾಯ್‌್ಕ ಅವರ ಜಮೀನಿನಲ್ಲಿ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. 24 ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ಉಳಿಸಿಕೊಳ್ಳುವ ಯತ್ನವಿದು. ಪ್ರತಿ ದಿನ 10ರಿಂದ 15 ಟ್ಯಾಂಕರ್ ನೀರು ಹರಿಸಲಾಗುತ್ತಿದೆ. ಹಾಗೆಯೇ, ಕಮಲಾನಾಯ್ಕ್ ತಾಂಡಾದಲ್ಲಿ ಸ್ಪಿಂಕ್ಲರ್ ಮೂಲಕ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಅಲ್ಲಿನ ವಿವಿಧೆಡೆಯ ರೈತರು ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಬೆಳೆ ಬೆಳೆಯುತ್ತಿದ್ದಾರೆ.
ಮಳೆ ಕೊರತೆ; ಬಿತ್ತನೆಗೆ ಹಿನ್ನೆಡೆ:
ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಈವರೆಗೆ (ಜು.14) 198 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 191 ಮಿ.ಮೀ. ಮಳೆ ಸುರಿದಿದೆ. ಜೂನ್‌ನಿಂದ ಈವರೆಗೆ (ಜು.14) 141 ಮಿ.ಮೀ. ಮಳೆ ಆಗಬೇಕಿತ್ತಾದರೂ 101 ಮಿ.ಮೀ. ಆಗಿದೆ. ಶೇ.28ರಷ್ಟುಮಳೆಯ ಕೊರತೆ ಆಗಿದೆ.
ಯಾದಗಿರಿ: ಮಳೆ ಕೊರತೆ, ಬರದ ಭೀತಿಯಲ್ಲಿ ಸುರಪುರ ತಾಲೂಕು?
ಜಿಲ್ಲೆಯಲ್ಲಿ 4,01,631 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ತೀವ್ರ ಮಳೆಯ ಕೊರತೆಯಿಂದ ಈವರೆಗೆ ಕೇವಲ 1,33,925 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ.33ರಷ್ಟುಬಿತ್ತನೆ ಯಾದಗಿರಿ ಜಿಲ್ಲೆಯಲ್ಲಾಗಿದೆ. 1,86,297 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಆಗಬೇಕಿತ್ತು. ಆದರೆ, 84,964 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಜಿಲ್ಲೆಯಲ್ಲಿ ಇದು ಪ್ರಮುಖ ವಾಣಿಜ್ಯ ಬೆಳೆ. 81,750 ಹೆ. ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಬೇಕಿತ್ತು. 41,783 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. 18,694 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದ ಹೆಸರು ಬೆಳೆ ಕೇವಲ 5,825 ಹೆ. ಪ್ರದೇಶದಲ್ಲಿ ಆಗಿದೆ. ಮುಂಗಾರು ವೇಳೆ ರೈತರಿಗೆ ಇದು ಭಾರಿ ನಷ್ಟಮಾಡಿದೆ.
ಜಿಲ್ಲೆಯಲ್ಲಿ 4,01,631 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ತೀವ್ರ ಮಳೆಯ ಕೊರತೆಯಿಂದ ಈವರೆಗೆ ಕೇವಲ 1,33,925 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ.33ರಷ್ಟು ಬಿತ್ತನೆ ಯಾದಗಿರಿ ಜಿಲ್ಲೆಯಲ್ಲಾಗಿದೆ ಅಂತ ಯಾದಗಿರಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಆಬೀದ್ ತಿಳಿಸಿದ್ದಾರೆ.