Asianet Suvarna News Asianet Suvarna News

ಯಾದಗಿರಿ: ಮಳೆ ಕೊರತೆ, ಬರದ ಭೀತಿ​ಯಲ್ಲಿ ಸುರ​ಪು​ರ ತಾಲೂಕು?

ಜೂನ್‌ನಿಂದ ಜುಲೈ ಮೊದಲ ವಾರದಲ್ಲಿ 333 ಮಿಮೀ ಮಳೆ ಕೊರತೆ, 1,44,790.2 ಬಿತ್ತನೆ ಕ್ಷೇತ್ರದಲ್ಲಿ 1,284 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ. 

Surapura Taluk in Fear of Drought in Yadgir grg
Author
First Published Jul 12, 2023, 10:35 PM IST

ನಾಗರಾಜ್‌ ನ್ಯಾಮತಿ

ಸುರಪುರ(ಜು.12):  ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ 333 ಮಿಮೀ ಕಡಿಮೆ ಮಳೆಯಾಗಿದ್ದು, ಬಿತ್ತನೆಯಲ್ಲಿ ಕೊರತೆ, ಜನ-ಜಾನುವಾರುಗಳಿಗೆ ಕುಡಿವ ನೀರಿನ ಹಾಹಾಕಾರ ಉಂಟಾಗಲಿದೆ. ಸರಾಸರಿ ಮಳೆ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಸುರಪುರ ತಾಲೂಕು ಪಡೆದಿದೆ.

ಯಾವುದೇ ಪ್ರದೇಶವು ಸತತವಾಗಿ ಸರಾಸರಿ ಮಳೆ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತಿದ್ದರೆ ಬರಗಾಲವಾಗಿ ಮಾರ್ಪಡುತ್ತದೆ. ಇದು ಸಸ್ಯಗಳು ಮತ್ತು ಪ್ರಾಣಿಗಳ ಅಗತ್ಯತೆಗಳನ್ನು ಪೂರೈಸಲು ನೀರು ಸಾಕಾಗುವುದಿಲ್ಲ. ಅಸ್ಥಿರ ಹವಮಾನ ವೈಪರೀತ್ಯದಿಂದ ಜಲಕ್ಷಾಮಕ್ಕೆ ಕಾರಣವಾಗಿ ಜಲವಿಜ್ಞಾನದ ಬರಕ್ಕೆ ಕಾರಣವಾಗುತ್ತದೆ. ಇಂತಹ ಸ್ಥಿತಿ ಇರುವ ಸುರಪುರವನ್ನು ರೈತರ ಮತ್ತು ಸಾರ್ವಜನಿಕರ ಹಿತಕಾಪಾಡಲು ರಾಜ್ಯ ಸರಕಾರವನ್ನು ಬರಗಾಲ ತಾಲೂಕಾಗಿಸಬೇಕಿದೆ.

ಸುರಪುರ: ಉಪಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬರದ ಸಂಭವ ಹೆಚ್ಚು:

ಹವಾಮಾನ ವೈಪರೀತ್ಯದಿಂದಾಗಿ ಜೂನ್‌ ತಿಂಗಳಲ್ಲಿ ಮಳೆ ಬಾರದೆ ಹವಾಮಾನ ಬರ ಸಂಭವಿಸಿದೆ. ಇದು ಕೃಷಿ ಪ್ರದೇಶದಲ್ಲಿ ಬೆಳೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲವೂ ಸಾಧಾರಣ ಅಥವಾ ಸಾಮಾನ್ಯ ಮಳೆಯಿಂದ ಉಂಟಾಗುತ್ತದೆ. ಲಭ್ಯವಿರುವ ನೀರಿನ ಸಂಗ್ರಹವು ಸರಾಸರಿಗಿಂತ ಕಡಿಮೆಯಾಗಿದ್ದು, ಜಲಕ್ಷಾಮದ ಬರ ಎದುರಾಗುವ ಸಂಭವ ಹೆಚ್ಚಾಗಿದೆ.

ಮಳೆ ಕೊರತೆ:

ಮುಂಗಾರಿನ ಬೆಳೆ ಬಿತ್ತಲು ಸಾಧಾರಣ (ವಾಡಿಕೆ) ಮಳೆಗಿಂತ ಕಡಿಮೆಯಾಗಿದೆ. ಜೂನ್‌ ತಿಂಗಳ ಮೊದಲ ವಾರದಿಂದ ಜುಲೈ ಮೊದಲ ವಾರದವರೆಗೆ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ವಾಡಿಕೆ ಮಳೆ 513 ಮಿಮೀ ಮಳೆಯಾಗಬೇಕಿತ್ತು. ಪ್ರಸ್ತುತ 235 ಮಿಮೀ ಮಳೆಯಾಗಿದೆ. 333 ಮಿಮೀ ಮಳೆ ಕೊರತೆ ಉಂಟಾಗಿದೆ.

ಬಿತ್ತನೆ ಕ್ಷೇತ್ರ:

1,44,790.2 ಬಿತ್ತನೆ ಕ್ಷೇತ್ರದಲ್ಲಿ ಜುಲೈ ಮೊದಲ ವಾರದವರೆಗೂ 1284 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ.9 ರಷ್ಟುಬಿತ್ತನೆಯಾಗಿದ್ದು, 40 ವರ್ಷಗಳ ನಂತರ ಮೊದಲಬಾರಿಯಾಗಿದೆ. ತೃಣಧಾನ್ಯಗಳಾದ ಜೋಳ-155 ಹೆಕ್ಟೇರ್‌, ಮೆಕ್ಕೆಜೋಳ-135.38 ಹೆಕ್ಟೇರ್‌, ಸಜ್ಜೆ-10.646 ಹೆಕ್ಟೇರ್‌ ಗುರಿ ಹೊಂದಲಾಗಿದೆ. ಬಿತ್ತನೆ ಮಾತ್ರ ಶೂನ್ಯವಾಗಿದೆ. ದ್ವಿದಳ ಧಾನ್ಯ; ತೊಗರಿ-1346 ಹೆಕ್ಟೇರ್‌, ಹೆಸರು, ಹುರಳಿ, ಶೇಂಗಾ, ಸೂರ್ಯಕಾಂತಿ ಬಿತ್ತನೆ ಶೂನ್ಯ. ಹತ್ತಿ-573 ಹೆಕ್ಟೇರ್‌ ಬಿತ್ತನೆಯಾಗಿದೆ. ಒಟ್ಟು 1284 ಹೆಕ್ಟೇರ್‌ ಬಿತ್ತನೆಯಾಗಿದೆ.

ವಲಸೆ:

ಉತ್ತಮ ಮಳೆಯಾಗದ ಕಾರಣ ಕೃಷಿ ಚಟುವಟಿಕೆಗಳು ಕ್ಷೀಣಿಸಿವೆ. ಆದ್ದರಿಂದ ಜನರ ಕೈಗಳಿಗೆ ಕೆಲಸವಿಲ್ಲ. ಜೀವನೋಪಾಯಕ್ಕಾಗಿ ಕೆಲಸರಸಿ ನಗರಗಳತ್ತ ವಲಸೆ ಹೋಗುವ ಸಂಭವ ಹೆಚ್ಚಾಗಿದೆ.

ಮರಳುಗಾರಿಕೆ:

ತಾಲೂಕಿನಲ್ಲಿ ಕೃಷ್ಣೆ ಹರಿಯುತ್ತಿರುವುದರಿಂದ ಮರಳನ್ನು ಹೊತ್ತು ತರುತ್ತಿದೆ. ಮರಳಿದ್ದರೆ ನೀರು ಶುದ್ಧವಾಗುವುದಲ್ಲದೆ. ಅಂತರ್ಜಲ ಹೆಚ್ಚುತ್ತದೆ. ಆದರೆ, ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯಿಂದ ಅಂತರ್ಜಲ ಮಟ್ಟಕ್ಷೀಣಿಸುತ್ತಿದೆ. ನೀರು ಹಾವಿಯಾಗಿ ಮೋಡ ಸೇರಿ ಮತ್ತೆ ಮಳೆ ಸುರಿಯಬೇಕು. ಆದರೆ, ಇಲ್ಲಿ ಮರಳುಗಾರಿಕೆಯಿಂದ ನದಿ ಪಾತ್ರ ಅಗಲವಾಗುವುದಲ್ಲದೆ ಅಂತರ್ಜಲ ಮಾಯವಾಗುತ್ತದೆ. ಇದರಿಂದ ನೀರು ಮೋಡ ಸೇರುತ್ತಿಲ್ಲ. ಇದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅ​ಧಿಕಾರಿಗಳಿಗೆ ಕಾಣುತ್ತಿಲ್ಲವೇ? ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸುರಪುರ ಮತಕ್ಷೇತ್ರದಲ್ಲಿ ವಾಡಿಕೆ ಮಳೆ

ಸುರಪುರ ಹೋಬಳಿಯಲ್ಲಿ ವಾಡಿಕೆ ಮಳೆ 103 ಮಿಮೀ ಆಗಿದ್ದು 72 ಮಿಮೀ, 30 ಮಿಮೀ ಕೊರತೆ ಉಂಟಾಗಿದೆ. ಕಕ್ಕೇರಾ ಹೋಬಳಿಯಲ್ಲಿ ವಾಡಿಕೆ ಮಳೆ 82 ಮಿಮೀ, ಆಗಿದ್ದು 74 ಮಿಮೀ, ಕೊರತೆ-10 ಮಿಮೀ ಆಗಿದೆ. ಕೆಂಭಾವಿ ಹೋಬಳಿಯಲ್ಲಿ 85 ಮಿಮೀ ವಾಡಿಕೆ ಮಳೆ, 28 ಮಿಮೀ ಆಗಿದ್ದು, 66 ಮಿಮೀ ಕೊರತೆಯಾಗಿದೆ. ಹುಣಸಗಿ ಹೋಬಳಿಯಲ್ಲಿ ವಾಡಿಕೆ ಮಳೆ 74 ಮಿಮೀ, ಆಗಿದ್ದು 18 ಮಿಮೀ, 76 ಮಿಮೀ ಕೊರತೆಯಾಗಿದೆ. ಕೊಡೇಕಲ್‌ ಹೋಬಳಿಯಲ್ಲಿ 88 ಮಿಮೀ ವಾಡಿಕೆ ಮಳೆ, ಆಗಿದ್ದು 21 ಮಿಮೀ, ಕೊರತೆ 77 ಮಿಮೀ ಆಗಿದೆ. ಕಕ್ಕೇರಾ ಹೋಬಳಿಯಲ್ಲಿ 81 ಮಿಮೀ ವಾಡಿಕೆ ಮಳೆ, ಆಗಿದ್ದು 22 ಮಿಮೀ, ಕೊರತೆ 73 ಮಿಮೀ ಆಗಿದೆ. ಒಟ್ಟಿನಲ್ಲಿ 333 ಮಿಮೀ ಮಳೆ ಕೊರತೆಯಾಗಿದೆ.
ಈ ವರ್ಷ ಯಾಕೋ ಮುಂಗಾರು ಮಳೆ ಕೈಕೊಟ್ಟಿದೆ. ಇದರಿಂದ ಬಹುತೇಕ ಭಾಗದಲ್ಲಿ ಸರಿಯಾದ ಸಮಯದಲ್ಲಿ ಮಳೆಯಾಗಿಲ್ಲ. ಇದರಿಂದ ಬಿತ್ತನೆ ಆಗಿಲ್ಲ. ಜುಲೈನಲ್ಲಿ ಬಿತ್ತಿದರೆ ಬೆಳೆಗಳು ರೋಗಕ್ಕೆ ಒಳಗಾಗುತ್ತವೆ. ಆದ್ದರಿಂದ ರೈತರ ಹಿತ ಕಾಪಾಡಲು ಸರಕಾರ ಸುರಪುರವನ್ನು ಬರಗಾಲ ತಾಲೂಕಾಗಿ ಘೋಷಿಸಬೇಕು ಅಂತ ರೈತ ಮುಖಂಡ, ಹೋರಾಟಗಾರ ಮಾನಪ್ಪ ಕಟ್ಟಿಮನಿ ತಿಳಿಸಿದ್ದಾರೆ.  

ಶಹಾಪುರ: ಸಾವಿಗೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ಕಂಬ

ತೊಗರಿ, ಹತ್ತಿ, ಶೇಂಗಾ, ಸಜ್ಜೆ, ಬಿತ್ತಗೌಳಿ (ಬಿತ್ತುವ ಭತ್ತ) ಉತ್ತಮ ಮಳೆಯಾದರೆ ಬಿತ್ತನೆ ಮಾಡಬಹುದು. ಹಿರೇಪುಷ್ಯಾ, ಚಿಕ್ಕಪುಷ್ಯಾ ಮಳೆ ಕೈಕೊಟ್ಟರೆ ಅನ್ನದಾತರ ಬದುಕು ಕೆಳಮಟ್ಟಕ್ಕೆ ಕುಸಿಯುತ್ತದೆ. ಜೀವನೋಪಾಯಕ್ಕಾಗಿ ರೈತರು ಪಟ್ಟಣದತ್ತ ಕೆಲಸರಸಿ ಹೋಗೋದು ಖಚಿತ. ಇದನ್ನು ತಪ್ಪಿಸಲು ಸುರಪುರವನ್ನು ಬರಗಾಲ ತಾಲೂಕಾಗಿ ಘೋಷಿಸಬೇಕು ಅಂತ ಸುರಪುರ ರೈತಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಹೇಳಿದ್ದಾರೆ.  

ಬಿತ್ತನೆಗೆ ಮುಂಗಾರಿನಲ್ಲಿ 750 ಮಿಮೀ ಮಳೆ ಆಗಬೇಕು. ಆದರೆ, ಈ ಬಾರಿ 235 ಮಿಮೀ ಮಳೆಯಾಗಿದೆ. 333 ಮಿಮೀ ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ಮಳೆ ಬಂದರೆ ಹತ್ತಿ, ತೊಗರಿ, ಶೇಂಗಾ, ಭತ್ತ ಬಿತ್ತಬಹುದು. ರೋಗದ ಲಕ್ಷಣಗಳು ಹೆಚ್ಚಿರುತ್ತವೆ. ಕೃಷಿ ಇಲಾಖೆ ಸಂಪರ್ಕಿಸಿದರೆ ಬಿತ್ತನೆ ಹೇಗೆ ಮಾಡಬೇಕೆಂಬ ಮಾಹಿತಿ ನೀಡಲಾಗುತ್ತದೆ ಅಂತ ಸುರಪುರ ಸಹಾಯಕ ನಿರ್ದೇಶಕ ಗುರುನಾಥ ಎಂ.ಬಿ. ತಿಳಿಸಿದ್ದಾರೆ.  

Follow Us:
Download App:
  • android
  • ios