Asianet Suvarna News Asianet Suvarna News

ಕೈಕೊಟ್ಟ ಮಳೆ: ದಿನೇ ದಿನ ಬಿಗಡಾಯಿಸುತ್ತಿರುವ ಬರ..!

ರಾಯಚೂರು ಸೇರಿ ಮಾನ್ವಿ, ದೇವದುರ್ಗ, ಸಿರವಾರ, ಸಿಂಧನೂರು, ಮಸ್ಕಿ ಮತ್ತು ಲಿಂಗಸುಗೂರು ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಬಹುತೇಕ ಎಲ್ಲ ತಾಲೂಕು ಬರದ ಕರಿ ನೆರಳಿಗೆ ತುತ್ತಾಗಿದ್ದರೂ ಸಹ ಕೇಂದ್ರದಿಂದ ಬರ ಅಧ್ಯಯನ ತಂಡವು ಜಿಲ್ಲೆಗೆ ಭೇಟಿ ನೀಡದೇ ಇರುವುದು ಶೋಚನೀಯ ಸಂಗತಿಯಾಗಿದೆ.

Farmers Faces Problems For Drought in Raichur grg
Author
First Published Nov 3, 2023, 8:46 PM IST

ರಾಮಕೃಷ್ಣ ದಾಸರಿ

ರಾಯಚೂರು(ನ.03):  ಸಂಪೂರ್ಣವಾಗಿ ಕೈಕೊಟ್ಟ ಮುಂಗಾರು, ತುಂಗಭದ್ರಾ ಎಡದಂಡೆ ಹಾಗೂ ಕೃಷ್ಣಾ ಬಲದಂಡೆ ಕಾಲುವೆಗಳಿಗೆ ಸಮರ್ಪಕವಾಗಿ ಹರಿಯದ ನೀರಿನಿಂದಾಗಿ ರೈತರು ಬೆಳೆದಿರುವ ವಿವಿಧ ಬೆಳೆಗಳು ಒಣಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಕರೆಂಟ್ ಸರಬರಾಜಿನಲ್ಲಿಯೂ ತೀವ್ರ ವ್ಯತ್ಯಯ ಉಂಟಾಗುತ್ತಿದ್ದು, ದಿನೇ ದಿನ ಬಿಗಡಾಯಿಸುತ್ತಿರುವ ಬರ ಪರಿಸ್ಥಿತಿಯಿಂದಾಗಿ ಅನ್ನದಾತರ ಜೊತೆಗೆ ಸಾಮಾನ್ಯ ಜನರು ಸಂಕಷ್ಟ ಎದುರಿಸುವಂತಾಗಿದೆ.

ಜಿಲ್ಲೆ ರಾಯಚೂರು ಸೇರಿ ಮಾನ್ವಿ, ದೇವದುರ್ಗ, ಸಿರವಾರ, ಸಿಂಧನೂರು, ಮಸ್ಕಿ ಮತ್ತು ಲಿಂಗಸುಗೂರು ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಬಹುತೇಕ ಎಲ್ಲ ತಾಲೂಕು ಬರದ ಕರಿ ನೆರಳಿಗೆ ತುತ್ತಾಗಿದ್ದರೂ ಸಹ ಕೇಂದ್ರದಿಂದ ಬರ ಅಧ್ಯಯನ ತಂಡವು ಜಿಲ್ಲೆಗೆ ಭೇಟಿ ನೀಡದೇ ಇರುವುದು ಶೋಚನೀಯ ಸಂಗತಿಯಾಗಿದೆ.

ಜಾರಕಿಹೊಳಿ ಹೇಳಿಕೆ ರಾಜಕೀಯ ಪ್ರೇರಿತ: ಸಚಿವ ಶರಣ ಪ್ರಕಾಶ ಪಾಟೀಲ

ಪ್ರಸಕ್ತ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ ರೀತ್ಯ 438 ಮಿಮೀನಲ್ಲಿ 341 ಮಿಮೀ ಮಳೆಯಾಗಿದ್ದು ಶೇ.21ರಷ್ಟು ಮಳೆ ಕೊರತೆಯಿದೆ. ಬರ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸುಮಾರು 100 ಲಕ್ಷ ರು. ಮೊತ್ತದಲ್ಲಿ ಕುಡಿಯುವ ನೀರಿನ 78 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ 60 ಕೆಲಸಗಳು ಪೂರ್ಣಗೊಂಡಿವೆ. ಇನ್ನು 18 ಕಾಮಗಾರಿಗಳು ಪ್ರಗತಿಯಲ್ಲಿವೆ.

ಜಿಲ್ಲೆಯಲ್ಲಿ ಒಟ್ಟಾರೆ 256 ಜಲಾಶಯಗಳಿದ್ದು, ಇದರಲ್ಲಿ 131 ಭಾಗಶಃ ಹಾಗೂ 124ರನ್ನು ಪೂರ್ತಿ ಭರ್ತಿ ಮಾಡಿದ್ದು, 15 ಖಾಲಿಯಿವೆ. ಈ ಜಲಾಶಯಗಳ ಮೂಲಗಳಿಂದಲೆಯೇ 270 ಹಳ್ಳಿಗಳಿಗೆ ನೀರೊದಗಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್‌ ಸರಬರಾಜಿನಿಂದಾಗಿ ಸಕಾಲಕ್ಕೆ ನೀರು ಸರಬರಾಜಾಗುತ್ತಿಲ್ಲ, ಶುದ್ಧೀಕರಣ ಘಟಕಗಳು ಸರಿಯಾಗಿ ನಿರ್ವಹಣೆಯಾಗದ ಕಾರಣಕ್ಕೆ ಕುಡಿಯುವ ನೀರನ ಸಮಸ್ಯೆ ತೀವ್ರಗೊಳ್ಳುತ್ತಿದೆ.

ಜಿಲ್ಲೆಯಲ್ಲಿ 1,96,900 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ!

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 1,96,900 ಹೆಕ್ಟೇರ್‌ ಪ್ರದೇಶವು ಬೆಳೆ ಹಾನಿಗೀಡಾಗಿದೆ. ಅದರಲ್ಲಿ ಭತ್ತ 6388 ಹೆಕ್ಟೇರ್‌, ಜೋಳ 21215, ತೊಗರಿ 66882, ಸೂರ್ಯಕಾಂತಿ 2195 ಮತ್ತು ಮೆಕ್ಕೆ ಜೋಳ 45 ಮತ್ತು ಹತ್ತಿ 100265 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಗೀಡಾಗಿದೆ. ಇಷ್ಟೇ ಅಲ್ಲದೇ 7538 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ, ಈರುಳ್ಳಿ, ಟೊಮೆಟೋ, ಹೂವು ಸೇರಿ ಇತರೆ ತೋಟಗಾರಿಕೆ ಬೆಳೆಗಳ ಪೈಕಿ 635 ಹೆಕ್ಟೇರ್‌ ಪ್ರದೇಶದಲ್ಲಿ ಕಾಯಿಪಲ್ಲೆ ಬೆಳೆಗಳು ಹಾನಿಗೀಡಾಗಿವೆ. ಬರ ಹಿನ್ನೆಲೆಯಲ್ಲಿ ಸದ್ಯಕ್ಕೆ 5,58,259 ಮೆಟ್ರಿಕ್‌ ಟನ್‌ ಮೇವು ಲಭ್ಯವಿದ್ದು, ಇದು 29 ವಾರಗಳಿಗೆ ಬರಲಿದೆ.

ಇಂಜಿನಿಯರ್‌ಗಳ ಕಳ್ಳಾಟದಿಂದಾಗಿ ಸಾವಿರಾರು ಎಕರೆ ಬೆಳೆಹಾನಿ: ಕುಡಿಯಲು ಸಹ ನೀರು ಇಲ್ಲದೆ ರೈತರ ಗೋಳಾಟ!

ಆಸಕ್ತಿ ತೋರುತ್ತಿಲ್ಲ:

ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಹಿಂಗಾರು ಬಿತ್ತನೆಗೂ ಹಿನ್ನಡೆ ಉಂಟಾಗಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ 75326 ಹಕ್ಟೇರ್‌ ಪ್ರದೇಶದಲ್ಲಿ 46746 ಹೆಕ್ಟರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಮಾಡಿದ್ದು ಶೇ.61ರಷ್ಟು ಪ್ರಗತಿಯಾಗಿದೆ. ಅದೇ ರೀತಿ ಒಟ್ಟು 66205 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಕೇವಲ 14494 ಹೆಕ್ಟೇರ್‌ ಬಿತ್ತನೆಯಾಗಿದ್ದು ಕೇವಲ ಶೇ.21ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 141531 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ 61240 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ.44 ರಷ್ಟು ಮಾತ್ರ ಪ್ರಗತಿಯಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ಹಿಂಗಾರು ಗುರಿಯ ಪ್ರಮಾಣವು ಶೇ.90ರಷ್ಟು ಆಗುತ್ತಿತ್ತು. ಈ ಸಲ ಬರ ಹಿನ್ನೆಲೆಯಲ್ಲಿ

ರೈತರು ಬಿತ್ತನೆಗೆ ಆಸಕ್ತಿ ತೋರುತ್ತಿಲ್ಲ.

ಜಿಲ್ಲೆಯಲ್ಲಿ ಬರ ನಿರ್ವಹಣೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ವಾರದಲ್ಲಿಯೇ ಕೆಳಭಾದ ರೈತರ ಜಮೀನು ಸೇರಿ ಕುಡಿಯುವ ನೀರನ್ನು ತಲುಪಿಸಲಾಗುವುದು. ಅದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಅಗತ್ಯ ಪರಹಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. 

Follow Us:
Download App:
  • android
  • ios