ಗೌಡರ ಕುಟುಂಬದಿಂದ ಆಚೆ ಬರಲು ಒಕ್ಕಲಿಗ ಸಮುದಾಯ ತೀರ್ಮಾನಿಸಿದೆ: ಯೋಗೇಶ್ವ‌ರ್

ದೇವೇಗೌಡರಿಗೆ ವಯಸ್ಸು ಆಗಿರುವ ಹಿನ್ನೆಲೆಯಲ್ಲಿ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಜೆಡಿಎಸ್ ಗೆ ಪರ್ಯಾಯ ನಾಯಕತ್ವ ಇಲ್ಲ, ಅದೊಂದು ಕುಟುಂಬದ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 19 ಸೀಟು ಪಡೆದುಕೊಂಡಿತ್ತು: ನೂತನ ಶಾಸಕ ಸಿ.ಪಿ.ಯೋಗೇಶ್ವರ್ 

vokkaligacommunity decided to move away from the Former PM HD Devegowda's family Says CP Yogeshwar grg

ಚನ್ನಪಟ್ಟಣ(ನ.26):  ದೇವೇಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಒಕ್ಕಲಿಗ ಸಮುದಾಯ ತೀರ್ಮಾನ ಮಾಡಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದಿಂದಲೇ 'ಇದು ಗೊತ್ತಾಗುತ್ತಿದೆ. ಅವರ ಕುಟುಂಬದಲ್ಲಿ ನಡೆದಿರೋ ಹಲವು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ ಎಂದು ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು. 

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ದೇವೇಗೌಡರಿಗೆ ವಯಸ್ಸು ಆಗಿರುವ ಹಿನ್ನೆಲೆಯಲ್ಲಿ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಜೆಡಿಎಸ್ ಗೆ ಪರ್ಯಾಯ ನಾಯಕತ್ವ ಇಲ್ಲ, ಅದೊಂದು ಕುಟುಂಬದ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 19 ಸೀಟು ಪಡೆದುಕೊಂಡಿತ್ತು. ಆದರೆ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸಿರುವುದು ಸ್ಪಷ್ಟ ಎಂದರು. 

ಚನ್ನಪಟ್ಟಣ ಬೈಎಲೆಕ್ಷನ್‌: ಡಿಕೆಶಿಗೆ ಹೆಚ್ಚಿದ ಪ್ರಾಬಲ್ಯ, ಕುಮಾರಸ್ವಾಮಿಗೆ ಭಾರೀ ಹಿನ್ನಡೆ!

ಇಡೀ ಕುಟುಂಬವೇ ಬಂದು ಚನ್ನಪಟ್ಟಣದಲ್ಲಿ ನಿಂತು ಹೋರಾಟ ಮಾಡಿದರೂ ಗೆಲ್ಲಲು ಸಾಧ್ಯ ಆಗಲಿಲ್ಲ. ತಮ್ಮ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದ ಮೇಲೆ ಕೇಂದ್ರ ಸಚಿವರಾಗಿ ಏನು ಪ್ರಯೋಜನ ಎಂದು ಇದೇ ವೇಳೆ ಕುಮಾರಸ್ವಾಮಿಗೆ ಟಾಂಗ್ ನೀಡಿದರು. 

ಜೆಡಿಎಸ್‌ನವರು ಸೋತು ಸುಣ್ಣ ಆಗಿದ್ದಾರೆ. ಕುರುಕ್ಷೇತ್ರದ ಕಥೆಯಲ್ಲಿ ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗಿಟ್ಟೆ ಅಂತ ಬಬ್ರುವಾಹನ ಹೇಳುತ್ತಾ ನಲ್ವಾ ಅದೇ ಪರಿಸ್ಥಿತಿ ಅವರದು ಆಗಿದೆ. ಕುಮಾರಸ್ವಾಮಿ ಯದು ಭಂಡತನ, ಅವರಿಗೆ ಇದ್ರೆ ಈ ಊರು, ಬಿಟ್ರೆ ಇನ್ನೊಂದು ಊರು ಎಂದು ವ್ಯಂಗ್ಯವಾಡಿದರು. 

ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಪಕ್ಷದಿಂದ ಆಚೆ ತಳ್ಳಲ್ಪಟ್ಟವನು ನಾನು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಹೊರಗೆ ಬಂದಿದ್ದೇನೆ ಎಂದು ಸಿ.ಪಿ.ಯೋಗೇಶ್ವ‌ರ್ ಆರೋಪಿಸಿದರು. 
ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡುತ್ತೇನೆ ಎಂದು ಹೇಳಿದ್ದೇನೆ. ನಾನು ಪಕ್ಕಾ ಕಾಂಗ್ರೆಸ್ಸಿಗ, ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಶಾಸಕರ ಕರೆತರುವೆ: 'ಕೈ'ಲ್ಲಿ ಯೋಗಿ ಹೇಳಿಕೆ ಸಂಚಲನ, ಇಂಥ ದುರ್ಗತಿ ನಮಗೆ ಬಂದಿಲ್ಲ ಎಂದ ಕಾಂಗ್ರೆಸ್‌ ನಾಯಕರು

ಬೆಂಗಳೂರು: 'ಪಕ್ಷ ಟಾಸ್ಕ್ ನೀಡಿದರೆ ಜೆಡಿಎಸ್ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ತರುತ್ತೇನೆ' ಎಂಬ ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ತೀವ್ರ ಗುಲ್ಲೆಬ್ಬಿಸಿದ್ದು, 'ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಅದರ ಅಗತ್ಯವೂ ನಮಗಿಲ್ಲ' ಎಂದು ಬಹುತೇಕ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. 

ಚನ್ನಪಟ್ಟಣ ಉಪಚುನಾವಣೆ: ರೇಷ್ಮೆ ನಾಡಲ್ಲಿ ದಳಪತಿ ಭದ್ರಕೋಟೆ ಧ್ವಂಸ!

ಕಾಂಗ್ರೆಸ್ ಪಕ ತಮಗೆ ಟಾಸ್ಕ್ ನೀಡಿದರೆ ಒಂದು ತಿಂಗಳೊಳಗೆ ಜೆಡಿಎಸ್ ವಿಭಜಿಸಿ ಕಾಂಗ್ರೆಸ್‌ನೊಳಗೆ ಸೇರುವಂತೆ ಮಾಡುತ್ತೇನೆ. ಆ ಸಾಮರ್ಥ ತಮಗಿದೆ ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು, ಜೆಡಿಎಸ್ ಶಾಸಕರು ಕಾಂಗ್ರೆಸ್ ಬರುವ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಲ್ಲ ಎಂದಿದ್ದಾರೆ. ಇನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕಾಂಗ್ರೆಸ್ ಅಂತಹ ಆಗತ್ಯವಿಲ್ಲ ಎಂದು ಹೇಳಿದ್ದರೆ ನಮಗೆ ಅಂತಹ ದುರ್ಗತಿ ಬಂದಿಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನಿಷ್ಟುರವಾಗಿ ಮಾತನಾಡಿದ್ದಾರೆ. 

ಜಿ.ಟಿ.  ದೇವೇಗೌಡರಿಗೆ ಕರೆದಿದ್ದೆ- ಡಿಕೆಶಿ: 

ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಕರೆತರುವ ಕುರಿತ ಯೋಗೇಶ್ವರ್ ಹೇಳಿಕೆ ಗೊತ್ತಿಲ್ಲ, ಜಿ.ಟಿ ದೇವೇಗೌಡ ಹಿರಿಯ ನಾಯಕರು. ಅವರ ಪಕ್ಷದ ಕೋ‌ರ್ಕಮಿಟಿ ಅಧ್ಯಕ್ಷರಾಗಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಒಮ್ಮೆ ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದರು.  ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ನೊಂದಿದ್ದಾರೆ ಎಂದರು. ಜೆಡಿಎಸ್ ನೊಂದ ಶಾಸಕರು ಕಾಂಗ್ರೆಸ್ ಸೇರುತ್ತಾರಾ ಎಂದು ಕೇಳಿದಾಗ, ಈ ವಿಚಾರವಾಗಿ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ ಎಂದಷ್ಟೇ ಹೇಳಿದರು. 

Latest Videos
Follow Us:
Download App:
  • android
  • ios