ಚಿತ್ರದುರ್ಗ: ಜಿಟಿ ಜಿಟಿ ಮಳೆಗೆ ದಾಳಿಂಬೆ ಬೆಳೆಗೆ ಹಾನಿ, ಕಂಗಾಲಾದ ಅನ್ನದಾತ..!

15 ರಿಂದ 20 ಲಕ್ಷ ಖರ್ಚು ಮಾಡಿ 6 ಎಕರೆಯಲ್ಲಿ ದಾಳಿಂಬೆ ಬೆಳದಿದ್ದ ಹಿರೆಕಬ್ಬಿಗೆರೆ ರೈತ ನಾಗರಾಜ್ ಕಂಗಾಲು

Farmers Faces Problems Due to Crop Loss in Chitradurga grg

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಜು.19):  ನಿರಂತರವಾಗಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಕೋಟೆನಾಡಿನ ಅನ್ನದಾತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲಂತೂ ಸಾಲ ಸೂಲ ಮಾಡಿ ಆರು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದ ರೈತನ ಪಾಡು ಹೇಳತೀರದು. ಶೀತ ಹಾಗೂ ಜಿಟಿ ಜಿಟಿ ಮಳೆಗೆ ಸುಟ್ಟು ರೋಗ ಬಂದು ನೆಲಕ್ಕುರುಳಿ ನಾಶವಾಗ್ತಿವೆ ದಾಳಿಂಬೆ ಬೆಳೆ.

ಜಿಲ್ಲೆಯ ಹಿರೆಕಬ್ಬಿಗೆರೆ ಗ್ರಾಮದ ರೈತ ನಾಗರಾಜ್ ಜಮೀನಿನಲ್ಲಿ. ಸುಮಾರು 6 ಎಕರೆಯಲ್ಲಿ ಸಾಲ  ಸೂಲ ಮಾಡಿ 15 ರಿಂದ 20 ಲಕ್ಷ ಖರ್ಚು ಮಾಡಿ ದಾಳಿಂಬೆ ಬೆಳೆ ಹಾಕಿದ್ದ ರೈತನಿಗೆ, ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಸಂಕಷ್ಟಕ್ಕೆ ತಂದಿದೆ. ಅತಿಯಾದ ಶೀತದಿಂದ ಬೆಳೆದಿರೋ ದಾಳಿಂಬೆ ಹಣ್ಣುಗಳು ಗಿಡಗಳಿಂದ ನೆಲಕ್ಕುರುಳಿ ಜಮೀನಿನಲ್ಲಿಯೇ ಕೊಳೆತ್ತಿರೋದಕ್ಕೆ ರೈತ ಕಣ್ಣೀರು ಹಾಕುವ ಪರಿಸ್ತಿತಿ ಬಂದಿದೆ. ಇತ್ತು ಬ್ಯಾಂಕ್, ಫೈನಾನ್ಸ್ ಗಳಲ್ಲಿ ಲಕ್ಷಾಂತರ ಸಾಲ ಮಾಡಿ ಜಮೀನಿಗೆ ತಂದು ಹಾಕಿದ್ರೆ ಹಾಳಾದ ಮಳೆ‌ ಮಾತ್ರ  ರೈತರನ್ನು ಕಷ್ಟದ ಕೂಪಕ್ಕೆ ತಳ್ಳುತ್ತಿದೆ. ಹೀಗಾಗಿ ರೈತರು ಜಮೀನು ನಂಬಿ ಬದುಕೋದಕ್ಕೆ ಭಯ ಪಡುವ ಪರಿಸ್ತಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಶೀಲನೆ ನಡೆಸಲಿ ಎಂಬುದು ರೈತನ ಅಳಲಾಗಿದೆ.

ಡಿಎಪಿ ರಸಗೊಬ್ಬರ ಕೊರತೆ: ಅನ್ನದಾತರ ಪರದಾಟ

ಇನ್ನು ಜಮೀನಿನಲ್ಲಿಯೇ ಕೊಳೆತು ಬೀಳ್ತಿರೋ ದಾಳಿಂಬೆಯನ್ನು ಕಣ್ಣಿಂದ ನೋಡಲಾರದೇ ಬಂದಷ್ಟು ಬರಲಿ ಎಂದು ರೈತ ಕೂಲಿ ಕಾರ್ಮಿಕರಿಗೆ ಜಿಟಿ ಜಿಟಿ ಮಳೆಯಲ್ಲೇ ಡಬಲ್ ಕೂಲಿ ಕೊಟ್ಟು ಕೆಲಸ ಮಾಡಿಸುತ್ತಿದ್ದಾನೆ. ಈ ಬಾರಿಯಾದ್ರು ದಾಳಿಂಬೆ ಬೆಳೆ ಬರುತ್ತೆ ಇರುವ ಸಾಲವಾದ್ರು ತೀರಿಸಿಕೊಂಡು ನೆಮ್ಮದಿಯಾಗಿ ಇರಬಹುದು ಎಂದು ಕನಸು ಕಂಡಿದ್ದ ರೈತ ಮಾರುತಿ, ಹಾಗೂ ನಾಗರಾಜ್ ಬಾಳಲ್ಲಿ ನಿರಂತರ ಜಿಟಿ ಜಿಟಿ ಮಳೆ ಯಮಸ್ವರೂಪಿಯಾಗಿ ಬಂದಿದ್ದು ದುರಂತವೇ ಸರಿ. ಇನ್ನೂ ಈ ಕುರಿತು ಅಧಿಕಾರಿಗಳನ್ನ ವಿಚಾರಿಸಿದ್ರೆ, ಸದ್ಯ ಜಿಲ್ಲೆಯಲ್ಲಿ ಆಗ್ತಿರುವ ಜಿಟಿ ಜಿಟಿ ಮಳೆಗೆ ಶೀಲದಿಂದ ದಾಳಿಂಬೆ ಬೆಳೆಯು ಕೊಳೆತು ನಾಶವಾಗ್ತಿವೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು, ನಂತರ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸವಿತಾ ಭರವಸೆ ನೀಡಿದರು.

ಒಟ್ಟಾರೆಯಾಗಿ ಈ ಬಾರಿಯಾದ್ರು ಅಲ್ಪ ಸ್ವಲ್ಪ ಲಾಭ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ದಾಳಿಂಬೆ ಬೆಳೆ ಹಾಕಿದ್ದ ರೈತನಿಗೆ ಅಕಾಲಿಕ ಜಿಟಿ ಜಿಟಿ ಮಳೆ ಸಂಕಷ್ಟಕ್ಕೆ ತಳ್ಳಿರೋದು ರೈತನಿಗೆ ಸಾಕಷ್ಟು ನಷ್ಟ ತಂದಿದೆ‌. ಇದೇ ರೀತಿ ಜಿಲ್ಲೆಯಾದ್ಯಂತ ಅನೇಕ ರೈತರಿಗೆ ನಷ್ಟ ತಂದಿದ್ದು, ಕೂಡಲೇ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕಿದೆ.
 

Latest Videos
Follow Us:
Download App:
  • android
  • ios