ತೊಗರಿ ಕಣಜ ಕಲಬುರಗಿಗೆ ಲಗ್ಗೆ ಇಟ್ಟ ಡ್ರ್ಯಾಗನ್ ಫ್ರೂಟ್ ಬೇಸಾಯ: ರೈತರಿಗೆ ಲಕ್ಷ ಲಕ್ಷ ಆದಾಯ..!
ಕಲಬುರಗಿ ರೈತರ ಗಮನ ಸೆಳೆಯುತ್ತಿದೆ ಡ್ರ್ಯಾಗನ್ ಫ್ರೂಟ್ ಕೃಷಿ
ಶೇಷಮೂರ್ತಿ ಅವಧಾನಿ
ಕಲಬುರಗಿ(ಜು.30): ಡ್ರ್ಯಾಗನ್ ಫ್ರೂಟ್ ನಮ್ಮ ಪ್ರದೇಶದ ಹಣ್ಣಂತೂ ಅಲ್ಲ. ಅಮೇರಿಕಾ, ಥೈಲ್ಯಾಂಡ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣಿನ ಬೇಸಾಯ ಇದೀಗ ತೊಗರಿ ಕಣಜದ ರೈತರನ್ನು ಸೆಳೆಯುತ್ತಿದೆ. ಆಳಂದ, ಕಲಬುರಗಿ ತಾಲೂಕುಗಳಲ್ಲಿ ಈಗಾಗಲೇ ರೈತರು ಕೆಲವರು ಡ್ರ್ಯಾಗನ್ ಹಣ್ಣಿನ ಬೇಸಾಯಕ್ಕೆ ಮುಂದಾಗಿದ್ದಾರೆ. ಆಳಂದ ತಾಲೂಕಿನ ಧುತ್ತರಗಾಂವ್ ಗುಡ್ಡದ ಮೇಲಿರುವ, ಕಲ್ಲು- ಕೆಂಪು ಮಣ್ಣಿರೋ ತಮ್ಮ 2 ಎಕರೆ ಹೊಲದಲ್ಲಿ ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ನೆಟ್ಟು ರೈತ ಬಂಗಾರೆಪ್ಪ ಆರಂಭಿಸಿರುವ ಹೊಸ ಹಣ್ಣಿನ ಬೇಸಾಯ ಜಿಲ್ಲೆಯ ರೈತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ರಿಕ್ಕಿನ್ ಆಲೂರ್, ಭೂಸನೂರ್, ಧುತ್ತರಗಾಂವ್, ಕಲಬುರಗಿ, ಭೋಸ್ಗಾ ಇಲ್ಲೆಲ್ಲಾ 25 ಎಕರೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ ಸಾಗಿದೆ.
ನಿರ್ವಹಣೆ ಇಲ್ಲ, ಆದಾಯವೇ ಎಲ್ಲಾ:
ಕಳೆದ 4 ವರ್ಷದಿಂದ ಡ್ರ್ಯಾಗನ್ ಫ್ರೂಟ್ ಬೇಸಾಯ ಮಾಡುತ್ತಿರೋ ಆಳಂದ ತಾಲೂಕಿನ ಧುತ್ತರಗಾಂವ್ ಸಣ್ಣರೈತ ಬಂಗಾರೆಪ್ಪ ವಾರ್ಷಿಕ 3 ಸಾರಿ ಇಳುವರಿ ಪಡೆಯೋದಾಗಿ ಹೇಳುತ್ತಾನೆ. ಜೂನ್‌ನಿಂದ ಶುರುವಾಗೋ ಸೀಸನ್ ಹಾಗೇ ವರ್ಷದಲ್ಲಿ 3 ಬಾರಿ ಬಂದು ಹೋಗುತ್ತದೆ. ಎಕರೆಗೆ 1,500ರಂತೆ 3 ಸಾವಿರದಷ್ಟುಗಿಡಗಳನ್ನು ನೆಟ್ಟಿರುವೆ, ಪ್ರತಿ ಗಿಡಕ್ಕೆ 60ರಿಂದ 70 ಹಣ್ಣುಗಳಂತೆ 7ರಿಂದ 8 ಕ್ವಿಂಟಲ್ ಇಳುವರಿ, ಪ್ರತಿ ಕೆಜಿಗೆ 100 ರು ನಂತೆ ಕಲಬುರಗಿಯಲ್ಲೇ ಮಾರುಕಟ್ಟೆಯೂ ಇದೆ ಎನ್ನುವ ಬಂಗಾರೆಪ್ಪ ತನ್ನ ಬೇಸಾಯದ ವೆಚ್ಚವೆಲ್ಲ ಕೂಡಿ ಕಳೆದು ವಾರ್ಷಿಕ 3ರಿಂದ 5 ಲಕ್ಷ ಲಾಭ ಪಡೆಯುತ್ತಿದ್ದಾನೆ.
ಕಲಬುರಗಿ: ಕೋಳಿ ಎಸೆದು ಮರಗಮ್ಮ ದೇವಿಗೆ ಹರಕೆ ತೀರಿಸಿದ ಭಕ್ತರು, ಜಾತ್ರೆಗೆ ಹರಿದುಬಂದ ಜನಸಾಗರ
‘ಕನ್ನಡಪ್ರಭ’ ಈ ರೈತನ ಡ್ರ್ಯಾಗನ್ ಹಣ್ಣಿನ ಹೊಲಕ್ಕೆ ಭೇಟಿ ನೀಡಿದಾಗ ಹೊಲದಲ್ಲೆಲ್ಲಾ ನಳನಳಿಸುತ್ತಿದ್ದ ಹಣ್ಣಿನ ಮರಗಳು, ಅವುಗಳ ತುಂಬೆಲ್ಲಾ ಹೂವು ನೇತಾಡುತ್ತಿದ್ದವು. ಹೊಲದ ತುಂಬೆಲ್ಲಾ ಗುಂಡು ಕಲ್ಲುಗಳದ್ದೇ ರಾಶಿ, ಸಾಧಾರಣ ಮಣ್ಣಿದ್ದರೂ ಹಣ್ಣಿನ ಬೇಸಾಯ ವೈನಾಗಿದೆ, ಈ ತರಹ ಭೂಮಿ ಡ್ರ್ಯಾಗನ್‌ಗೆ ಅಚ್ಚುಮೆಚ್ಚು ಎಂದು ರೈತ ಬಂಗಾರೆಪ್ಪ ಹೇಳಿದ.
ಬಾವಿಯಿಂದ ಹನಿ ನೀರಾವರಿ ಮಾಡಿದ್ದು ವಾರಕ್ಕೊಮ್ಮೆ ನೀರು ಕೊಟ್ಟರೂ ಸಾಕು, ಲಘು ಪೋಷಕಾಂಶ ಕೊಡಬೇಕು. ಇನ್ಯಾವ ವೆಚ್ಚ, ನಿರ್ವಹಮೆ ಇದಕ್ಕೆ ಬೇಕಾಗಿಲ್ಲ. ಗಿಡ ಸಿಮೆಂಟ್ ಕಂಬ ಹತ್ತಿದ ಮೇಲೆ ಬಾಗಿಸಿದರೆ ಸಾಕು, ಬೇರಾವ ನಿರ್ವಹಣೆ ಸಹ ಬೇಕಿಲ್ಲ, ರೋಗ, ಕೀಟಬಾಧೆಯೂ ಇದಕ್ಕಿಲ್ಲ. ಸಸಿ ನಾಟಿ ಮಾಡಿದ 18 ತಿಂಗಳ ನಂತರ ಮೊದಲ ಇಳುವರಿ ಬರುತ್ತದೆ. ಎಕರೆಗೆ 2 ಲಕ್ಷದಷ್ಟು ವೆಚ್ಚ, ಒಮ್ಮೆ ಹೂಡಿಕೆ ಮಾಡಿದರೆ ತೀರಿತು, ಮುಂದೆ ಯಾವುದೇ ಖರ್ಚಿಲ್ಲದೆಯೇ ಹಣ್ಣುಗಳು ಕೈ ಸೇರುತ್ತವೆ. ಕಳೆ ತೆಗೆಯುತ್ತ, ಸರಿಯಾಗಿ ನೀರು ಬಿಡುತ್ತ ನಿಗಾ ವಹಿಸಿದರೆ ಸಾಕು ಶೂನ್ಯ ನಿರ್ವಹಣೆಯಲ್ಲೇ ಲಕ್ಷ ಲಕ್ಷ ಆದಾಯ ನಿಶ್ಚಿತ ಎನ್ನುತ್ತಾನೆ ಬಂಗಾರೆಪ್ಪ.
ತೊಗರಿ ಬೆಳೆಯುವ ಕಲಬುರಗಿ ರೈತರು ಬಂಪರ್ ಬೆಳೆ ಬಂದರೂ ಬೆಲೆಗಾಗಿ ಮುಗಿಲು ನೋಡೋದಂತೂ ತಪ್ಪಿಲ್ಲ, ಇದರಿಂದಾಗಿ ಬೇಸತ್ತಿರುವ ರೈತರು ಕೆಲವರು ತೊಗರಿಯಂತಹ ಸಾಂಪ್ರದಾಯಿಕ ಕೃಷಿಯಿಂದ ದೂರ ಸರಿಯುತ್ತ ನಿಧಾನಕ್ಕೆ ಡ್ರಾಗನ್ ಫ್ರೂಟ್ ಬೇಸಾಯದತ್ತ ವಾಲುತ್ತಿದ್ದಾರೆ. ಅದರಲ್ಲೂ ಕಲ್ಲು, ಕೆಂಪು ಮಿಶ್ರಿತ ಮಣ್ಣಿರೋ ಕಾರಣಕ್ಕೆ ಹೊಲಗದ್ದೆ ಬೀಳು ಬಿದ್ದಿರೋ ರೈತರಂತೂ ಡ್ರ್ಯಾಗನ್ ಹಣ್ಣು ಬೆಳೆಯೋ ಕಾತರದಲ್ಲಿದ್ದಾರೆ.
ಬಸವಸಾಗರ ಭರ್ತಿಯಾದ್ರು ಕಾಲುವೆಗಿಲ್ಲ ನೀರು, ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತಾಪಿ ವರ್ಗ
ನಿಗದಿತ ಮಾನದಂಡಗಳ ಪ್ರಕಾರ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಸಿದರೆ ಬಂಪರ್ ಗಳಿಕೆ ನಿಶ್ಚಿತ. 1 ಎಕರೆ ಜಮೀನಿನಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೇ ಆದಾಯ ಪಡೆಯಬಹುದು. ಆರಂಭದಲ್ಲಿ ಈ ಬೇಸಾಯಕ್ಕೆ 4 ರಿಂದ 5 ಲಕ್ಷ ಖರ್ಚು ಮಾಡಬೇಕಾಗಬಹುದು. ನಂತರದಲ್ಲಿ ನಿರ್ವಹಣೆ ವೆಚ್ಚವೇ ಇರೋದಿಲ್ಲ, ಹೆಚ್ಚು ಲಾಭ ಗಳಿಸಬಹುದು. ಕಡಗಂಚಿ ನಮ್ಮ ಹೊಲದಲ್ಲಿ ಡ್ರ್ಯಾಗನ್‌ಗಾಗಿ 5 ಎಕರೆ ಭೂಮಿ ಹದಗೊಳಿಸುತ್ತಿರುವೆ ಅಂತ ಭೂಸನೂರಿನ ಪ್ರಗತಿಪರ ರೈತ ಹಣಮಂತರಾವ ಭೂಸನೂರ್ ತಿಳಿಸಿದ್ದಾರೆ.
ಪುಣೆಯಲ್ಲಿನ ಬೇಸಾಯ ನೋಡಿ ಬಂದು ಧುತ್ತರಗಾಂವ್‌ನಲ್ಲಿ ಶುರು ಮಾಡಿದೆ. ಹಣ್ಣುಗಳನ್ನು ಪುಣೆ, ಸೊಲ್ಲಾಪೂರಕ್ಕೆ ಮಾರಾಟ ಮಾಡುತ್ತಿದ್ದೆ. ಇದೀಗ ಕಲಬುರಗಿಯೇ ಮಾರುಕಟ್ಟೆಯಾಗಿದೆ. ಗುಂಡಿ ತೋಡಿ, ಕಂಬ ನೆಟ್ಟು ಸಸಿ ನೆಡೋದಷ್ಟೇ ವೆಚ್ಚ, ಮೊದಲ ವರ್ಷದ ಆದಾಯ 2 ರಿಂದ 2. 5 ಲಕ್ಷ ರು ಬರುತ್ತದೆ, ಸಮಯ ಕಳೆದಂತೆಲ್ಲಾ ಇಳುವರಿ ಹಾಗೂ ಆದಾಯ ವೃದ್ಧಿಸುತ್ತದೆ ಅಂತ ಧುತ್ತರಗಾಂವ್ ಗ್ರಾಮದ ಡ್ರ್ಯಾಗನ್ ಹಣ್ಣು ಬೆಳೆಯೋ ರೈತ ಬಂಗಾರೆಪ್ಪ ಆಳಂದ ತಿಳಿಸಿದ್ದಾರೆ.