ಬಸವಸಾಗರ ಭರ್ತಿಯಾದ್ರು ಕಾಲುವೆಗಿಲ್ಲ ನೀರು, ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತಾಪಿ ವರ್ಗ
ಬಸವಸಾಗರ ಜಲಾಶಯ ಭರ್ತಿಯಾದ್ರು ಕಾಲುವೆಗಿಲ್ಲ ನೀರು, ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತಾಪಿ ವರ್ಗ, ನೀರಾವರಿ ಸಲಹಾ ಸಮಿತಿ ಸಭೆಯತ್ತ ರೈತರ ಚಿತ್ತ..!
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ, (ಜುಲೈ.23): ಬಸವಸಾಗರ ಜಲಾಶಯ ಇದು ನಾಲ್ಕು ಜಿಲ್ಲೆಗಳ ಜೀವನಾಡಿ. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಭರ್ತಿಯಾಗಿದೆ. ಆದ್ರೆ ನಾಲ್ಕು ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ರೈತರಿಗೆ ಮಾತ್ರ ದೀಪದ ಬುಡಕ್ಕೆ ಕತ್ತಲು ಎಂಬಂತಾಗಿದೆ. ಯಾಕಂದ್ರೆ ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೇ ಆರಂಭವಾಗಿದೆ.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗಿ ಭತ್ತ ಬೆಳೆಯುವ ರೈತರಿದ್ದು, ಅವರಿಗೆ ನೀರು ಬೇಕಾಗಿದೆ. ಬಸವಸಾಗರ ಜಲಾಶಯ ಭರ್ತಿಯಾದ್ರು ಸಹ ಕಾಲುವೆಗೆ ಮಾತ್ರ ನೀರು ಹರಿಯುತ್ತಿಲ್ಲ, ಇದರಿಂದಾಗಿ ರೈತರು ಕಣ್ಣು ನೀರಾವರಿ ಸಲಹಾ ಸಮಿತಿಯತ್ತ ಚಿತ್ತ ನಟ್ಟಿದೆ.
ಜಲಾಶಯದ ಎಡದಂಡೆ, ಬಲದಂಡೆ ಕಾಲುವೆಗೆ ಹರಿಯದ ನೀರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ಈಗ ಭರ್ತಿಯಾಗಿದೆ. 33 ಟಿಎಂಸಿ ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಈಗಾಗಲೇ 29.82 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮಾತ್ರ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
ನಾರಾಯಣಪುರ ಡ್ಯಾಂ ಭರ್ತಿ: ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ಪ್ರವಾಹ, ಜನತೆ ಎಚ್ಚರದಿಂದರಲು ಸೂಚನೆ
ಬಸವಸಾಗರ ಜಲಾಶವವನ್ನು ನಂಬಿಕೊಂಡು ನಾಲ್ಕು ಜಿಲ್ಲೆಗಳ ರೈತರು ನಂಬಿಕೊಂಡು ಜೀವನ ಮಾಡ್ತಿದ್ದಾರೆ. ಈಗ ಕೃಷ್ಣಾ ನದಿಗೆ ಮಾತ್ರ ನೀರು ಬಿಟ್ಟಿರುವ ಅಧಿಕಾರಗಳು ಕಾಲುವೆಗೆ ಯಾವಾಗ ನೀರು ಬಿಡ್ತಾರೆ ಎಂದು ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ ಈ ನಾಲ್ಕು ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶ 20 ಲಕ್ಷ ಎಕರೆ ಹೊಂದಿದೆ. ಆದ್ರೆ ಈ ಜಿಲ್ಲೆಯ ವ್ಯಾಪ್ತಿಯ ಕಾಲುವೆಗೆ ನೀರು ಮಾತ್ರ ಹರಿಯುತ್ತಿಲ್ಲ.
ಭತ್ತ ನಾಟಿ ಆರಂಭ, ಕಾಲುವೆಗಿಲ್ಲ ನೀರು..!
ಯಾದಗಿರಿ, ರಾಯಚೂರು ಈ ಎರಡು ಜಿಲ್ಲೆಯಲ್ಲಿ ಹೆಚ್ಚಾಗಿ ಭತ್ತದ ಬೆಳೆ ಬೆಳೆಯುತ್ತಾರೆ. ಭತ್ತದ ನಾಟಿ ಕಾರ್ಯ ಭರದಿಂದ ಸಾಗ್ತಾ ಇದ್ದು, ಈಗಾಗಲೇ ಶೇ.50 ರಷ್ಟು ಭತ್ತ ನಾಟಿ ಕಾರ್ಯ ಮುಗಿದಿದೆ. ಪಂಪ್ ಸೇಟ್ ಹಾಗೂ ಐಪಿ ಸೇಟ್ ಇರುವವರು ಮಾತ್ರ ಭತ್ತ ನಾಟಿ ಮಾಡಿದ್ದಾರೆ. ಆದ್ರೆ ಕಾಲುವೆ ನೀರನ್ನು ನಂಬಿಕೊಂಡಿರುವ ರೈತರು ಮಾತ್ರ ಭತ್ತ ನಾಟಿ ಮಾಡುತ್ತಿಲ್ಲ. ಜೊತೆಗೆ ಈ ಜಿಲ್ಲೆಯ ರೈತರು ಹತ್ತಿ, ಶೇಂಗಾ ಹಾಗೂ ಇತರೆ ಬೆಳೆ ಬೆಳೆಯಲು ರೈತರಿಗೆ ಭಾರಿ ಸಂಕಷ್ಟವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ಕೃಷ್ಣಾನದಿ ತೀರ ಹತ್ತಿರವಾಗಿತ್ತದೆ, ಅಂತಹ ರೈತರಿಗೆ ಹೆಚ್ಚು ಸಮಸ್ಯೆಯಿಲ್ಲ, ಆದ್ರೆ ಬೇರೆ ತಾಲೂಕು ಹಾಗೂ ಒಣ ಭೂಮಿಯ ರೈತರಿಗೆ ಆತಂಕ ಸೃಷ್ಟಿಯಾಗಿದೆ.
ನೀರಾವರಿ ಸಲಹಾ ಸಮಿತಿ ಸಭೆಯತ್ತ ರೈತರ ಚಿತ್ತ
ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಈ ನಾಲ್ಕು ಜಿಲ್ಲೆಗಳ ರೈತರ ಚಿತ್ತ ನೀರಾವರಿ ಸಲಹಾ ಸಮಿತಿ ಸಭೆಯತ್ತ ನಟ್ಟಿದೆ. ನೀರಾವರಿ ಸಲಹಾ ಸಮಿತಿ ಸಭೆ ವಿಳಂಬವಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಇವತ್ತು ಐಸಿಸಿ ಸಭೆ ನಡೆಯಬೇಕಾಗಿತ್ತು, ಆದ್ರೆ ಕೆಲವು ಕಾರಣಗಳಿಂದ ಸಭೆ ಮುಂದೂಡಿಕೆ ಮಾಡಲಾಗಿದೆ. ಇಲ್ಲಿ ಪ್ರಮುಖವಾಗಿ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಹರಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.
ಈ ನೀರಾವತಿ ಸಲಹಾ ಸಮಿತಿ ಸಭೆಯನ್ನು ಜುಲೈ 26 ರಂದು ಮುಂಡೂಡಲಾಗಿದೆ. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವವರು ಎರಡು ಜಲಾಶಯಕ್ಕೆ ಸಂಬಂಧಿಸಿದ ಶಾಸಕರು ಹಾಗೂ ಅಧಿಕಾರಿಗಳಯ ಭಾಗವಹಿಸುತ್ತಾರೆ. ನೀರಾವರಿ ಸಲಹಾ ಸಮಿತಿ ಸಭೆಗೆ ರೈತರು ಹಾಗೂ ರೈತ ಮುಖಂಡರನ್ನು ಆಹ್ವಾನಿಸಬೇಕು ಜೊತೆಗೆ ಜಲಾಶಯ ಭರ್ತಿಯಾದ್ರೆ ಬೇಗ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯ ಮಾಡಿದರು.