Asianet Suvarna News Asianet Suvarna News

ಕಂದಾಯ ಕೋರ್ಚ್‌ನಲ್ಲಿ ನಲುಗಿದ ರೈತ...!

ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು 3 ತಿಂಗಳೊಳಗೆ ಹಾಗೂ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಾಗುವ ಮೇಲ್ಮನವಿ ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸರ್ಕಾರ ಕಾಲಮಿತಿ ನಿಗದಿಪಡಿಸಿದ್ದರೂ ಮೂರು ವರ್ಷ ಕಳೆದರೂ ಇತ್ಯರ್ಥವಾಗದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

  farmers  devastated by the revenue  Court  snr
Author
First Published Jan 16, 2023, 6:50 AM IST

 ಮಂಡ್ಯ ಮಂಜುನಾಥ

  ಮಂಡ್ಯ (ಜ. 16 ):  ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು 3 ತಿಂಗಳೊಳಗೆ ಹಾಗೂ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಾಗುವ ಮೇಲ್ಮನವಿ ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸರ್ಕಾರ ಕಾಲಮಿತಿ ನಿಗದಿಪಡಿಸಿದ್ದರೂ ಮೂರು ವರ್ಷ ಕಳೆದರೂ ಇತ್ಯರ್ಥವಾಗದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳು ಕಾಲಮಿತಿಯೊಳಗೆ ಮುಗಿಯುತ್ತಲೇ ಇಲ್ಲ. ಒಂದೆರಡು ವರ್ಷವಲ್ಲ, ಮೂರು ವರ್ಷ ಕಳೆದರೂ ಇನ್ನೂ ಪ್ರಕರಣಗಳಿಗೆ ತಿಲಾಂಜಲಿ ಹಾಡಿಲ್ಲ. ವರ್ಷಾನುಗಟ್ಟಲೆ ಕಂದಾಯ ಕೋರ್ಟ್ ನ್ಯಾಯಕ್ಕಾಗಿ ಅಲೆದೂ ಅಲೆದೂ ರೈತರು ಹೈರಾಣಾಗಿದ್ದಾರೆ.

ರಾಜ್ಯ ಸರ್ಕಾರ 22 ಫೆಬ್ರವರಿ 2021ರಲ್ಲಿ ವಾರದ ಪ್ರತಿ ಮಂಂಗಳವಾರ ಮತ್ತು ಗುರುವಾರಗಳಂದು ತಪ್ಪದೇ ಕಂದಾಯ ಅರೆ ನ್ಯಾಯಿಕ ಪ್ರಕರಣಗಳಲ್ಲಿ ದಾಖಲಾಗುವ ಪ್ರಕರಣಗಳು, ಮೇಲ್ಮನವಿಗಳನ್ನು ಸಂಬಂಧಿಸಿದ ಅಧಿಕಾರಿಗಳು ವಿಚಾರಣೆ ನಡೆಸಿ ಶೀಘ್ರ ವಿಲೇವಾರಿ ಮಾಡುವಂತೆ ಆದೇಶ ಹೊರಡಿಸಿದೆ. ಪ್ರಕರಣಗಳನ್ನು ತೀವ್ರಗತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ರೆವಿನ್ಯೂ ಕೋರ್ಚ್‌ ಕೇಸ್‌ ಮಾನಿಟರಿಂಗ್‌ ಸಿಸ್ಟಮ್‌ ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿದೆ.

ಇದಲ್ಲದೇ, 13.4.2022ರ ಅಧಿಸೂಚನೆಯಲ್ಲಿ ಹಕ್ಕು ಬದಲಾವಣೆಗಳ ಸಂಬಂಧ (ಬಾಕಿ ಇರುವ ಪ್ರಕರಣಗಳು ಸೇರಿ) ತಕರಾರು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಹೋಬಳಿಗಳಲ್ಲಿ ಕಾರ್ಯನಿರ್ವಹಿಸುವ ಉಪ ತಹಸೀಲ್ದಾರ್‌ ಹುದ್ದೆಯು ಶಿರಸ್ತೇದಾರ್‌ ಹುದ್ದೆಗೆ ಸಮನಾಂತರವಾಗಿರುವುದರಿಂದ ಸಂಬಂಧಪಟ್ಟಹೋಬಳಿ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಆಯಾ ಉಪ ತಹಸೀಲ್ದಾರ್‌ ಹಾಗೂ ಕಸಬಾ ಹೋಬಳಿ ಪ್ರಕರಣಗಳನ್ನು ತಹಸೀಲ್ದಾರ್‌ರವರು ಇತ್ಯರ್ಥಪಡಿಸಲು ಆದೇಶಿಸಲಾಗಿದೆ.

ಅರೆ ನ್ಯಾಯಿಕ ಪ್ರಕರಣಗಳಲ್ಲಿ ಅತಿ ವಿಳಂಬ ಧೋರಣೆ ಉಂಟಾದಲ್ಲಿ ಅರ್ಜಿದಾರರ ಹಿತಾಸಕ್ತಿಗೆ ಧಕ್ಕೆ ಮತ್ತು ಅನಾನುಕೂಲವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದಿಂದ ಹಲವಾರು ಸೂಚನೆ, ನಿರ್ದೇಶನಗಳನ್ನು ನೀಡಿದ್ದರೂ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬ ಧೋರಣೆ ಮುಂದುವರಿದೇ ಇದೆ.

ಸರ್ಕಾರ ಸೂಚಿಸಿರುವುದೇನು?

1.ಮ್ಯುಟೇಷನ್‌, ಖಾತೆ ಮತ್ತು ಆರ್‌ಟಿಸಿ ಬದಲಾವಣೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳು ವಿವಾದರಹಿತವಾದ ಪ್ರಕರಣಗಳಾಗಿದ್ದಲ್ಲಿ ಖಾತೆ ಬದಲಾವಣೆಯನ್ನು 60 ದಿನಗಳಲ್ಲಿ ಭೂಮಿ ತಂತ್ರಾಂಶದ ಮೂಲಕ ಸಕಾಲ ಸೇವೆಗಳಡಿ ಒದಗಿಸಬೇಕು. ಅರ್ಜಿಯು ಆಸ್ತಿ ಹಕ್ಕಿನ ಹೊರತಾದ ವಿವಾದಿತ ಪ್ರಕರಣವಾಗಿದ್ದರೆ ಅದನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 129ರನ್ವಯ ಪರಿಶೀಲಿಸಿ ಮೂರು ತಿಂಗಳೊಳಗೆ ಇತ್ಯರ್ಥಪಡಿಸಲು ತಹಸೀಲ್ದಾರ್‌ ಕ್ರಮ ವಹಿಸಬೇಕು.

2.ಮ್ಯುಟೇಷನ್‌ ಖಾತಾ ಮತ್ತು ಆರ್‌ಟಿಸಿ ಬದಲಾವಣೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳು ಆಸ್ತಿಯ ಹಕ್ಕಿನ ಕುರಿತಾದ ವಿವಾದಕ್ಕೆ ಸಂಬಂಧಿಸಿದ್ದರೆ ಈ ಬಗ್ಗೆ ತಹಸೀಲ್ದಾರರು ನಿಯಮಾನುಸಾರ ಪರಿಶೀಲಿಸಿ ಆಕ್ಷೇಪಣಾ ಅವಧಿ ಮುಕ್ತಾಯಗೊಂಡ ಹದಿನೈದು ದಿನಗಳೊಳಗೆ ಸಿವಿಲ್‌ ನ್ಯಾಯಾಲಯಕ್ಕೆ ನೀಡುವಂತೆ ಹಿಂಬರಹ ನೀಡಬೇಕು.

3.ತಹಸೀಲ್ದಾರ್‌ ಆದೇಶದಿಂದ ಬಾಧಿತರಾದವರು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ದಾಖಲಿಸುವ ಮೇಲ್ಮನವಿ ಪ್ರಕರಣಗಳನ್ನು ಎದುರುದಾರರಿಗೆ ನೋಟಿಸ್‌ ನೀಡಿದ ದಿನದಿಂದ ಆರು ತಿಂಗಳೊಳಗೆ ಇತ್ಯರ್ಥ ಪಡಿಸಬೇಕಿದೆ. ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ನಿಗದಿತ ಕಾಲಮಿತಿಯೊಳಲಗೆ ಪ್ರಕರಣ, ಮೇಲ್ಮನವಿಗಳನ್ನು ಇತ್ಯರ್ಥ ಪಡಿಸಲಾಗದಿದ್ದರೆ ವಿಳಂಬಕ್ಕೆ ಸಮರ್ಪಕ ಕಾರಣಗಳನ್ನು ದಾಖಲಿಸಿ ಮೇಲಿನ ಅಧಿಕಾರಿಗಳಿಗೆ ವರದಿ ಮಾಡುವುದು ಹಾಗೂ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

4. ಖಾತಾ, ಮ್ಯುಟೇಷನ್‌ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ತಹಸೀಲ್ದಾರ್‌ರವರು ಅರ್ಜಿಯಲ್ಲಿನ ವಿವಾದವು ಇನಾಂ ರದ್ಧತಿ ಕಾಯ್ದೆ, ಪಿಟಿಸಿಎಲ್‌ ಕಾಯ್ದೆ, ಸರ್ವೆ ಕೆಲಸ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿರುವುದೇ ಎಂದು ಪರಿಶೀಲಿಸಿ ವಾದಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ 30 ದಿನಗಳೊಳಗೆ ಅರ್ಜಿದಾರರಿಗೆ ಸ್ಪಷ್ಟಮಾಹಿತಿ ನೀಡಬೇಕು.

ದಿನಾಂಕ ಕೊಟ್ಟು ಕಾಲಹರಣ

ಸರ್ಕಾರದ ಸೂಚನೆಯಂತೆ ಅರೆ ನ್ಯಾಯಿಕ ನ್ಯಾಯಾಲಯಗಳು ಕಾರ್ಯನಿರ್ವಹಿಸಿದ್ದರೆ ಪ್ರಕರಣಗಳು ಬಾಕಿ ಉಳಿಯುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ನ್ಯಾಯ ಕೋರಿ ಅರ್ಜಿ ಸಲ್ಲಿಸಿದ ರೈತರಿಗೆ ದಿನಾಂಕ ಕೊಟ್ಟು ಕಳುಹಿಸಲಾಗುತ್ತಿದೆ. ಇದರಿಂದ ಕಾಲಹರಣವಾಗುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ರೈತರು ವಿಶೇಷ ಆಸಕ್ತಿ ವಹಿಸಿ ಎಲ್ಲಾ ಕೆಲಸ ಬಿಟ್ಟು ವಿಚಾರಣೆಗೆ ಹಾಜರಾಗುತ್ತಾರೆ. ಅವರಿಗೆ ವಾರವೋ, ಹದಿನೈದು ದಿನವೋ, ಒಂದು ತಿಂಗಳೋ ಮುಂದಕ್ಕೆ ಹಾಕಿ ಕಳುಹಿಸುತ್ತಾರೆ. ನ್ಯಾಯಾಲಯಗಳಲ್ಲಿ ಅವು ಇತ್ಯರ್ಥಗೊಳ್ಳುವಷ್ಟರಲ್ಲಿ ವರ್ಷಗಳೇ ಉಳಿದಿರುತ್ತವೆ. ಕೋರ್ಚ್‌ ಮೆಟ್ಟಿಲು ಹತ್ತುವುದರಲ್ಲೇ ರೈತರ ಆಯಸ್ಸು ಕಳೆದುಹೋಗುತ್ತಿದೆ.

ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳ ವಿಳಂಬ ಹಾಗೂ ಉದಾಸೀನ ಧೋರಣೆಯಿಂದ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕರಣಗಳು ನೆನೆಗುದಿಗೆ ಬಿದ್ದಿದ್ದು ಸಾವಿರಾರು ಕುಟುಂಬಗಳು ಪ್ರಕರಣಗಳ ಇತ್ಯರ್ಥದ ಮುಕ್ತಿ ಕಾಣದೆ ಬದುಕು ಸವೆಸುವಂತಾಗಿದೆ. ಕಂದಾಯ ಭೂಮಿಗೆ ಸಂಬಂಧಿಸಿದಂತೆ ಉಂಟಾಗಿರುವ ಅತಿ ಸಣ್ಣ ವ್ಯಾಜ್ಯಗಳೂ ಕೂಡ ವರ್ಷಾನುಗಟ್ಟಲೆ ಅಲೆಸುತ್ತಿದ್ದು, ಇದರಿಂದಾಗಿ ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯಗಳ ಬಗ್ಗೆ ಅಸಹನೆ ವ್ಯಕ್ತಪಡಿಸುವಂತಾಗಿದೆ.

ಜಿಲ್ಲೆಯ ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣಗಳ ವಿವರ

ನ್ಯಾಯಾಲಯ 3 ವರ್ಷಗಳಲ್ಲಿ ದಾಖಲಾದ ಪ್ರಕರಣಗಳು ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 1ವರ್ಷ ಮೇಲ್ಪಟ್ಟು ಬಾಕಿ ಇರುವ ಪ್ರಕರಣಗಳು 3 ವರ್ಷ ಮೇಲ್ಪಟ್ಟು ಬಾಕಿ ಇರುವ ಪ್ರಕರಣಗಳು

ಜಿಲ್ಲಾಧಿಕಾರಿ 1202 688 514 215 200

ಎಸಿ ಕೋರ್ಚ್‌, ಮಂಡ್ಯ 2403 1012 1391 723 668

ಎಸಿ ಕೋರ್ಚ್‌, ಪಾಂಡವಪುರ 3765 2541 1124 366 08

ತಹಸೀಲ್ದಾರ್‌, ಮಂಡ್ಯ 1350 1129 221 219 02

ತಹಸೀಲ್ದಾರ್‌, ಮದ್ದೂರು 1791 1689 102 00 00

ತಹಸೀಲ್ದಾರ್‌, ಮಳವಳ್ಳಿ 1312 903 409 00 00

ತಹಸೀಲ್ದಾರ್‌, ಪಾಂಡವಪುರ 792 626 166 05 01

ತಹಸೀಲ್ದಾರ್‌, ಶ್ರೀರಂಗಪಟ್ಟಣ 786 720 66 00 00

ತಹಸೀಲ್ದಾರ್‌, ಕೆ.ಆರ್‌.ಪೇಟೆ 843 737 106 32 00

ತಹಸೀಲ್ದಾರ್‌, ನಾಗಮಂಗಲ 1009 909 100 00 00

ಒಟ್ಟು 15253 10954 4199 1560 978

ನ್ಯಾಯದಾನ ಶೀಘ್ರವಾಗಿದ್ದರೆ ಕಂದಾಯ ಅರೆ ನ್ಯಾಯಾಲಯಗಳ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ. ವರ್ಷಾನುಗಟ್ಟಲೆ ವಿಳಂಬ ಮಾಡುವುದರಿಂದ ಜನರನ್ನು ಸಂಕಷ್ಟಕ್ಕೆ ದೂಡಿದಂತಾಗುವುದು. ನಿಗದಿತ ಕಾಲಮಿತಿಯೊಳಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥಕ್ಕೆ ವಿಳಂಬ ತೋರುವವರಿಗೆ ಶಿಕ್ಷೆ ವಿಧಿಸುವಂತಹ ಕಾನೂನನ್ನು ಸರ್ಕಾರ ರೂಪಿಸಿ ಜಾರಿಗೊಳಿಸಬೇಕು.

- ಮಧು ಜಿ.ಮಾದೇಗೌಡ, ವಿಧಾನ ಪರಿಷತ್‌ ಸದಸ್ಯರು

ಎಲ್ಲ ಹಂತಗಳಲ್ಲೂ ಬಲಿಪಶುವಾಗುತ್ತಿರುವವನೇ ರೈತ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ಕೊಡುವ, ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಇಚ್ಛಾಶಕ್ತಿ ಸರ್ಕಾರಕ್ಕೇ ಇಲ್ಲ. ಇನ್ನು ಸ್ಥಳೀಯವಾಗಿರುವ ಅಧಿಕಾರಿಗಳಿಗೆ ಎಲ್ಲಿಂದ ಬರಬೇಕು. ಕಂದಾಯ ಅರೆ ನ್ಯಾಯಿಕ ನ್ಯಾಯಾಲಯಗಳು ಚುರುಕಿನಿಂದ ಕಾರ್ಯನಿರ್ವಹಿಸದಿರುವುದೇ ಬಾಕಿ ಪ್ರಕರಣಗಳು ಉಳಿಯಲು ಕಾರಣವಾಗಿದೆ. ವರ್ಷಾನುಗಟ್ಟಲೆ ಪ್ರಕರಣಗಳನ್ನು ಉಳಿಸುವುದು ನಾಚಿಕೆಗೇಡಿನ ವಿಚಾರ.

-ಎಸ್‌.ಸಿ.ಮಧುಚಂದನ್‌, ಸಂಘಟನಾ ಕಾರ್ಯದರ್ಶಿ, ರಾಜ್ಯ ರೈತಸಂಘ

Follow Us:
Download App:
  • android
  • ios