Asianet Suvarna News Asianet Suvarna News

ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಹಾವಳಿ: ಬೇಸತ್ತ ರೈತರು ಹೀಗಾ ಮಾಡೋದು...

ಮಲೆನಾಡ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ  ಕಾಡಾನೆಗಳ ಸಂಘರ್ಷ ನೆನ್ನೆ ಮೊನ್ನೆದಲ್ಲ ಹಲವು ದಶಕಗಳಿಂದಲೂ ಕೂಡ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ.

farmers banana plantation destroyed due to wild elephant problem gvd
Author
First Published Sep 10, 2023, 5:33 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಸೆ.10): ಮಲೆನಾಡ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ  ಕಾಡಾನೆಗಳ ಸಂಘರ್ಷ ನೆನ್ನೆ ಮೊನ್ನೆದಲ್ಲ ಹಲವು ದಶಕಗಳಿಂದಲೂ ಕೂಡ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದು ಅಥವಾ ಜೀವವನ್ನು ಉಳಿಸಿಕೊಳ್ಳುವುದು ಎನ್ನುವ ಆತಂಕದಲ್ಲೇ ಮಲೆನಾಡಿನ ಜನರು ದಿನ ಕಳೆಯುತ್ತಿದ್ದಾರೆ. ತಾವು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು  ತಾವೇ ಪೋಷಣೆ ಮಾಡಿ ಬೆಳಸಿದ ಗಿಡಗಳನ್ನುಕೊಚ್ಚಿ ಹಾಕುತ್ತಿದ್ದಾರೆ.

ಬಾಳೆಗಾಗಿ ಕಾಫಿ ತೋಟಕ್ಕೆ ಕಾಡಾನೆ ಲಗ್ಗೆ: ಜಿಲ್ಲೆಯ ಮಲೆನಾಡಿನ ಭಾಗವಾದ ಅರೇನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿತ್ಯವೂ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಅಡಿಕೆ, ಕಾಫಿ, ತೆಂಗು , ಬಾಳೆ ಗಿಡಗಳು ಮಣ್ಣುಪಾಲಾಗುತ್ತಿವೆ.ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ರೈತರ ತೋಟದಲ್ಲಿ ಸವಾರಿ ಮಾಡುತ್ತಿದ್ದು.ಮನಸೋ ಇಚ್ಚೆ ಸಿಕ್ಕಿದ ಗಿಡಗಳನ್ನು ಮುರಿದು ಹಾಕುತ್ತಿದೆ.  ರೈತರು ಕಷ್ಟಪಟ್ಟು ಸಾಕಿ ಸಲಹಿದ ಕಾಫಿ ಗಿಡಗಳು,ಅಡಿಕೆ ಗಿಡ,ಬಾಳೆಗಿಡ ಸಂಪೂರ್ಣ ನಾಶವಾಗಿದ್ದು ಆನೆಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.ತಾವು ಬೆಳೆದ ಬೆಳೆಯಿಂದ ಲಾಭ ಬರುತ್ತೆ ಅನ್ನುವಾಗ್ಲೆ ಆನೆಗಳು ಸರ್ವನಾಶ ಮಾಡಿ ರೈತರನ್ನು ಸಂಕಷ್ಚಕ್ಕೆ ದೂಡಿದೆ.ಕಳೆದ ಒಂದುವಾರಗಳಿಂದ ಅರೇನೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು ರೈತರು ಹೈರಾಣಾಗಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನಮ್ಮ ತಕರಾರು ಇಲ್ಲ: ಸಚಿವ ಪರಮೇಶ್ವರ್‌

ನಿತ್ಯವೂ ಕಾಡಾನೆಗಳು  ಒಂದಲ್ಲ ಒಂದುತೋಟಕ್ಕೆ ನುಗ್ಗಿ  ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ‌ರೋಸಿಹೋದ ಗ್ರಾಮದ ಸಾಗರ್ ಎನ್ನುವ ಬೆಳೆಗಾರ ಕಾಡಾನೆ ನಿಯಂತ್ರಣ ಮಾಡಲು ಐದು ಎಕ್ರೆ ತೋಟದಲ್ಲಿದ್ದ ಬಾಳೆಗಿಡಗಳನ್ನು ಕೊಚ್ಚಿ ಹಾಕಿದ್ದಾರೆ. ಬಾಳೆಗಿಡಗಳನ್ನು ತಿನ್ನಲು ಕಾಫಿತೋಟಕ್ಕೆ ಕಾಡಾನೆಗಳು ಲಗ್ಗೆ ಹಿಡುತ್ತವೆ ,ಇದರಿಂದ ಸಾಗರ್ ರವರು ತಮ್ಮ ತೋಟದಲ್ಲಿ ಮಿಶ್ರ ಬೆಳೆಯನ್ನು ಬೆಳೆದಿದ್ದರು, ಕಾಡಾನೆ ಕಾಟದಿಂದ ಉಳಿದ ಬೆಳೆಗಳಾದ ಕಾಫಿ , ಅಡಿಕೆಗಳನ್ನು ರಕ್ಷಣೆ ಮಾಡಿಕೊಳ್ಳಲು ತೋಟದಲ್ಲಿದ್ದ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ಕೊಚ್ಚಿ ಹಾಕಿದ್ದಾರೆ.

ಆತಂಕದಲ್ಲಿರುವ ಮಲೆನಾಡಿನ ಜನರು: ಗ್ರಾಮದ ಸುತ್ತಮುತ್ತ 9ರಿಂದ 10 ಕಾಡಾನೆಗಳು ಬೀಡು ಬಿಟ್ಟಿದ್ದು, ರೈತರ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ.ಕಳೆದ ಕೆಲವು ದಿನಗಳ ವ್ಯಕ್ತಿಯೊಬ್ಬ ಕಾಡಾನೆ ದಾಳಿಗೆ ಬಲಿಯಾಗಿದ್ದ. ಮೃತ ವ್ಯಕ್ತಿಯನ್ನು ಕಿನ್ನಿ ಎಂದು ಗುರುತಿಸಲಾಗಿತ್ತು. ವ್ಯಕ್ತಿಯ ಮೃತದೇಹವನ್ನು ತರಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟಿದ್ದರು. ಬಳಿಕ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.ಇದೀಗ ಮತ್ತೆ ಕಾಡಾನೆ ದಾಳಿ ಮುಂದುವರೆದಿದ್ದು, ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮದ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಇದರಿಂದಾಗಿ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಭಯಪಡುವಂತಾಗಿದೆ. ಅಲ್ಲದೇ ತೋಟದ ಕೆಲಸಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದು, ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ

ಕಾಡಾನೆ ಹಾವಳಿ ಖಂಡಿಸಿ ಪ್ರತಿಭಟನೆ: ಕಾಡಾನೆ ಹಾವಳಿ ಖಂಡಿಸಿ ಚಿಕ್ಕಮಗಳೂರಿನ ಆಲ್ದೂರು ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ರೈತ ಸಂಘ ಮತ್ತು  ಬೆಳೆಗಾರರ ಸಂಘಟನೆಗಳು ಮತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಆಲ್ದೂರು ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕಾಡಾನೆಗಳನ್ನು ಅರಣ್ಯ ಇಲಾಖೆ ಅಟ್ಟುವ ಕೆಲಸ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆನೆಗಳ ಗುಂಪು ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತು ಹೊಡೆಯುತ್ತಿವೆ.  ಇದರಿಂದ ಇಡೀ ಹೋಬಳಿಯ ಜನರು ಆತಂಕದಿಂದ ಜೀವನ ನಡೆಸುವಂತಾಗಿದೆ. ಕಾಡಾನೆಗಳ ತಂಡ ರೈತರ ತೋಟಗಳಿಗೆ ಲಗ್ಗೆ ಇಟ್ಟು ಅಪಾರ ಬೆಳೆಹಾನಿ ಉಂಟುಮಾಡುತ್ತಿವೆ. 

ಮಹಿಷ ದಸರಾ ಅದ್ಹೇಗೆ ಮಾಡ್ತಾರೋ ಮಾಡಲಿ ನೋಡ್ತೀನಿ: ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಸವಾಲು

ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತೋಟಗಳನ್ನು ಪಾಳುಬಿಡುವ ಪರಿಸ್ಥಿತಿ ಬಂದಿದೆ. ಜನರು ಹಗಲು ಹೊತ್ತೇ ಹೊರಗಡೆ ತಿರುಗಾಡಲು ಭಯಪಡುವಂತಾಗಿದೆ. ಇಲ್ಲಿರುವ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಒಟ್ಟಾರೆ, ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಗೆ 3-5 ಎಕರೆಯ ಸಣ್ಣ-ಸಣ್ಣ ಬೆಳೆಗಾರರು ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಹೇಳಿ...ಹೇಳಿ... ಸಾಕಾದ ಕಾರಣ ಇದೀಗ ಒಂದು ಬೆಳೆ ಉಳಿಸಿಕೊಳ್ಳಲು ರೈತರೇ ಮತ್ತೊಂದು ಬೆಳೆಯನ್ನ ಕಡಿದು ಹಾಕುತ್ತಿದ್ದಾರೆ. ಆದರೂ, ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಆನೆ ಓಡಿಸುವ ಕೆಲಸ ಮಾಡುತ್ತಿಲ್ಲ. ಅರಣ್ಯ ಅಧಿಕಾರಿಗಳು ಕೂಡಲೇ ಆನೆಗಳನ್ನ ಓಡಿಸದಿದ್ದರೆ ಮುಂದಾಗೋ ಅನಾಹುತಕ್ಕೆ ನೀವೇ ಜವಾಬ್ದಾರಿ ಎಂದು ಅರಣ್ಯ ಇಲಾಖೆಗೆ ಎಚ್ಚರಿಸಿದ್ದಾರೆ.

Follow Us:
Download App:
  • android
  • ios