ಮಯೂರ ಹೆಗಡೆ

ಹುಬ್ಬಳ್ಳಿ(ಜೂ.07): ಕೊರೋನಾ ಲಾಕ್‌ಡೌನ್‌ ಕಾರಣಕ್ಕಾಗಿ ಕೃಷಿ ಹುಟ್ಟುವಳಿ ಆನ್‌ಲೈನ್‌ ಮಾರಾಟ ವ್ಯವಸ್ಥೆ (ಕೃಷಿ ಮಾರಾಟ ವಾಹಿನಿ) ಸ್ಥಗಿತಗೊಂಡ ಪರಿಣಾಮ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿ ದಾಸ್ತಾನಿರುವ ಕಾಳುಕಡಿ ನಾಶವಾಗುವ ಭೀತಿ ರೈತರು, ವರ್ತಕರಲ್ಲಿ ಮೂಡಿದೆ.

ಕಳೆದ ಮೇ 23ರಿಂದ ಎಪಿಎಂಸಿಯನ್ನು ಸಂಪೂರ್ಣ ಬಂದ್‌ ಇಡಲಾಗಿದೆ. ಇದರಿಂದಾಗಿ ಮಳಿಗೆಗಳ ಗೋದಾಮಲ್ಲಿ ಇರುವ ಶೇಂಗಾ, ಮೆಣಸಿನಕಾಯಿ, ಕಡಲೆ, ಹೆಸರು ಹುಳ ಹಿಡಿಯುವ ಭೀತಿ ಉಂಟಾಗಿದೆ. ಹೀಗಾಗಿ, ಎಪಿಎಂಸಿಯಲ್ಲಿ ಆನ್‌ಲೈನ್‌ ಮಾರುಕಟ್ಟೆಗೆ ಚಾಲನೆ ಕೊಟ್ಟು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಿ ಎಂಬುದು ವರ್ತಕರ ಬೇಡಿಕೆ.

ಒಟ್ಟಾರೆ ಅಮರಗೋಳ ಎಪಿಎಂಸಿಯಲ್ಲಿ 2 ಸಾವಿರಕ್ಕೂ ಅಧಿಕ ಮಳಿಗೆಗಳು ಇವೆ. ಅದರಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ವ್ಯವಸ್ಥೆಯಲ್ಲಿ 60ರಿಂದ 150 ಬೃಹತ್‌ ಮಳಿಗೆಗಳು ವಹಿವಾಟು ನಡೆಸುತ್ತವೆ. ಮೇ 23ಕ್ಕೆ ಬಂದ ಸರಕುಗಳು ಗೋದಾಮಿನಲ್ಲಿ ತುಂಬಿವೆ. ರೈತರು ಮಾರಾಟಕ್ಕೆ ತಂದ ಕೃಷಿ ಹುಟ್ಟುವಳಿಗಳು ವ್ಯಾಪಾರವಾಗಿಲ್ಲ. ವರ್ತಕರ ಬಳಿ ಇರುವ ದಾಸ್ತಾನು ನಾಶವಾಗುವ ಸ್ಥಿತಿಗೆ ಬಂದಿದೆ.

ಈ ಬಗ್ಗೆ ಮಾತನಾಡಿದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಎಕಲಾಸಪುರ ‘ಅಂದಾಜು 5 ಸಾವಿರ ಚೀಲ ಶೇಂಗಾ ಎಪಿಎಂಸಿಯಲ್ಲಿ ದಾಸ್ತಾನಿದೆ. ಬಿತ್ತನೆಗೆ ಬೇಕಾದ ಹೆಸರು ಬೀಜ, ನೀರಾವರಿ ಶೇಂಗಾ, ದಾಸ್ತಾನಲ್ಲಿ ಇದೆ. ಮೆಣಸಿನಕಾಯಿ ವ್ಯಾಪಾರವಾಗುವ ಮಂಗಳವಾರ, ಗುರುವಾರ ಹಾಗೂ ಶನಿವಾರ ಅರ್ಧದಷ್ಟುವಹಿವಾಟು ನಡೆಯದೆ ಮೆಣಸು ಹಾಳಾಗುತ್ತಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ ಇರುವ 4 ಲಕ್ಷ ಮೆಣಸಿನಕಾಯಿ ಚೀಲ ಬಿಟ್ಟು ಉಳಿದೆಲ್ಲ ಸರಕು ಹುಳ ಹಿಡಿಯುವ ಸ್ಥಿತಿಗೆ ಬಂದಿದೆ ಎಂದರು.

ಸರಕು ಸಾಗಾಟದಿಂದ ನೈಋುತ್ಯ ರೈಲ್ವೆಗೆ 2.03 ಕೋಟಿ ಆದಾಯ

ಪ್ರಸ್ತುತ ಬೆಳಗ್ಗೆ 10 ಗಂಟೆ ವರೆಗೆ ವ್ಯಾಪಾರಕ್ಕೆ ಅವಕಾಶ ಇದ್ದರೂ ವಹಿವಾಟು ನಡೆಯುತ್ತಿಲ್ಲ. ಹಮಾಲಿ ಕಾರ್ಮಿಕರು ಕೆಲಸಕ್ಕೆ ಬರಲು ಸಾಧ್ಯವಾಗದೆ ಲೋಡಿಂಗ್‌, ಅನ್‌ ಲೋಡಿಂಗ್‌ ಕೂಡ ಸಮಸ್ಯೆ ಆಗಿದೆ. ಇದೀಗ ಸೀಜನ್‌ ಅಲ್ಲದಿದ್ದರೂ ಮುಂಬರುವ ಕೃಷಿ ಬಿತ್ತನೆ ಚಟುವಟಿಕೆಗೆ ಪೂರಕವಾಗಿ ಎಪಿಎಂಸಿಯಿಂದ ಬೀಜ ವಿತರಣೆ ಸೇರಿದಂತೆ ಒಂದಿಷ್ಟು ಕೆಲಸಗಳಿವೆ. ಅದಕ್ಕೂ ತೊಂದರೆಯಾಗಿದೆ ಎಂದು ಯಕಲಾಸಪುರ ಹೇಳಿದರು.

ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಈಚೆಗೆ ಕೇವಲ ಒಂದು ಒಪ್ಪತ್ತಿನ ವ್ಯಾಪಾರಕ್ಕೆ ಅನುಮತಿ ಸಿಕ್ಕ ಸಂದರ್ಭದಲ್ಲೇ 10-12 ಸಾವಿರ ಮೆಣಸಿನಕಾಯಿ ಚೀಲ ಆವಕವಾಗಿದೆ. ಇನ್ನು ಹುಬ್ಬಳ್ಳಿ ಎಪಿಎಂಸಿಯಲ್ಲಿ ಅವಕಾಶ ಕೊಟ್ಟರೆ ಕೋಟ್ಯಂತರ ರುಪಾಯಿ ವಹಿವಾಟು ನಡೆಯುವುದು ನಿಶ್ಚಿತ. ಅಲ್ಲದೇ ಅಮರಗೋಳ ಎಪಿಎಂಸಿ ಸಾಕಷ್ಟು ವಿಸ್ತಾರವಾಗಿದೆ. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಹಿವಾಟು ನಡೆಸಲು ಅವಕಾಶ ಇದೆ. ಆನ್‌ಲೈನ್‌ ಮಾರಾಟ ವ್ಯವಸ್ಥೆಗೆ ಅನುವು ಮಾಡಿಕೊಟ್ಟಲ್ಲಿ ಆನ್‌ಲೈನ್‌ ಹಣ ಪಾವತಿ ಸೇರಿ ಇತರ ಅವಕಾಶ ಇರುವ ಕಾರಣ ಜನ ಸೇರುವುದು ತಪ್ಪಲಿದೆ ಎಂದರು.

ಇದೇ ಪರಿಸ್ಥಿತಿ ಮುಂದುವರಿದರೆ ದಾಸ್ತಾನು ಇರುವ ಕಾಳುಕಡಿ ಸಂಪೂರ್ಣ ಕೆಡುವ ಸಾಧ್ಯತೆ ಇದೆ. ಈಗಲೆ ಎಚ್ಚೆತ್ತು ಜಿಲ್ಲಾಡಳಿತ ಆನ್‌ಲೈನ್‌ ಮಾರಾಟಕ್ಕೆ ಅನುವು ಮಾಡಿಕೊಡುವ ತೀರ್ಮಾನ ಕೈಗೊಳ್ಳಬೇಕು ಎಂದು ಅಮರಗೋಳ ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ತಿಳಿಸಿದ್ದಾರೆ. 

ರೈತರ ಉತ್ಪನ್ನಗಳೆಲ್ಲ ಗೋದಾಮು, ಮನೆಗಳಲ್ಲಿ ಕೂತಿವೆ. ಮಾರುಕಟ್ಟೆತೆರೆಯುವುದು, ವ್ಯಾಪಾರದ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಮುಂದಿನ ತೀರ್ಮಾನದ ಬಗ್ಗೆ ಚರ್ಚಿಸುತ್ತೇವೆ ಎಂದು ಅಮರಗೋಳ ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಹೇಳಿದ್ದಾರೆ.