ಸಿಎಂ ಬಂಧನವಾಗುತ್ತದೆ ಎಂದು ಯಾರು ನಿಮಗೆ ಮಾಹಿತಿ ಕೊಟ್ಟಿದ್ದು?: ಎ.ಎಸ್.ಪೊನ್ನಣ್ಣ
ಮುಡಾ ಕೇಸ್ ಸಿಬಿಐಗೆ ವಹಿಸಲಾಗುತ್ತೆ, ಬಳಿಕ ಸಿಎಂ ಅರೆಸ್ಟ್ ಆಗುತ್ತಾರೆ ಎಂಬ ಮಾಹಿತಿ ಇದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಸಿಎಂ ಸಲಹೆಗಾರ ಎ.ಎಸ್.ಪೊನ್ನಣ್ಣ ಸಿಡಿಮಿಡಿಗೊಂಡರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.16): ಮುಡಾ ಕೇಸ್ ಸಿಬಿಐಗೆ ವಹಿಸಲಾಗುತ್ತೆ, ಬಳಿಕ ಸಿಎಂ ಅರೆಸ್ಟ್ ಆಗುತ್ತಾರೆ ಎಂಬ ಮಾಹಿತಿ ಇದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಸಿಎಂ ಸಲಹೆಗಾರ ಎ.ಎಸ್. ಪೊನ್ನಣ್ಣ ಸಿಡಿಮಿಡಿಗೊಂಡರು. ಅಲ್ಲದೆ ಮಾಧ್ಯಮಗಳ ವಿರುದ್ಧ ಸಿಟ್ಟಾದರು. ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು ದಾಖಲೆ ಇಲ್ಲದೆ ಸುಮ್ಮನೆ ಮನಸ್ಸಿಗೆ ಬಂದಂತೆ ಪ್ರಶ್ನೆ ಕೇಳಬೇಡಿ. ಸಿಎಂ ಬಂಧನವಾಗುತ್ತದೆ ಎಂದು ಯಾರು ನಿಮಗೆ ಮಾಹಿತಿ ಕೊಟ್ಟಿದ್ದು. ರಾಜ್ಯದ ಮುಖ್ಯಮಂತ್ರಿ ಅರೆಸ್ಟ್ ಆಗುತ್ತಾರೆ ಅಂತ ಕೇಳುವಾಗ ಮಾಹಿತಿ ಇರಬೇಕು ಅಲ್ವಾ.?
ನಿಮಗೇನು ಸಿಬಿಐನವರೇನು ಫೋನ್ ಮಾಡಿ ಹೇಳಿದ್ರಾ ಎಂದು ಪೊನ್ನಣ್ಣ ಸಿಟ್ಟಾದರು. ಬಳಿಕ ನಾನು ಹೇಳುತ್ತೇನೆ ಎಂದು ಮಾಧ್ಯಮದವರನ್ನು ಸಚಿವ ಜಾರ್ಜ್ ಸಮಾಧಾನಪಡಿಸಿದರು. ಪೊನ್ನಣ್ಣ ಅವರು ಸಿಎಂ ಕಾನೂನು ಸಲಹೆಗಾರರಾಗಿದ್ದಾರೆ, ಅದಕ್ಕೆ ಮಾತನಾಡಿದ್ದಾರೆ. ನಾನು ಉತ್ತರಿಸುತ್ತೇನೆ ಎಂದು ಮಾಧ್ಯಮದವರನ್ನು ಸುಮ್ಮನಿರಿಸಿದರು. ಸಿಬಿಐ ಸಿಎಂ ಅವರನ್ನು ಅರೆಸ್ಟ್ ಮಾಡ್ತಾರೆ ಎನ್ನುವುದಕ್ಕೆ ಅಥವಾ ನಾಳೆ ಇನ್ನೊಬ್ಬರನ್ನು ಅರೆಸ್ಟ್ ಮಾಡ್ತಾರೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ. ಈಗ ಆ ವಿಚಾರ ಕೋರ್ಟಿನಲ್ಲಿ ಇದೆ. ಅದನ್ನು ನಾವ್ಯಾಕೆ ಮಾತನಾಡುವುದು ಎಂದು ಸಚಿವ ಜಾರ್ಜ್ ಸಮಜಾಯಿಸಿ ನೀಡಿದರು.
ಕೋರ್ಟ್ ಹೇಳಿದರೆ ಸಿಬಿಐಗೆ ಕೊಡ್ತಾರೆ. ನನ್ನ ಮೇಲೆಯೂ ಸಿಬಿಐ, ಸಿಐಡಿಗೆ ಕೊಡಲಾಗಿತ್ತು. ಅದೆಲ್ಲಾ ಆದ ಮೇಲೆ ಗಲಾಟೆ ಮಾಡಿದ ವಿರೋಧ ಪಕ್ಷಗಳನ್ನು ಈಗ ಮಾಧ್ಯಮಗಳು ಕೇಳುವುದಿಲ್ಲ ಎಂದು ಸಚಿವ ಜಾರ್ಜ್ ಕೂಡ ಅಸಮಾಧಾನಿತರಾದರು. ಎಚ್ ಡಿ ಕೋಟೆ ವ್ಯಾಪ್ತಿಯಲ್ಲಿರುವ ತಮ್ಮ ಜಮೀನಿಗೆ ಓಡಾಡಲು ನುಗು ಅರಣ್ಯದಲ್ಲಿ ಅವಕಾಶ ಕಲ್ಪಿಸುವಂತೆ ರಾಣಾ ಜಾರ್ಜ್ ಕೋರ್ಟ್ ಮೊರೆ ಹೋಗಿರುವುದು ಸರ್ಕಾರದ ವಿರುದ್ಧ ಅಲ್ಲ. ಅವರವರ ಹಕ್ಕನ್ನು ಪಡೆಯಲು ಕೋರ್ಟಿನಲ್ಲಿ ಕೇಳಿದ್ದಾರೆ. ನಾನು ಮಿನಿಸ್ಟರ್ ಆಗಿ ಅದಕ್ಕೆ ಪರ್ಮಿಷನ್ ಕೊಟ್ಟಿದ್ದರೆ ನನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನೆ ಅಂತ ಆಗ್ತಾ ಇತ್ತು.
ಕುಮಾರಸ್ವಾಮಿ ಹೇಳಿದಂತೆ ಎಸ್ಐಟಿ ರಚನೆ ಮಾಡಲಾಗಲ್ಲ: ಸಚಿವ ಕೆ.ಜೆ.ಜಾರ್ಜ್
ನನ್ನ ಮಗ ಅವರ ಹಕ್ಕಿನ ಪ್ರಕಾರ ಕೋರ್ಟಿನಲ್ಲಿ ಕೇಳಿದ್ದಾರೆ. ಕೋರ್ಟಿನಲ್ಲಿ ಇರುವುದರಿಂದ ನಾನು ಅದರ ಬಗ್ಗೆ ಚರ್ಚಿಸಲ್ಲ. ಸಚಿವನಾಗಿದ್ರೂ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕೋರ್ಟಿನಲ್ಲಿ ಏನೇ ತೀರ್ಮಾನ ಆದರೂ ಅದಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಮಡಿಕೇರಿಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ. ಶಾಸಕ ಪೊನ್ನಣ್ಣ ಕೂಡ ತಮ್ಮ ಮನೆಯವರದೇ ವಿಷಯವಾಗಲಿ ನಮ್ಮ ಸರ್ಕಾರದ ಸಚಿವರು ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಸಮರ್ಥಿಸಿಕೊಂಡರು.