ಕೇವಲ 10 ಗುಂಟೆ ಜಮೀನಿನಲ್ಲಿ 50ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡ ದೊಡ್ಡಬಳ್ಳಾಪುರ ತಾಲೂಕಿನ ರೈತ ಮುನಿಬೈರಪ್ಪ ಅವರ ರೋಚಕ ಯಶಸ್ವಿ ಸಾವಯವ ಕೃಷಿ ಪಯಣ ಮತ್ತು ಸಮಗ್ರ ಕೃಷಿ ಮಾದರಿಯ ಪೂರ್ಣ ವಿವರ ಇಲ್ಲಿದೆ.

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯ ಕೋಡಿಹಳ್ಳಿ ಗ್ರಾಮದ ರೈತ ಮುನಿಬೈರಪ್ಪ ಕೇವಲ 10 ಗುಂಟೆ (ಕಾಲು ಎಕರೆ) ಜಮೀನಿನಲ್ಲಿ ಸಮಗ್ರ ಸಾವಯವ ಕೃಷಿ ಮಾಡುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹಿಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಇವರು, ಕಾರಣಾಂತರಗಳಿಂದ ಕೆಲಸ ಸ್ಥಗಿತಗೊಂಡಾಗ ಬೇರೆಯವರ ಬಳಿ ಉದ್ಯೋಗಕ್ಕೆ ಅಲೆಯುವ ಬದಲು, ತಮಗಿದ್ದ ಕೇವಲ 10 ಗುಂಟೆ ಜಮೀನನ್ನೇ ನಂಬಿ ಕೃಷಿಗೆ ಧುಮುಕಿದರು. ಇಂದು 5 ರಿಂದ 10 ಎಕರೆ ನೀರಾವರಿ ಜಮೀನಿರುವ ದೊಡ್ಡ ಬೃಹತ್ ಜಮೀನ್ದಾರರು ಹಾಗೂ ರೈತರು ಇವರ 10 ಗುಂಟೆಯ ಪುಟ್ಟ ತೋಟವನ್ನು ವೀಕ್ಷಿಸಲು ಮತ್ತು ಕೃಷಿ ಸಲಹೆ ಪಡೆಯಲು ದಿನನಿತ್ಯ ಧಾವಿಸುತ್ತಿರುವುದು ಇವರ ಅಪರೂಪದ ಸಾಧನೆಗೆ ಸಾಕ್ಷಿಯಾಗಿದೆ.

50ಕ್ಕೂ ಹೆಚ್ಚು ವಿಧದ ಬೆಳೆಗಳ ಸಮೃದ್ಧ ವೈವಿಧ್ಯ!

ಆರಂಭದಲ್ಲಿ ಸಂಪೂರ್ಣ ಸವಳು ಭೂಮಿಯಾಗಿದ್ದ ಈ ಜಾಗಕ್ಕೆ ವರ್ಷದಿಂದ ವರ್ಷಕ್ಕೆ ಕೆಂಪು ಮಣ್ಣು, ಗೋಡು ಮಣ್ಣು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನ ಗುಣಮಟ್ಟವನ್ನು ಹಂತ ಹಂತವಾಗಿ ಹೆಚ್ಚಿಸಿಕೊಂಡಿದ್ದಾರೆ. ಕೇವಲ 10 ಗುಂಟೆ ಜಾಗದಲ್ಲೇ 20ಕ್ಕೂ ಹೆಚ್ಚು ಪ್ರಮುಖ ಬೆಳೆಗಳು ಸೇರಿದಂತೆ ಒಟ್ಟಾರೆಯಾಗಿ ೫೦ಕ್ಕೂ ಹೆಚ್ಚು ವೈವಿಧ್ಯಮಯ ಸಸಿ ಹಾಗೂ ಗಿಡ-ಮರಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ. 4 ವರ್ಷ ಪ್ರಾಯದ 100 ಅಡಿಕೆ ಗಿಡಗಳು (ಪ್ರಸ್ತುತ ಹೂವು/ಒಂಬಳೆ ಬಿಡಲು ಆರಂಭವಾಗಿವೆ), ಬೌಂಡರಿ ಸಾಲಿನಲ್ಲಿ 15 ತೆಂಗಿನ ಮರಗಳು ಹಾಗೂ 40 ಬಾಳೆ ಗಿಡಗಳು. ಅಡಿಕೆ ಸಾಲುಗಳ ನಡುವೆ ಸುವಾಸನಾಯುಕ್ತ ಯಾಲಕ್ಕಿ, ನಿರಂತರ ದಿನನಿತ್ಯದ ಆದಾಯ ನೀಡುವ ವೀಳ್ಳೇದೆಲೆ, ಸಪೋಟ, ದಾಳಿಂಬೆ, ಪಪಾಯಿ, ಎರಡು ತಳಿಯ ಕಬ್ಬು ನಿಂಬೆ ಹಾಗೂ ಎಳ್ಳಿಕಾಯಿ. ನುಗ್ಗೆ, ಬೆಟ್ಟದ ನೆಲ್ಲಿ, ಆಕಾಶ ಮೆಣಸಿನಕಾಯಿ, ಬೀನ್ಸ್, ಅಲಸಂದಿ, ನಾಟಿ ಈರುಳ್ಳಿ, ಚಕೋತಾ, ಅಗಸೆ, ಬೂರಗ ಹಾಗೂ ಮನೆ ಬಳಕೆಗೆ ಬೇಕಾಗುವ ವಿವಿಧ ತಾಜಾ ಸೊಪ್ಪುಗಳನ್ನು ಬೆಳೆದಿದ್ದಾರೆ.

ಕೃಷಿ ಹೊಂಡ, ಮೀನು ಸಾಕಾಣಿಕೆ ಹಾಗೂ ಜೇನು ಕೃಷಿ!

ಕೃಷಿಯ ಜೊತೆಗೆ ವಿವಿಧ ಉಪ ಕೃಷಿ ಚಟುವಟಿಕೆಗಳನ್ನು ಮುನಿಬೈರಪ್ಪ ಅತ್ಯಂತ ವಿಜ್ಞಾನಿಕವಾಗಿ ಅಳವಡಿಸಿಕೊಂಡಿದ್ದಾರೆ. ಕೃಷಿ ಹೊಂಡ ಹಾಗೂ ಮೀನು ಸಾಕಾಣಿಕೆ: ೧೦ ಗುಂಟೆ ಜಾಗದಲ್ಲೇ ಸಣ್ಣ ಕೃಷಿ ಹೊಂಡ ನಿರ್ಮಿಸಿದ್ದು, ಅದರಲ್ಲಿ ೧೫೦ ಮೀನುಗಳನ್ನು ಸಾಕುತ್ತಿದ್ದಾರೆ. ಈ ಹೊಂಡದ ಪೋಷಕಾಂಶಯುಕ್ತ ನೀರನ್ನೇ ಮರುಬಳಕೆ ಮಾಡಿ ತೋಟದ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಪಡೆದ ಜೇನು ಪೆಟ್ಟಿಗೆಗಳನ್ನು ತೋಟದಲ್ಲಿಟ್ಟು, ಜೇನುನೊಣಗಳಿಂದ ಉತ್ತಮ ಪರಾಗಸ್ಪರ್ಶ ಉಂಟಾಗಿ ಬೆಳೆಗಳ ಇಳುವರಿಯನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. 70 ಅಡಿ ಆಳದ ಬೋರ್‌ವೆಲ್ ಹೊಂದಿದ್ದು, ವಿದ್ಯುತ್ ಅಭಾವ ಎದುರಾದಾಗ 1/2 ಲೀಟರ್ ಪೆಟ್ರೋಲ್‌ನಲ್ಲಿ ಮೋಟಾರ್ ಚಲಾಯಿಸಿ ಇಡೀ ತೋಟಕ್ಕೆ ನೀರುಣಿಸುವ ತಾಂತ್ರಿಕತೆಯನ್ನು ಸ್ವತಃ ಕಂಡುಹಿಡಿದುಕೊಂಡಿದ್ದಾರೆ.

ರಾಸಾಯನಿಕ ಮುಕ್ತ ಸಾವಯವ ಕೃಷಿ!

ಮಾರುಕಟ್ಟೆಯ ಇಂಗ್ಲಿಷ್ ರಾಸಾಯನಿಕ ಗೊಬ್ಬರಗಳನ್ನು ಸಂಪೂರ್ಣವಾಗಿ ತ್ಯಜಿಸಿರುವ ಮುನಿಬೈರಪ್ಪ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ರಾಗಿ ಹುಲ್ಲಿನ ಹೊದಿಕೆಯನ್ನು ಮಣ್ಣಿಗೆ ಬಳಸುತ್ತಿದ್ದಾರೆ. ತಮ್ಮ ತೋಟದಲ್ಲಿ ಸಾಕಿರುವ ಕುರಿ, ನಾಟಿ ಕೋಳಿಗಳ ತ್ಯಾಜ್ಯವನ್ನೇ ತೋಟಕ್ಕೆ ನೈಸರ್ಗಿಕ ಗೊಬ್ಬರವಾಗಿಸಿದ್ದಾರೆ. ಇದರಿಂದಾಗಿ ಇವರ ತೋಟದ ಯಾಲಕ್ಕಿ, ಮೆಣಸಿನಕಾಯಿ ಹಾಗೂ ತರಕಾರಿಗಳ ರುಚಿ, ಸುವಾಸನೆ ಮತ್ತು ಪ್ರಕೃತಿ ಸಿದ್ಧ ಗುಣಮಟ್ಟಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಅಧಿಕಾರಿಗಳ ಮೆಚ್ಚುಗೆ ಹಾಗೂ ವಾರ್ಷಿಕ ಲಕ್ಷಾಂತರ ರೂ. ಆದಾಯ!

ಆರಂಭದಲ್ಲಿ "ಬರಿ 10 ಗುಂಟೆಯಲ್ಲಿ ಏನ್ ಮಾಡಲು ಸಾಧ್ಯ, ಇವನೇನೋ ತಿಕ್ಕಲು ಕೆಲಸ ಮಾಡ್ತಿದ್ದಾನೆ" ಎಂದು ಗೇಲಿ ಮಾಡಿದ್ದ ನೆರೆಹೊರೆಯವರೇ ಇಂದು ಇವರ ಕೃಷಿ ಮಾದರಿ ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ ಆಡೇನಹಳ್ಳಿ) ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇವರ ತೋಟಕ್ಕೆ ಭೇಟಿ ನೀಡಿ ಶ್ಲಾಘಿಸಿದ್ದು, ಕುರಿ ಶೇಡ್ ನಿರ್ಮಾಣಕ್ಕೂ ಪ್ರೋತ್ಸಾಹ ನೀಡಿದ್ದಾರೆ. ಪ್ರಸ್ತುತ ವೀಳ್ಳೇದೆಲೆ, ಯಾಲಕ್ಕಿ (ಕೆಜಿ ಗೆ ₹2,200 ಧಾರಣೆ), ಮೆಣಸಿನಕಾಯಿ ಮಾರಾಟದಿಂದ ವಾರಕ್ಕೊಮ್ಮೆ ಕೈತುಂಬಾ ಆದಾಯ ಪಡೆಯುತ್ತಿದ್ದು, ಮುಂಬರುವ 2-3 ವರ್ಷಗಳಲ್ಲಿ ಅಡಿಕೆ ಹಾಗೂ ಯಾಲಕ್ಕಿ ಕೊಯ್ಲಿನಿಂದ ವಾರ್ಷಿಕ 2 ರಿಂದ 3 ಲಕ್ಷ ರೂಪಾಯಿ ನಿವ್ವಳ ಆದಾಯ ಗಳಿಸುವ ದೃಢ ವಿಶ್ವಾಸ ಹೊಂದಿದ್ದಾರೆ.

'ಭೂಮಿ ಮಾರದಿರಿ' - ರೈತ ಸಮುದಾಯಕ್ಕೆ ಮುನಿಬೈರಪ್ಪ ಸಂದೇಶ!

"ಇಂದಿನ ದಿನಗಳಲ್ಲಿ ಬಂಗಾರಕ್ಕಿಂತ ಭೂಮಿಯ ಬೆಲೆಯೇ ಹೆಚ್ಚಾಗಿದೆ. ದುಡ್ಡಿನ ಆಸೆಗೆ ಬಿದ್ದು ಜಮೀನು ಮಾರಾಟ ಮಾಡುವ ಬದಲು, ಎಷ್ಟೇ ಸಣ್ಣ ಜಾಗವಿದ್ದರೂ ಶ್ರದ್ಧೆ ಮತ್ತು ದುಡಿಮೆಯಿಂದ ಕೃಷಿ ಮಾಡಿದರೆ ಸ್ವಾವಲಂಬಿ ಜೀವನ ನಡೆಸಬಹುದು. ಪ್ರತಿಯೊಬ್ಬರೂ ತಮ್ಮ ಜಮೀನನ್ನು ಪ್ರೀತಿಯಿಂದ ಸಾಕಿ ಬೆಳೆಸಬೇಕು" ಎಂಬುದು ಸಾಧಕ ರೈತ ಮುನಿಬೈರಪ್ಪ ಅವರ ಅನುಭವದ ನುಡಿಯಾಗಿದೆ.