ಕರ್ನಾಟಕ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆಯಲ್ಲಿ ಸಾರಿಗೆ ಮತ್ತು ವಸತಿ ಕ್ಷೇತ್ರಕ್ಕೆ ಭರ್ಜರಿ ಅನುದಾನ ಘೋಷಣೆಯಾಗಿದ್ದು, 2000 ನೂತನ ಇವಿ ಬಸ್ಗಳ ಖರೀದಿ ಹಾಗೂ ₹21,900 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಅಸ್ತು ನೀಡಲಾಗಿದೆ. ಈ ಯೋಜನೆಗಳ ಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸಚಿವ ಸಂಪುಟವು ಗುರುವಾರ ಒಟ್ಟು ₹21,900 ಕೋಟಿಗೂ ಅಧಿಕ ಮೊತ್ತದ ಪ್ರಮುಖ ಮೂಲಸೌಕರ್ಯ ಮತ್ತು ವಸತಿ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಂಪುಟ ಸಭೆಯ ಬಳಿಕ ಈ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ವಸತಿ ಯೋಜನೆಗಳು!
₹11,655 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 6,600 ಎಕರೆ ಪ್ರದೇಶದಲ್ಲಿ 93,240 ನಿವೇಶನಗಳನ್ನು ಅಭಿವೃದ್ಧಿಪಡಿಸುವ ಮುಖ್ಯಮಂತ್ರಿಗಳ 'ನಮ್ಮ ಮನೆ' ಯೋಜನೆಗೆ ಸಂಪುಟ ಅಸ್ತು ಎಂದಿದೆ. ಇದರಲ್ಲಿ 50,000 ನಿವೇಶನಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮತ್ತು ಸಮುದಾಯದ ಕಾರ್ಯಕರ್ತರಿಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು. ನಿವೇಶನ ಅಭಿವೃದ್ಧಿ ವೆಚ್ಚವನ್ನು ಸರ್ಕಾರವೇ ಶೇ. 100ರಷ್ಟು ಭರಿಸಲಿದೆ. ಒಟ್ಟು 24,000 ಎಕರೆ ಗುರುತಿಸಲಾಗಿದ್ದು, ಡಿಸೆಂಬರ್ ಅಂತ್ಯ ಅಥವಾ ಜನವರಿ ವೇಳೆಗೆ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳ ಗುರಿ ಹೊಂದಲಾಗಿದೆ.
1 ಲಕ್ಷ ಮನೆ ನಿರ್ಮಾಣ!
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ₹2,241 ಕೋಟಿ ವೆಚ್ಚದಲ್ಲಿ 1 ಲಕ್ಷ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಂತಾಗಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಬ್ಸಿಡಿಯನ್ನು ₹1.2 ಲಕ್ಷದಿಂದ ₹2 ಲಕ್ಷಕ್ಕೆ ಹಾಗೂ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ KSHIP-IV ಯೋಜನೆಯನ್ನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೆರವಿನೊಂದಿಗೆ ₹10,252.58 ಕೋಟಿ ವೆಚ್ಚದಲ್ಲಿ 12 ಜಿಲ್ಲೆಗಳ ವ್ಯಾಪ್ತಿಯ 730.01 ಕಿ.ಮೀ. ಉದ್ದದ 9 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ.
ಬೆಂಗಳೂರು ರಸ್ತೆ ವೈಟ್-ಟಾಪಿಂಗ್!
ಬೆಂಗಳೂರಿನಲ್ಲಿ 12 ಪ್ಯಾಕೇಜ್ಗಳ ಅಡಿಯಲ್ಲಿ 130.85 ಕಿ.ಮೀ. ಉದ್ದದ 88 ರಸ್ತೆಗಳ ವೈಟ್-ಟಾಪಿಂಗ್ಗಾಗಿ ₹2,321.17 ಕೋಟಿ ಅನುದಾನ ನೀಡಲಾಗಿದೆ. ಹೊರ ವರ್ತುಲ ರಸ್ತೆ, ಸಿಲ್ಕ್ ಬೋರ್ಡ್-ಕೆಆರ್ ಪುರಂ ಮೆಟ್ರೋ ನಿಲ್ದಾಣದ ಮಾರ್ಗದ ಪರಿಷ್ಕೃತ ಅಂದಾಜು ₹486.79 ಕೋಟಿಗೆ ಒಪ್ಪಿಗೆ ಸಿಕ್ಕಿದೆ (ರಾಜ್ಯ ಸರ್ಕಾರ ಮತ್ತು 5 ನಗರ ಪಾಲಿಕೆಗಳು ವೆಚ್ಚವನ್ನು ಸಮಾನವಾಗಿ ಭರಿಸಲಿವೆ). ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮತ್ತು ಸಾಗಣೆಗಾಗಿ ₹1,379.62 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಂಪುಟ ಸಭೆಯಲ್ಲಿ ತಿಳಿಸಲಾಗಿದೆ.
ಎಲೆಕ್ಟ್ರಿಕ್ ಬಸ್ಗಳು!
ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಮಾದರಿಯಲ್ಲಿ ₹1,700 ಕೋಟಿ ವೆಚ್ಚದಲ್ಲಿ 2,000 ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಒಪ್ಪಿಗೆ ಸಿಕ್ಕಿದ್ದು, ಇದಕ್ಕೆ ವಿಶ್ವಬ್ಯಾಂಕ್ ₹1,400 ಕೋಟಿ ನೆರವು ನೀಡಲಿದ್ದು, ರಾಜ್ಯ ಸರ್ಕಾರ ₹300 ಕೋಟಿ ಭರಿಸಲಿದೆ. ಬಡ್ಡಿ ಮನ್ನಾ: 2012-13 ಮತ್ತು 2020-21ರ ನಡುವೆ 7 ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಂದ 2.83 ಲಕ್ಷ ಫಲಾನುಭವಿಗಳಿಗೆ ವಿತರಿಸಲಾದ ₹977.81 ಕೋಟಿ ಸಾಲದ ಮೇಲಿನ ₹236.04 ಕೋಟಿ ಬಡ್ಡಿ ಮನ್ನಾ (ಒನ್-ಟೈಮ್ ಸೆಟಲ್ಮೆಂಟ್). ಇದಕ್ಕೆ ಫಲಾನುಭವಿಗಳು 6 ತಿಂಗಳೊಳಗೆ ಅಸಲು ಪಾವತಿಸಬೇಕು. 3 ವರ್ಷಗಳಲ್ಲಿ ₹100 ಕೋಟಿ ವೆಚ್ಚದ 'ಮುಖ್ಯಮಂತ್ರಿಗಳ ಕೃಷಿ ವಿಸ್ತಾರ' ಯೋಜನೆಗೂ ಸಂಪುಟ ಅಸ್ತು (2026-27ಕ್ಕೆ ₹30 ಕೋಟಿ ಮೀಸಲು) ಎಂದಿದೆ. ಇದು 31 ಜಿಲ್ಲೆಗಳ 10,000 ರೈತ ಕುಟುಂಬಗಳಿಗೆ ನೆರವಾಗಲಿದೆ.
ಇತರ ಪ್ರಮುಖ ಸಂಪುಟ ನಿರ್ಧಾರಗಳು!
ಬಿಇ (BE) ಮತ್ತು ಬಿಸಿಎ (BCA) ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಲಾ ಸುಮಾರು ₹50,000 ಮೌಲ್ಯದ 5,000 ಲ್ಯಾಪ್ಟಾಪ್ಗಳನ್ನು ನೀಡಲು ₹25 ಕೋಟಿ ಮಂಜೂರು ಮಾಡಲಾಗಿದೆ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನು ಅಮಾನತುಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. 52-54 ಮೀಟರ್ ಎತ್ತರದ ಅತ್ಯಾಧುನಿಕ ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ವಾಹನ ಖರೀದಿಗೆ ₹16 ಕೋಟಿ ಮಂಜೂರು ಮಾಡಲಾಗಿದೆ ಎನ್ನುವುದು ತಿಳಿದು ಬಂದಿದೆ.
ಪಂಚಾಯತ್ ಚುನಾವಣೆ!
ತಾ.ಪಂ, ಜಿ.ಪಂ ಕ್ಷೇತ್ರಗಳಿಗೆ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಿದೆ. ಮಾರ್ಚ್ 4, 2021ರಿಂದ ಪೂರ್ವಾನ್ವಯವಾಗುವಂತೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸ್ಟಾರ್ ಹೋಟೆಲ್ಗಳಿಗೆ ನೀಡಿದ್ದ ಆಸ್ತಿ ತೆರಿಗೆ ರಿಯಾಯಿತಿ ಆದೇಶ ಹಿಂಪಡೆಯಲಾಗಿದೆ ಎನ್ನುವುದು ಸಭೆಯಲ್ಲಿ ದಾಖಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ ಒಂದು ಜೊತೆ ಸಮವಸ್ತ್ರ (ಎರಡು ಸೀರೆ) ನೀಡಲು ₹27.97 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಂಪುಟ ತಿಳಿಸಿದೆ.















