ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ದೊಡ್ಡ ಶಿಕ್ಷಣ, ಲಕ್ಷಾಂತರ ರೂಪಾಯಿ ಬಂಡವಾಳವೇ ಬೇಕೆಂದಿಲ್ಲ. ಗಟ್ಟಿಯಾದ ಪರಿಶ್ರಮ, ತಾಳ್ಮೆ ಮತ್ತು ಸ್ವಾವಲಂಬನೆಯ ಛಲವಿದ್ದರೆ ಸಾಮಾನ್ಯ ವ್ಯಕ್ತಿಯೂ ಬದುಕಿನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು. ಇದಕ್ಕೆ ಸಾಕ್ಷಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಬೀರಪ್ಪ ಮಾಯಪ್ಪ ಪೂಜಾರಿ.

ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ದೊಡ್ಡ ಶಿಕ್ಷಣ, ಲಕ್ಷಾಂತರ ರೂಪಾಯಿ ಬಂಡವಾಳವೇ ಬೇಕೆಂದಿಲ್ಲ. ಗಟ್ಟಿಯಾದ ಪರಿಶ್ರಮ, ತಾಳ್ಮೆ ಮತ್ತು ಸ್ವಾವಲಂಬನೆಯ ಛಲವಿದ್ದರೆ ಸಾಮಾನ್ಯ ವ್ಯಕ್ತಿಯೂ ಬದುಕಿನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬಹುದು. ಇದಕ್ಕೆ ಸಾಕ್ಷಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಬೀರಪ್ಪ ಮಾಯಪ್ಪ ಪೂಜಾರಿ. ಒಮ್ಮೆ ಕುರಿ ಕಾಯುತ್ತಾ ದಿನ ಕಳೆಯುತ್ತಿದ್ದ ಇವರು, ಇಂದು ಸ್ವಂತ ಜಮೀನು, ಮನೆ ಮತ್ತು ಕುರಿಗಳ ಹಿಂಡನ್ನು ಹೊಂದಿದ್ದಾರೆ. 75 ವರ್ಷ ವಯಸ್ಸಾದರೂ ಇಂದಿಗೂ ಕುರಿಗಳ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

600 ರೂಪಾಯಿಯಿಂದ ಆರಂಭವಾದ ಬದುಕು

ಬೀರಪ್ಪ ಮಾಯಪ್ಪ ಪೂಜಾರಿ ಮೂಲತಃ ಬೆಳಗಾವಿ ಜಿಲ್ಲೆಯವರು. ತಮ್ಮ ಕುಟುಂಬದೊಂದಿಗೆ ಕುರಿಗಳನ್ನು ಕಟ್ಟಿಕೊಂಡು ಲಾರಿಯಲ್ಲಿ ಹುಬ್ಬಳ್ಳಿಯ ವರೂರಿಗೆ ಬಂದಿದ್ದರು. ಆರಂಭದಲ್ಲಿ ಮೂವರು ಸಹೋದರರು ಸೇರಿ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತಂದೆಯ ನಿಧನದ ಬಳಿಕ ಕುರಿಗಳನ್ನು ಹಂಚಿಕೊಂಡಾಗ ಬೀರಪ್ಪನವರಿಗೆ ಸುಮಾರು 50 ಕುರಿಗಳು ಬಂದಿದ್ದವು. ಅಷ್ಟಕ್ಕೆ ತೃಪ್ತರಾಗದ ಅವರು, ಮತ್ತೆ ಪರಿಶ್ರಮಪಟ್ಟು ಕುರಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಇದಕ್ಕೂ ಮೊದಲು ಮಹಾರಾಷ್ಟ್ರದ ಬುಗ್ಗಡಿಗಟ್ಟಿಯಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ದೊಡ್ಡ ಸಾಹುಕಾರರ ಮನೆಯಲ್ಲಿ ಕುರಿ ಕಾಯುವ ಕೆಲಸ ಮಾಡಿದ್ದರು. ಆಗಿನ ದಿನಗಳಲ್ಲಿ ಕುರಿ ಕಾಯುವ ಕೆಲಸಕ್ಕೆ ದೊಡ್ಡ ಸಂಬಳವೇನೂ ಸಿಗುತ್ತಿರಲಿಲ್ಲ. ವರ್ಷಕ್ಕೆ ಒಂದು ಕುರಿಮರಿಯನ್ನು ಕೊಡುತ್ತಿದ್ದರು. ಆದರೆ ಆ ಮರಿಗಳಲ್ಲಿ ಕೆಲವು ಸಾಯುತ್ತಿದ್ದರಿಂದ ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಒಂದು ಕಾಲದಲ್ಲಿ 600 ರೂಪಾಯಿಯನ್ನೂ ದೊಡ್ಡ ಮೊತ್ತವೆಂದು ಪರಿಗಣಿಸುತ್ತಿದ್ದ ದಿನಗಳನ್ನು ಬೀರಪ್ಪ ನೆನಪಿಸಿಕೊಳ್ಳುತ್ತಾರೆ. 80 ರೂಪಾಯಿಗೆ ಒಂದು ಕುರಿ ಹಾಗೂ ಕುರಿಮರಿ ಖರೀದಿಸುತ್ತಿದ್ದ ಕಾಲವನ್ನೂ ಅವರು ಸ್ಮರಿಸುತ್ತಾರೆ. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಕುರಿ ಸಾಕಾಣಿಕೆಯೇ ಮುಂದೆ ಅವರ ಬದುಕಿಗೆ ಆಧಾರವಾಯಿತು. ಈಗ ಇವರ ಬಳಿ 800 ಕುರಿಗಳು ಇವೆಯಂತೆ.

ದಿನಕ್ಕೆ 20-25 ಕಿ.ಮೀ. ನಡಿಗೆ

ಇಂದಿನಂತೆ ಆಗ ಕುರಿಗಳಿಗೆ ಬೇಕಾದ ಸೌಲಭ್ಯಗಳಿರಲಿಲ್ಲ. ನೀರಾವರಿ ವ್ಯವಸ್ಥೆ, ಬೋರ್‌ವೆಲ್‌ಗಳು ಮತ್ತು ಪಶು ವೈದ್ಯಕೀಯ ಸೌಲಭ್ಯಗಳು ಎಲ್ಲೆಡೆ ಇರಲಿಲ್ಲ. ಕುರಿಗಳನ್ನು ಮೇಯಿಸಲು ಪ್ರತಿದಿನ ಸುಮಾರು 20ರಿಂದ 25 ಕಿಲೋಮೀಟರ್‌ಗಳವರೆಗೆ ನಡೆಯಬೇಕಾಗುತ್ತಿತ್ತು. ಬೇರೆ ರೈತರ ಜಮೀನುಗಳಲ್ಲಿ ಕುರಿಗಳನ್ನು ಮೇಯಿಸಲು ಅನುಮತಿ ಕೇಳಬೇಕಿತ್ತು. ಕೆಲವೊಮ್ಮೆ ರೈತರು ಬೈದರೂ ಸಹಿಸಿಕೊಂಡು ಕುರಿಗಳನ್ನು ಮೇಯಿಸಿಕೊಂಡು ಬರುತ್ತಿದ್ದ ದಿನಗಳಿದ್ದವು ಎಂದು ಬೀರಪ್ಪ ಹೇಳುತ್ತಾರೆ.

ಹಿಂದೆ ಒಂದು ಕುರಿಗೆ ಆರೋಗ್ಯ ಸಮಸ್ಯೆ ಬಂದರೆ ಬದುಕುಳಿಯುವ ಖಾತರಿ ಇರಲಿಲ್ಲ. ಆದರೆ ಈಗ ಪಶುವೈದ್ಯಕೀಯ ಚಿಕಿತ್ಸೆ, ಇಂಜೆಕ್ಷನ್ ಮತ್ತು ಔಷಧಿಗಳು ಲಭ್ಯವಿರುವುದರಿಂದ ಕುರಿಗಳನ್ನು ಉಳಿಸಿಕೊಳ್ಳುವುದು ಸುಲಭವಾಗಿದೆ. ಹಿಂದೆ ಒಂದು ಕುರಿಯಿಂದ ಒಂದು ಮರಿಯಷ್ಟೇ ಸಿಗುತ್ತಿದ್ದರೆ, ಈಗ ಕೆಲವು ಕುರಿಗಳು ಎರಡು ಮರಿಗಳನ್ನು ಹಾಕುವುದರಿಂದ ಸಾಕಾಣಿಕೆಯಲ್ಲಿ ಲಾಭವೂ ಹೆಚ್ಚಾಗಿದೆ.

ಕಂಬಳಿಯ ಸಂಸ್ಕೃತಿ ಮರೆಯಾಗುತ್ತಿದೆ

ಕುರಿ ಸಾಕಾಣಿಕೆಯ ಜೊತೆಗೆ ಕುರುಬ ಸಮುದಾಯದ ಸಂಪ್ರದಾಯಗಳ ಬಗ್ಗೆಯೂ ಬೀರಪ್ಪ ಮಾತನಾಡುತ್ತಾರೆ. ಹಿಂದೆ ಕುರಿಗಳ ಉಣ್ಣೆಯಿಂದ ತಯಾರಿಸಿದ ಕಂಬಳಿಗೆ ವಿಶೇಷ ಮಹತ್ವವಿತ್ತು. ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಕಂಬಳಿಯನ್ನು ಹಾಸಿ ಪೂಜೆ ಸಲ್ಲಿಸುವ ಪದ್ಧತಿಯೂ ಇತ್ತು. ಆದರೆ ಈಗ ಆ ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿವೆ. ಶುದ್ಧ ಉಣ್ಣೆಯ ಕಂಬಳಿಗಳ ಬಳಕೆ ಕಡಿಮೆಯಾಗುತ್ತಿರುವುದರ ಬಗ್ಗೆ ಅವರಿಗೆ ಬೇಸರವಿದೆ.

ಮಕ್ಕಳಿಗೂ ಕುರಿಗಳ ಹಂಚಿಕೆ, ಇಂದಿಗೂ ಅದೇ ಕಾಯಕ

ಕುರಿ ಸಾಕಾಣಿಕೆಯಿಂದ ಬಂದ ಆದಾಯದಲ್ಲಿ ಜಮೀನು ಖರೀದಿಸಿ, ಮನೆ ನಿರ್ಮಿಸಿಕೊಂಡ ಬೀರಪ್ಪ, ಮಕ್ಕಳಿಗೂ ಕುರಿಗಳನ್ನು ಹಂಚಿದ್ದಾರೆ. ಮಕ್ಕಳಿಗೂ ತಲಾ 30 ಕುರಿಗಳನ್ನು ನೀಡಿರುವುದಾಗಿ ಅವರು ಹೇಳುತ್ತಾರೆ. ಕುಟುಂಬದೊಂದಿಗೆ ಸೇರಿ ಜಮೀನು ಖರೀದಿಸಿ ಕೃಷಿಯನ್ನೂ ಆರಂಭಿಸಿದ್ದಾರೆ.

75 ವರ್ಷ ವಯಸ್ಸಿನ ಬೀರಪ್ಪನವರಿಗೆ ಹಿಂದೆ ಆರೋಗ್ಯ ಸಮಸ್ಯೆಯೂ ಎದುರಾಗಿತ್ತು. ಕಣ್ಣಿನ ತೊಂದರೆಯಿಂದ ಒಂದು ತಿಂಗಳ ಕಾಲ ಸರಿಯಾಗಿ ಕಾಣಿಸದೆ ಕಷ್ಟಪಟ್ಟಿದ್ದರು. ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡಿದ್ದಾರೆ. ಈಗಲೂ ಕುರಿಗಳ ಮರಿಗಳ ಆರೈಕೆ, ಅವುಗಳಿಗೆ ನೀರು ಕೊಡುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ.

ಬದುಕಿನಲ್ಲಿ ಕಷ್ಟಗಳನ್ನು ಎದುರಿಸಿ, ಕುರಿ ಕಾಯುವ ಕೆಲಸದಿಂದ ಸ್ವಂತ ಆಸ್ತಿ ಮಾಡಿಕೊಂಡ ಬೀರಪ್ಪ ಮಾಯಪ್ಪ ಪೂಜಾರಿ ಅವರ ಜೀವನ ಪರಿಶ್ರಮಕ್ಕೆ ಒಂದು ಮಾದರಿ. ವಯಸ್ಸು 75 ದಾಟಿದರೂ ತಮ್ಮ ಕಾಯಕದ ಮೇಲಿನ ಪ್ರೀತಿ ಮತ್ತು ಆತ್ಮವಿಶ್ವಾಸವನ್ನು ಅವರು ಇಂದಿಗೂ ಬಿಟ್ಟುಕೊಟ್ಟಿಲ್ಲ.