ಖ್ಯಾತ ನಾಟಿ ವೈದ್ಯ ನರಸೀಪುರ ನಾರಾಯಣಮೂರ್ತಿ ನಿಧನ
ಕ್ಯಾನ್ಸರ್, ಕಿಡ್ನಿಸ್ಟೋನ್ ಮತ್ತಿತರ ರೋಗಗಳಿಗೆ ಔಷಧ ನೀಡುತ್ತಿದ್ದ ನರಸೀಪುರದ ಖ್ಯಾತ ನಾಟಿ ವೈದ್ಯ ನಾರಾಯಣಮೂರ್ತಿ(80) ಬುಧವಾರ(ಜೂ.24) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.25): ಖ್ಯಾತ ಆಯುರ್ವೇದ ಪಂಡಿತ ಸಾಗರ ತಾಲೂಕು ಆನಂದಪುರ ಸಮೀಪದ ನರಸೀಪುರದ ಆಯುರ್ವೇದ ಪಂಡಿತರಾಗಿದ್ದ ನಾರಾಯಣಮೂರ್ತಿ (80) ಬುಧವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟರು.
ನರಸೀಪುರದ ತಮ್ಮ ಮನೆಯಲ್ಲಿ ಊಟ ಮಾಡಿದ ಬಳಿಕ ತೀವ್ರ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಸಾಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ನಾಲ್ವರು ಪುತ್ರಿಯರು ಇದ್ದಾರೆ.
ವಂಶ ಪಾರಂಪರ‍್ಯವಾಗಿ ಆಯುರ್ವೇದ ಚಿಕಿತ್ಸಾ ಪದ್ಧತಿ ಕಲಿತಿದ್ದ ಅವರು ಹಲವು ದಶಕಗಳಿಂದ ಹಲವಾರು ಚಿಕಿತ್ಸೆಗಳಿಗೆ ವನೌಷಧದ ಚಿಕಿತ್ಸೆ ನೀಡುತ್ತಿದ್ದರು. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್, ಕಿಡ್ನಿಸ್ಟೋನ್ ಮತ್ತಿತರ ರೋಗಗಳಿಗೆ ಇವರು ನೀಡುತ್ತಿದ್ದ ಔಷಧ ರಾಮಬಾಣವಾಗಿತ್ತು. ಇವರ ಬಳಿ ದೇಶದ ಹಲವಾರು ಭಾಗಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ಚಿಕಿತ್ಸೆಗಾಗಿ ಜನರು ಆಗಮಿಸುತ್ತಿದ್ದರು.
ನರಸೀಪುರ ನಾಟಿ ವೈದ್ಯ ನಾರಾಯಣ ಮೂರ್ತಿ ಭೇಟಿಯಾದ ಸಚಿವ ಈಶ್ವರಪ್ಪ
ಕಳೆದ ತಿಂಗಳಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ ನರಸೀಪುರಕ್ಕೆ ಆಗಮಿಸಿ ನಾರಾಯಣಮೂರ್ತಿ ಅವರೊಂದಿಗೆ ಉಭಯಕುಶಲೋಪರಿ ನಡೆಸಿದ್ದರು. ಈ ವೇಳೆ ವೈದ್ಯ ನಾರಾಯಣಮೂರ್ತಿ ಮೇಘಾಲಯದ ಸಚಿವರೊಬ್ಬರಿಗೆ ತಾವು ನೀಡಿದ ಔಷಧದಿಂದ ಕಾಯಿಲೆ ಗುಣವಾಗಿರುವುದಾಗಿಯೂ ತಿಳಿಸಿದ್ದರು.