ಸಾಗರದ ಖ್ಯಾತ ನಾಟಿ ವೈದ್ಯ ನಾರಾಯಣ ಮೂರ್ತಿ ನಿವಾಸಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. 

ತ್ಯಾಗರ್ತಿ(ಮೇ.28): ನರಸೀಪುರದ ನಾಟಿ ಔಷ​ಧಿಯಿಂದ ಮೇಘಾಲಯದ ಸಚಿವರೊಬ್ಬರಿಗೆ ಕ್ಯಾನ್ಸರ್‌ ಕಾಯಿಲೆ ವಾಸಿಯಾಗಿದ್ದು ಇಲ್ಲಿನ ಪಾರಂಪರಿಕ ಔಷ​ಧಿಯಿಂದ ಅನೇಕ ಜನರಿಗೆ ಅನುಕೂಲವಾಗಿದೆ. ಇದರ ಬಗ್ಗೆ ನಂಬಿಕೆ ಇದ್ದವರಿಗೆ ಔಷ​ಧ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಬುಧವಾರ ನರಸೀಪುರದ ನಾಟಿ ವೈದ್ಯ ನಾರಾಯಣಮೂರ್ತಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಹೊರ ಊರುಗಳಿಂದ ಔಷ​ಧ ಪಡೆಯಲು ಬರುವವರಿಗೆ ತೊಂದರೆಯಾಗಿದೆ. ಮೇಘಾಲಯದ ಸಚಿವರೊಬ್ಬರು ಔಷ​ಧ ಕಳಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದು ಇಲ್ಲಿಂದ ಅವರಿಗೆ ಆಪ್ತರ ಮೂಲಕ ಕಳಿಸಿಕೊಡಲಾಗಿತ್ತು. ಈಗ ಅವರು ಕಾಯಿಲೆ ವಾಸಿಯಾದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ನರಸೀಪುರದಲ್ಲಿ ಔಷಧ ನೀಡದಂತೆ ಜಿಲ್ಲಾ ಆರೋಗ್ಯ ಅ​ಧಿಕಾರಿಗಳು ಸೂಚನೆ ನೀಡಿದ್ದರಿಂದ ಇಲ್ಲಿ ನಾಟಿ ಔಷ​ಧ ಕೊಡುವುದನ್ನು ಕಳೆದ 2 ತಿಂಗಳಿನಿಂದ ನಿಲ್ಲಿಸಲಾಗಿತ್ತು. ಮುಂದಿನ ದಿನಗಳಲ್ಲಿ ಇಲ್ಲಿನ ನಾಟಿ ಔಷ​ಧ ಜನರಿಗೆ ಸಿಗುವಂತೆ ಮಾಡಲು ಜಿಲ್ಲಾ ಆರೋಗ್ಯ ಅ​ಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನಂಬಿಕೆ ಇದ್ದವರು ಬಂದು ಔಷ​ಧ ಪಡೆದುಕೊಳ್ಳಲು ಯಾರೂ ಅಡ್ಡಿ ಪಡಿಸದಂತೆ ಸಂಬಂಧಪಟ್ಟ ಅ​ಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ಗಣಪತಿ ಕೆರೆ ಸರ್ವೆ ವೀಕ್ಷಣೆಗೆ ಜನವೋ ಜನ

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನರಸೀಪುರದ ಮೂಲಸೌಕರ್ಯಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆಕ್ಷೇಪಣೆ ಇದ್ದು ಹೊರ ಊರುಗಳಿಂದ ಬರುವ ರೋಗಿಗಳು ಇಲ್ಲಿನ ವಾತಾವರಣ ಕಲುಷಿತಗೊಳಿಸುತ್ತಾರೆ ಎಂದು ಆಪಾದನೆ ಇದೆ. ಇದನ್ನು ಸರಿಪಡಿಸಲು ಸರ್ಕಾರದಿಂದ ಶೌಚಾಲಯ, ರಸ್ತೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ ಸೂಕ್ತ ಜಾಗ ಒದಗಿಸುವಂತೆ ನಾಟಿವೈದ್ಯರಿಗೆ ತಿಳಿಸಿದರು.