ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ, ಧರ್ಮಸ್ಥಳ ಸಂಘದ ಸಾಲ ಕಟ್ಟಲು ಇಟ್ಟಿದ್ದ ಹಣದಲ್ಲಿ ₹200 ತೆಗೆದುಕೊಂಡಿದ್ದಕ್ಕೆ ಪತಿಯೊಂದಿಗೆ ಜಗಳವಾಡಿದ ಪತ್ನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಸುಮಾ (30) ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ನೆಲಮಂಗಲ: ಅವರದ್ದು ಪುಟ್ಟ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು ಮತ್ತು ಒಂದು ಹಿರಿ ಜೀವ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವರು. ಬಡತನದ ನಡುವೆ ಜೀವನ ಹೇಗೂ ಸಾಗುತ್ತಿತ್ತು. ಆದರೆ ಧರ್ಮಸ್ಥಳ ಸಂಘದ ಸಾಲ ಕಟ್ಟಲು ಎತ್ತಿಟ್ಟಿದ್ದ ಹಣದಿಂದ ಗಂಡ 200 ರೂ ತೆಗೆದುಕೊಂಡು ಹೋಗಿ ಸಬೂಬು ಉತ್ತರ ಕೊಟ್ಟದ್ದಕ್ಕೆ ಪತ್ನಿ ಮನನೊಂದು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ಕ್ಷುಲ್ಲಕ ಕಾರಣವೊಂದು ಕುಟುಂಬವನ್ನೇ ನಡುಗಿಸುವ ಹೃದಯವಿದ್ರಾವಕ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಕೇವಲ ₹200 ವಿಚಾರವಾಗಿ ಗಂಡ–ಹೆಂಡತಿಯ ನಡುವೆ ಉಂಟಾದ ಗಲಾಟೆಯ ಬಳಿಕ ಮನನೊಂದ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ.
ಮೃತ ಮಹಿಳೆಯನ್ನು ಸುಮಾ (30) ಎಂದು ಗುರುತಿಸಲಾಗಿದ್ದು, ಅವರು ಇಬ್ಬರು ಮಕ್ಕಳ ತಾಯಿ. ಸುಮಾ ಅವರು ಸುಮಾರು ಎಂಟು ವರ್ಷಗಳ ಹಿಂದೆ ಚಂದ್ರಶೇಖರ್ ಎಂಬವರನ್ನು ವಿವಾಹವಾಗಿದ್ದರು. ದಂಪತಿ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದು, ಸಾಮಾನ್ಯ ಕುಟುಂಬ ಜೀವನ ನಡೆಸುತ್ತಿದ್ದರು.
₹200 ವಿಚಾರಕ್ಕೆ ಆರಂಭವಾದ ಕಲಹ
ಸುಮಾ ಅವರು ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಕಟ್ಟುವ ಉದ್ದೇಶದಿಂದ ಮನೆಯೊಳಗೆ ₹1,300 ಹಣವನ್ನು ಗಂಡನಿಗೆ ತಿಳಿಯದಂತೆ ತೆಗೆದಿಟ್ಟಿದ್ದರು. ಈ ಹಣದಿಂದ ಗಂಡ ಚಂದ್ರಶೇಖರ್ ಸಬೂಬು ಹೇಳಿ ₹200ನ್ನು ತೆಗೆದುಕೊಂಡು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಈ ವಿಚಾರ ತಿಳಿದ ಸುಮಾ ಮತ್ತು ಪತಿ ಚಂದ್ರಶೇಖರ್ ನಡುವೆ ಶುಕ್ರವಾರ ಬೆಳಿಗ್ಗೆ ತೀವ್ರ ವಾಗ್ವಾದ ನಡೆದಿತ್ತು.
ಮನನೊಂದ ಪತ್ನಿ ಸಾವಿಗೆ ಶರಣು
ಗಲಾಟೆಯ ನಂತರ ಮನನೊಂದಿದ್ದ ಸುಮಾ ಅವರು, ಪತಿ ಹಾಗೂ ಅತ್ತೆ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದ ಪತಿ ಚಂದ್ರಶೇಖರ್ ಗೆ ಪತ್ನಿ ಸಾವನ್ನಪ್ಪಿರುವ ವಿಚಾರ ತಿಳಿದಿದೆ.
ಪೊಲೀಸ್ ತನಿಖೆ ಆರಂಭ
ಘಟನೆಗೆ ಸಂಬಂಧಿಸಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ಸಣ್ಣ ಹಣದ ವಿಚಾರದಿಂದ ಆರಂಭವಾದ ಕಲಹ, ಇಬ್ಬರು ಮಕ್ಕಳ ತಾಯಿಯೊಬ್ಬರ ಜೀವವನ್ನೇ ಕಸಿದುಕೊಂಡಿರುವುದು ಗ್ರಾಮದಲ್ಲಿ ಶೋಕ ಮತ್ತು ಆತಂಕದ ವಾತಾವರಣ ನಿರ್ಮಿಸಿದೆ. ಕುಟುಂಬ ಕಲಹಗಳು ಇಂತಹ ದುರ್ಘಟನೆಗಳಿಗೆ ದಾರಿ ಮಾಡಿಕೊಡದಂತೆ ಸಾಮಾಜಿಕ ಜಾಗೃತಿ ಅಗತ್ಯವಿದೆ.


