ಬೆಂಗಳೂರು [ಸೆ.19]:  ಇತ್ತೀಚೆಗೆ ಹೈಕೋರ್ಟ್‌ ನ್ಯಾಯಾಧೀಶರ ಹೆಸರಿನಲ್ಲಿ ಉತ್ತರ ಪ್ರದೇಶದ ಕುಖ್ಯಾತ ಕ್ರಿಮಿನಲ್‌ಗಳ ಪರವಾಗಿ ನಕಲಿ ಆದೇಶ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಎಂಜಿನಿಯರ್‌ ಪದವೀಧರ ಸೇರಿದಂತೆ ಮೂವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿ ಎಂ.ಜಿ.ಗೋಕುಲ್‌ ಹಾಗೂ ಉತ್ತರಪ್ರದೇಶದ ವಿಶಾಲ್‌ ಸಿಂಗ್‌ ಮತ್ತು ವಿಕಿ ಸಿಂಗ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕಂಪ್ಯೂಟರ್‌, ಲಾಪ್‌ಟಾಪ್‌ ಸೇರಿದಂತೆ ಮತ್ತಿರರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗಷ್ಟೇ ವಿಶಾಲ್‌ ಮತ್ತು ವಿಕಿ ವಿರುದ್ಧ ಉತ್ತರಪ್ರದೇಶದ ಡಿಜಿಪಿ ಸಮನ್ಸ್‌ ಜಾರಿಗೊಳಿಸಿದ್ದರು. ಇದಕ್ಕೆ ಹೈಕೋಟ್‌ ತಡೆಯಾಜ್ಞೆ ನೀಡಿದೆ ಎಂದೂ ನಕಲಿ ದಾಖಲೆ ಸೃಷ್ಟಿಯಾಗಿತ್ತು. ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಶಂಕರಾಚಾರಿ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಿನಲ್ಲಿ ಮೂಡಿದ ಸ್ನೇಹ:

2015ರಲ್ಲಿ ತನ್ನ ಪತ್ನಿ ಅನುರಾಧಾ ಕೊಲೆ ಪ್ರಕರಣದಲ್ಲಿ ಕೇರಳ ಮೂಲದ ಗೋಕುಲ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದರು. ಈ ಹತ್ಯೆ ಬಳಿಕ ಕುಡಿದ ಮತ್ತಿನಲ್ಲಿ ಬಿದ್ದು ಪತ್ನಿ ಮೃತಪಟ್ಟಿದ್ದಾಳೆ ಎಂದು ಆರೋಪಿ ಸುಳ್ಳಿನ ಕತೆ ಹೆಣೆದಿದ್ದ. ಪತ್ನಿ ಕೊಂದ ಬಳಿಕ ತನ್ನ ಬಾಲ್ಯ ಗೆಳತಿಯನ್ನು ಒಲಿಸಿಕೊಳ್ಳಲು ಸಂಚು ರೂಪಿಸಿದ್ದ ಗೋಕುಲ್‌, ಆಕೆಯ ಪತಿಯನ್ನು ಜೈಲಿಗೆ ಕಳುಹಿಸಲು ಹೋಗಿ ತಾನೇ ಪೊಲೀಸರ ಬಲೆಗೆ ಬಿದ್ದಿದ್ದ. ಗೆಳೆತಿಯ ಪತಿ ಹೆಸರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೋಕುಲ್‌ ಹುಸಿ ಬಾಂಬ್‌ ಕರೆ ಮಾಡಿದ್ದ.

ಈ ಹುಸಿ ಕರೆ ಬೆನ್ನಹತ್ತಿದ ಪೊಲೀಸರು, ಮೊಬೈಲ್‌ ಸಂಖ್ಯೆ ಮಾಹಿತಿ ಆಧರಿಸಿ ಗೋಕುಲ್‌ನ ಸ್ನೇಹಿತನನ್ನು ವಶಕ್ಕೆ ಪಡೆದ್ದರು. ವಿಚಾರಣೆ ವೇಳೆ ಗೋಕುಲ್‌ ಪಾತ್ರ ಬಯಲಾಗಿತ್ತು. ಅಂದು ಕೊಲೆ ಮತ್ತು ಹುಸಿ ಬಾಂಬ್‌ ಕರೆ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗ್ರಾಸವಾಗಿದ್ದವು.

ವಿಶಾಲ್‌ ಮತ್ತು ವಿಕಿ ಕುಖ್ಯಾತ ಸರಗಳ್ಳರಾಗಿದ್ದು, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ವಿಮಾನದಲ್ಲಿ ಬಂದು ಸರಗಳ್ಳತನ ಎಸಗಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದರು. ಇವರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಜೈಲಿನಲ್ಲಿ ಗೋಕುಲ್‌ಗೆ ಇವರ ಪರಿಚಯವಾಗಿತ್ತು. ಕೆಲ ದಿನಗಳ ತರುವಾಯ ಜಾಮೀನು ಪಡೆದು ಹೊರಬಂದರೂ ಗೋಕುಲ್‌, ಉತ್ತರಪ್ರದೇಶ ಪಾತಕಿಗಳ ಜತೆ ಸಂಪರ್ಕದಲ್ಲಿದ್ದ.

ಮೊದಲು ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಗೋಕುಲ್‌, ಜೈಲಿನಿಂದ ಬಿಡುಗಡೆಯಾದ ನಂತರ ಲಗ್ಗೆರೆಯಲ್ಲಿ ನೆಲೆಸಿದ್ದ. ಜೈಲಿನಲ್ಲಿದ್ದಾಗಲೇ ಕಾನೂನು ಅಧ್ಯಯನದಲ್ಲಿ ನಿರತನಾಗಿದ್ದ ಆತ, ಇದೇ ಕಾರಣಕ್ಕಾಗಿ ಖಾಸಗಿ ಕಾನೂನು ಕಾಲೇಜಿನಲ್ಲಿ ಪ್ರವೇಶ ಸಹ ಪಡೆದಿದ್ದ.

ಇತ್ತೀಚೆಗೆ ಉತ್ತರಪ್ರದೇಶದ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ಪ್ರಕರಣ ಸಂಬಂಧ ವಿಶಾಲ್‌ ಮತ್ತು ವಿಕಿ ವಿರುದ್ಧ ಸಮನ್ಸ್‌ ಜಾರಿಗೊಳಿಸಿದ್ದರು. ಇದರಿಂದ ಬಂಧನ ಭೀತಿಗೊಳಗಾದ ಆ ಇಬ್ಬರು ಪಾತಕಿಗಳು, ನೆರವಿಗೆ ಸ್ನೇಹಿತ ಗೋಕುಲ್‌ ಮೊರೆ ಹೋಗಿದ್ದರು. ಆಗ ಗೋಕುಲ್‌, ಉತ್ತರ ಪ್ರದೇಶ ಡಿಜಿಪಿ ಅವರಿಗೆ ತಮ್ಮ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ಆದೇಶ ಕಳುಹಿಸಿದ್ದ. ಆದರೆ ಈ ಆದೇಶದ ಕುರಿತು ಅನುಮಾನಗೊಂಡ ಅಲ್ಲಿನ ಡಿಜಿಪಿ, ತಕ್ಷಣವೇ ಕರ್ನಾಟಕ ಡಿಜಿಪಿ ಅವರಿಗೆ ಮಾಹಿತಿ ರವಾನಿಸಿದರು. ಬಳಿಕ ಹೈಕೋರ್ಟ್‌ನಲ್ಲಿ ಪರಿಶೀಲಿಸಿದಾಗ ನ್ಯಾಯಾಧೀಶರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆದೇಶ ಎಂಬುದು ಮನದಟ್ಟಾಯಿತು. ಬಳಿಕ ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.