ಕೊಪ್ಪಳ: 10 ಲಕ್ಷ ಸಾಲಕ್ಕೆ ಕೋಟಿ ರು. ನಕಲಿ ದಾಖಲೆ ಸೃಷ್ಟಿ..!

ಕಾರಟಗಿ ಸೌಹಾರ್ದ ಸಹಕಾರಿ ಸಂಘದ ಹಗರಣ ತನಿಖೆಯಿಂದ ಬೆಳಕಿಗೆ| ಭೋಗಸ್‌ ಸಾಲ ಸೃಷ್ಟಿಸಿ ಕೋಟ್ಯಂತರ ರು. ಬೆಲೆಬಾಳುವ ಆಸ್ತಿ ಕಬಳಿಸುವ ಕೆಲಸ ಮಾಡಿದ ಆಡಳಿತ ಮಂಡಳಿ ಮತ್ತು ಸಿಇಒ| ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದ ಘಟನೆ| 

Fake Document Created for 10 Lack Rs Loan in Bank at Karatagi in Koppal grg

ಕಾರಟಗಿ(ಏ.23): 10 ಲಕ್ಷ ಸಾಲದ ಮೊತ್ತವನ್ನು 1 ಕೋಟಿ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಸಾಕ್ಷಿದಾರರೇ ಅದನ್ನು ಮರುಪಾವತಿಸುವಂತೆ ಇಲ್ಲಿಯ ಸೌಹಾರ್ದ ಸಹಕಾರಿ ಸಂಘವೊಂದು ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಇಲ್ಲಿನ ‘ಪರಿಮಳ ಪತ್ತಿನ ಸೌಹಾರ್ದ ಸಹಕಾರಿ ನಿ.’ ಆಡಳಿತ ಮಂಡಳಿ ಮತ್ತು ಸಿಇಒ ಭೋಗಸ್‌ ಸಾಲ ಸೃಷ್ಟಿಸಿ ಕೋಟ್ಯಂತರ ರು. ಬೆಲೆಬಾಳುವ ಆಸ್ತಿ ಕಬಳಿಸುವ ಕೆಲಸ ಮಾಡಿದ್ದು, ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ವ್ಯವಸ್ಥಾಪಕರು ಕೊಪ್ಪಳ ಜಿಲ್ಲಾ ಸಹಕಾರಿ ಸಹಾಯಕ ನಿಬಂಧಕರಿಗೆ ವರದಿ ಮಾಡಿದ್ದಾರೆ.

ಕಾರಟಗಿಯ ಉದ್ಯಮಿ ಶರಣಯ್ಯ ಸ್ವಾಮಿ ಅವರಿಗೆ ಸ್ಥಳೀಯ ಪರಿಮಳ ಪತ್ತಿನ ಸೌಹಾರ್ದ ಸಂಘ ಸುಮಾರು .10 ಲಕ್ಷ ರು. ಸಾಲ ನೀಡಿತ್ತು. ಅದಕ್ಕೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿರುವ ಸಂಬಂಧಿಕರಾದ ಅಕ್ಕಮ್ಮ ಅವರ ಕೋಟ್ಯಂತರ ರು. ಬೆಲೆಬಾಳುವ 6.10 ಎಕರೆ ಜಮೀನು ಅಡಮಾನ ಇಟ್ಟುಕೊಳ್ಳಲಾಗಿತ್ತು. ಸಾಲ ಪಡೆದ ಉದ್ಯಮಿ ಅಕಾಲಿಕ ಮರಣದ ನಂತರ ಪರಿಮಳ ಸಹಕಾರಿ ಸಂಘ ಈ ಸಾಲವನ್ನು 1,11,23,292/ (ಒಂದು ಕೋಟಿ ಹನ್ನೊಂದು ಲಕ್ಷ ಇಪ್ಪತ್ಮೂರು ಸಾವಿರ ಎರಡುನೂರು ತೊಂಬತ್ತೆರಡು) ನಕಲಿ ದಾಖಲೆ ಸೃಷ್ಟಿಸಿ, ಅದಕ್ಕೆ ಜಾಮೀನುದಾರರನ್ನು ಜವಾಬ್ದಾರರನ್ನಾಗಿಸಿ ಸೌಹಾರ್ದ ಕಾಯ್ದೆ ಕಲಂ 39ರಡಿ ವ್ಯಾಜ್ಯ ದಾಖಲಿಸಿ 6.10 ಎಕರೆ ಭೂಮಿ ಪಡೆಯಲು ಮುಂದಾಗಿ ವ್ಯಾಜ್ಯದ ನೋಟಿಸ್‌ ಸಹ ನೀಡಿತ್ತು.

ಬಸ್ ಸಂಚಾರ ಆರಂಭ: ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಾರಿಗೆ ಸಿಬ್ಬಂದಿ..!

ಆದರೆ ಜಾಮೀನು ನೀಡಿದವರಿಗೆ .10 ಲಕ್ಷ ಮಾತ್ರ ಸಾಲ ಪಡೆದ ವಿಚಾರ ತಿಳಿದಿತ್ತು. ಪರಿಮಳ ಸಹಕಾರಿ ಸಂಘದ ಕಚೇರಿಗೆ ಬಂದು ನೋಡಿದಾಗ ನಕಲಿ ದಾಖಲೆ ಸೃಷ್ಟಿಸಿದ್ದು ತಿಳಿಯಿತು. ಅಕ್ಕಮ್ಮ ಅವರ ಪುತ್ರ ರವೀಂದ್ರ ಶಿವರಾಜಯ್ಯ ಅವರು ಈ ವಂಚನೆ ಪ್ರಕರಣದ ಕುರಿತು ಸಂಪೂರ್ಣ ತನಿಖೆ ಮಾಡುವಂತೆ ಸಹಕಾರಿ ಇಲಾಖೆ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗೆ, ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಸಹಕಾರಿ ಇಲಾಖೆಯ ಕೋರಿಕೆ ಮೇರೆಗೆ ಗುಲ್ಬರ್ಗಾ ವಿಭಾಗದ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ ಹೂಗಾರ, ಸೌಹಾರ್ದ ಕಾಯ್ದೆ 35(2)(ಎ) ಅಡಿಯಲ್ಲಿ 3 ತಿಂಗಳ ಕಾಲದ ಮಿತಿಯಲ್ಲಿ ವಿಚಾರಣೆ ನಡೆಸಿ ಸುಮಾರು 1118 ಪುಟಗಳ ಸಮಗ್ರ ವರದಿಯನ್ನು ಕೊಪ್ಪಳ ಜಿಲ್ಲಾ ಸಹಕಾರಿ ಸಹಾಯಕ ನಿಬಂಧಕರಿಗೆ ನೀಡಿದ್ದಾರೆ.

ಈ ಸಮಗ್ರ ವರದಿ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದ್ದು, ಪರಿಮಳ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಕಾಯ್ದೆಯನ್ನು ಎಲ್ಲ ಹಂತದಲ್ಲಿಯೂ ಉಲ್ಲಂಘನೆ ಮಾಡಿದೆ ಎಂದು ಸ್ಪಷ್ಟವಾಗಿ ವರದಿಯಲ್ಲಿ ವಿವರಿಸಿದ್ದಾರೆ. ಪರಿಮಳ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಇಒ ಶರಣೇಗೌಡ ಮಾಲಿಪಾಟೀಲ್‌ ಇವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ಸ್ಪಷ್ಟವಾಗಿ ಶಿಫಾರಸ್ಸು ಮಾಡಿದ್ದಾರೆ. ಈ ನಡುವೆ ಕಾರಟಗಿ ಪೊಲೀಸರು ಈ ವಿಚಾರವಾಗಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು ಮೂರು ದಿನಗಳಲ್ಲಿ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸಹಕಾರಿ ಸಂಘಕ್ಕೆ ಸೂಚಿಸಿದ್ದಾಗಿ ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios