ಮಂಗಳೂರಿನ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್‌ನ ಸಿಎಚ್‌ಟಿ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಓರ್ವ ಸಿಬ್ಬಂದಿ ಮೃತಪಟ್ಟು 9 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ 8-10 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದು, ಸ್ಥಳೀಯರು ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಫ್ಟ್ ಬದಲಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ಕಾರ್ಮಿಕರು ಹೊರಹೋಗಿದ್ದರಿಂದ ಭಾರಿ ಪ್ರಾಣಾಪಾಯ ತಪ್ಪಿದೆ.

ಮಂಗಳೂರು: ಇಲ್ಲಿನ ನಗರ ಹೊರವಲಯದ ಜೋಕಟ್ಟೆಯಲ್ಲಿರುವ 'ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್' (MRPL) ಸಂಸ್ಥೆಯ 'ಸಿಎಚ್‌ಟಿ' (CHT - ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್) ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದ ಘಟನೆಯಲ್ಲಿ ನಾಪತ್ತೆಯಾಗಿದ್ದ ಸಿಬ್ಬಂದಿಯೋರ್ವ ದಾರುಣವಾಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಮನೀಶ್ ಕರ್ಕರ (30 ವರ್ಷ) ಅವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಧ್ಯಾಹ್ನ ಸುಮಾರು 12:15 ರ ವೇಳೆಗೆ ಸಿಎಚ್‌ಟಿ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ದಟ್ಟ ಬೆಂಕಿ ಹಾಗೂ ಹೊಗೆ ಇಡೀ ಸಂಕೀರ್ಣವನ್ನು ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಘಟಕದಲ್ಲಿದ್ದ ಮನೀಶ್ ಕರ್ಕರ ಅವರು ನಾಪತ್ತೆಯಾಗಿದ್ದರು. ಅಗ್ನಿಶಾಮಕ ದಳ ಮತ್ತು ಆಪತ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ಬಳಿಕ ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮನೀಶ್ ಅವರ ಮೃತದೇಹವನ್ನು ಘಟನಾ ಸ್ಥಳದಲ್ಲೇ ಪತ್ತೆ ಹಚ್ಚಿವೆ. ಉಳಿದಂತೆ 9 ಮಂದಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ಐಸಿಯುನಲ್ಲಿ ಚಿಕಿತ್ಸೆ: ಶೇ. 35 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿದ್ದ ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಗಾಯಾಳುಗಳನ್ನು ಎ.ಜೆ. ಆಸ್ಪತ್ರೆ, ಶ್ರೀನಿವಾಸ ಆಸ್ಪತ್ರೆ ಸೇರಿದಂತೆ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

11.30 ಗಂಟೆಗೆ ಶಿಫ್ಟ್ ಬದಲಾವಣೆ ಹಿನ್ನೆಲೆ ಘಟಕದಿಂದ ಕಾರ್ಮಿಕರು ಹೊರ ಹೋಗಿದ್ದರು. ಕಾರ್ಮಿಕರು ಹೊರ ಹೋದ ಕಾರಣ ಭಾರೀ ಅನಾಹುತ ತಪ್ಪಿದೆ. 12.15ರ ಸುಮಾರಿಗೆ ನಡೆದ ಭೀಕರ ಸ್ಪೋಟದಲ್ಲಿ ಕಾರ್ಮಿಕರು ಒಳಗೆ ಇದ್ದಿದ್ದರೆ ಭಾರೀ ಸಾವು ನೋವು ಆಗುವ ಸಾಧ್ಯತೆ ಇತ್ತು. ಸದ್ಯ ಹೊಗೆ ಮತ್ತು ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಸ್ಥಳೀಯರಲ್ಲಿ ಕಳವಳ ಮತ್ತು ಆಕ್ರೋಶ

ಸ್ಫೋಟದ ತೀವ್ರತೆಗೆ ಜೋಕಟ್ಟೆ, ಬಜ್ಪೆ, ಕಾನ, ಕಾಟಿಪಳ್ಳ ಮತ್ತು ಕುಲಾಯಿ ಸೇರಿದಂತೆ ಸುಮಾರು 8 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಸುತ್ತಮುತ್ತಲಿನ ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದವು. ಸದ್ಯ ನೌಕರನೊಬ್ಬ ಪ್ರಾಣ ಕಳೆದುಕೊಂಡಿರುವುದು ಪ್ರಕಟವಾಗುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಹಾಗೂ ಕಾರ್ಮಿಕರ ಕುಟುಂಬಸ್ಥರು ಸಂಸ್ಥೆಯ ಅಭಯ ಹಾಗೂ ಸುರಕ್ಷತಾ ವ್ಯವಸ್ಥೆಯ ಲೋಪಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಸ್ಥಳದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಕ್ಯಾಂಪ್ ಮಾಡಿ ಘಟನೆಗೆ ನಿಖರ ಕಾರಣವೇನೆಂದು ಪತ್ತೆ ಹಚ್ಚುತ್ತಿದ್ದಾರೆ.

ಎಂಆರ್‌ಪಿಎಲ್‌ನ ಮೂರನೇ ಹಂತದ ಪ್ಲಾಂಟ್‌ನಲ್ಲಿರುವ ಕೋಕರ್ ಹೈಡ್ರೋಟ್ರೀಟರ್ ಘಟಕದ (Coker Hydrotreater Unit - CHT) ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ.

ಮರುಕಳಿಸಿದ ಎಂಆರ್‌ಪಿಎಲ್‌ನಲ್ಲಿ ಹಳೆಯ ದುರಂತ

ಜುಲೈ 2025ರಲ್ಲಿ ತೈಲ ಮೂವ್ಮೆಂಟ್ ಪ್ರದೇಶದ (OMS) ಟ್ಯಾಂಕ್ ಪರಿಶೀಲಿಸುವಾಗ ಹೈಡ್ರೋಜನ್ ಸಲ್ಫೈಡ್ (H2S) ವಿಷಾನಿಲ ಸೋರಿಕೆಯಾಗಿ ಇಬ್ಬರು ಹಿರಿಯ ಆಪರೇಟರ್‌ಗಳು ಪ್ರಾಣ ಕಳೆದುಕೊಂಡಿದ್ದರು.

2012ರಲ್ಲಿ ಸಲ್ಫರ್ ರಿಕವರಿ ಘಟಕದಲ್ಲಿ (SRU-II) ಸಂಭವಿಸಿದ ಸ್ಫೋಟ ಮತ್ತು ಬೆಂಕಿಯ ದುರಂತಕ್ಕೆ ಒಬ್ಬ ಗುತ್ತಿಗೆ ಕಾರ್ಮಿಕ ಬಲಿಯಾಗಿ, ಐದು ಮಂದಿ ಗಾಯಗೊಂಡಿದ್ದರು.

2011ರಲ್ಲಿ ವಿಸ್ತರಣಾ ಯೋಜನೆಯಡಿ ಕಚ್ಚಾ ತೈಲ ಸಂಗ್ರಹಣಾ ಟ್ಯಾಂಕ್‌ಗೆ ಪೇಂಟ್ ಮಾಡುತ್ತಿದ್ದಾಗ ವೆಲ್ಡಿಂಗ್ ಕಿಡಿ ಸೋಕಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಬಲಿಯಾಗಿ, ಹಲವರು ತೀವ್ರವಾಗಿ ಗಾಯಗೊಂಡಿದ್ದರು