Asianet Suvarna News Asianet Suvarna News

ಉಡುಪಿ: ಮಾಜಿ ರಾಜ್ಯಪಾಲ ಶ್ರೀ ಪಿ ಬಿ ಆಚಾರ್ಯ ನಿಧನ- ಒಂದು ಸ್ಮರಣೆ

ಇವತ್ತು ನನಗೆ ಬಂಧು ವಿಯೋಗದ ದಿನ. ಸನ್ಮಾನ್ಯ ಮಾಜಿ ರಾಜ್ಯಪಾಲರಾದ ಶ್ರೀ ಪಿ ಬಿ ಆಚಾರ್ಯರು ಇಹದ ಯಾತ್ರೆ ಮುಗಿಸಿದ ವಾರ್ತೆ ತಿಳಿದಾಗ ನನಗೆ ಅದೇ ಅನುಭವವಾಯಿ

Ex Governor Shri PB Acharya passed away- a memory writen by  GA Vasudeva Bhatt Perampally rav
Author
First Published Nov 10, 2023, 4:08 PM IST

- ಜಿ ವಾಸುದೇವ ಭಟ್ ಪೆರಂಪಳ್ಳಿ

ಇವತ್ತು ನನಗೆ ಬಂಧು ವಿಯೋಗದ ದಿನ. ಸನ್ಮಾನ್ಯ ಮಾಜಿ ರಾಜ್ಯಪಾಲರಾದ ಶ್ರೀ ಪಿ ಬಿ ಆಚಾರ್ಯರು ಇಹದ ಯಾತ್ರೆ ಮುಗಿಸಿದ ವಾರ್ತೆ ತಿಳಿದಾಗ ನನಗೆ ಅದೇ ಅನುಭವವಾಯಿತು.

ರಾಜ್ಯಪಾಲರಾಗಿದ್ದ  ಅವಧಿಯಲ್ಲಿ ಕರ್ನಾಟಕ ಉಡುಪಿ ಮಂಗಳೂರು ಕಡೆ ಪ್ರವಾಸ ನಿಗದಿಯಾದ ತಕ್ಷಣ ನನಗೊಂದು ಕರೆ ಮಾಡಿ ಉಡುಪಿಗೆ ಬರ್ತಾ ಇದ್ದೇನೆ ಕೃಷ್ಣನ ದರ್ಶನ , ಮತ್ತು ಭೋಜನ ಪ್ರಸಾದದ ವ್ಯವಸ್ಥೆಮಾಡಿ ಅಂತ ತಿಳಿಸ್ತಾ ಇದ್ರು ಕನಿಷ್ಠ 12-15 ಬಾರಿ ಈ ರೀತಿ ಅವರ ಭೇಟಿ ಮತ್ತು ಅದರಿಂದ ಒಂದು ಆತ್ಮೀಯ ಬಾಂಧವ್ಯ ಬೆಳೆದಿತ್ತು . 

ಇದೊಂದು ಅಚ್ಚರಿ. ಯಾಕಂದ್ರೆ ರಾಜ್ಯಪಾಲರಾಗೋ ಮೊದಲು ನನಗೂ ಅವರಿಗೂ ಯಾವ ನಂಟೂ ಇರಲಿಲ್ಲ . ಆದರೆ ಆ ಐದು ವರ್ಷಗಳಲ್ಲಿ ಮತ್ತು ನಿವೃತ್ತಿಯ ನಂತರವೂ ಮೂರ್ನಾಲ್ಕು ಬಾರಿ ಉಡುಪಿಗೆ ಬರುವ ನೆಪದಲ್ಲಿ ಒಂದು ಆಕಸ್ಮಿಕ ಬಾಂಧವ್ಯ , ಸ್ನೇಹ ನನಗೂ ಆಚಾರ್ಯರಿಗೂ ಬೆಳೆದ ಬಗ್ಗೆ  ಯಾವಾಗಲೂ ನಾನೇ ಅಚ್ಚರಿಪಟ್ಟಿದ್ದಿದೆ.

Ex Governor Shri PB Acharya passed away- a memory writen by  GA Vasudeva Bhatt Perampally rav

ಉಡುಪಿಯ ಬಗ್ಗೆ ಉಡುಪಿ ಮಠಗಳು ಮಣಿಪಾಲದ ಸಂಸ್ಥೆಗಳ ಬಗ್ಗೆ ಅವರಿಗೆ ಇನ್ನಿಲ್ಲದ ಅಭಿಮಾನ ಪ್ರೀತಿ . ಈ ಕಡೆ ಬಂದಾಗಲೆಲ್ಲ ಮಠಕ್ಕೆ ಬಂದು ಕೃಷ್ಣ ದರ್ಶನ ಪಡೆದು, ಭೋಜನ ಪ್ರಸಾದ ಸ್ವೀಕರಿಸಿಯೇ ಹೋಗುತ್ತಿದ್ದರು.

ಉಡುಪಿ ಪೇಜಾವರ ಶ್ರೀಗಳಿಗೆ ಪಿತೃವಿಯೋಗ, ಉತ್ತರ ಭಾರತ ಪ್ರವಾಸದಲ್ಲಿರುವ ವಿಶ್ವ ಪ್ರಸನ್ನ ತೀರ್ಥರು

ಪೇಜಾವರ ಪರ್ಯಾಯ ಕಾಲದಲ್ಲಿ ಅನೇಕ ಸಭಾಕಾರ್ಯಕ್ರಮಗಳಿಗೂ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದಾರೆ . ಪಲಿಮಾರು ಪರ್ಯಾಯದ ಅವಧಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಡುಪಿಗೆ ಬಂದಾಗ ನನ್ನ ಉಡುಪಿಗೆ ರಾಷ್ಟ್ರಪತಿಗಳು ಬಂದಾಗ ನಾನಿರಲೇಬೇಕು ಅಂತ ಸಂತೋಷದಿಂದಲೇ ಧಾವಿಸಿ ಬಂದಿದ್ದಾರೆ . ಅದಮಾರು ಶ್ರೀಗಳು ತಮ್ಮ ಪರ್ಯಾಯದರ್ಬಾರ್ನಲ್ಲಿ ಅವರನ್ನು ದರ್ಬಾರ್ ಸಂಮಾನದ ಮೂಲಕ ಗೌರವಿಸಿದ್ದರು.

Ex Governor Shri PB Acharya passed away- a memory writen by  GA Vasudeva Bhatt Perampally rav

ಮೂಲತಃ ಉಡುಪಿಯವರಾದ ಆಚಾರ್ಯರು ತೆಂಕಪೇಟೆಯ ಆಚಾರ್ಯ ಮಠದಲ್ಲಿ ಹುಟ್ಟಿ ಬೆಳೆದವರು. ಉಡುಪಿ ಎಂ ಜಿ ಎಂ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ. ಶಿಕ್ಷಣದ ಬಳಿಕ ಉದ್ಯೋಗ ಅರಸಿ ಮುಂಬಯಿ ಮತ್ತಿತರ ಪ್ರದೇಶಕ್ಕೆ ತಿರುಗಾಟ, ಬಾಲ್ಯದಿಂದಲೇ ಸಂಘದ ಶಿಸ್ತಿನ ಸ್ವಯಂಸೇವಕ. ಬಳಿಕ ಪ್ರಚಾರಕ ಈಶಾನ್ಯ ಭಾರತದಲ್ಲಿ ಕಾರ್ಯ ನಿರ್ವಹಣೆ ಆ ಕಾಲದಲ್ಲೇ ಪ್ರಧಾನಿ ಮೋದಿಯವರ ಸಂಪರ್ಕ. ಪರಿಣಾಮವಾಗಿ ಮೋದಿಯವರು ಪ್ರಧಾನಿಯಾದ ಬಳಿಕ ನಾಗಾಲ್ಯಾಂಡ್ ನ ರಾಜ್ಯಪಾಲರನ್ನಾಗಿ  ಆಚಾರ್ಯರನ್ನು ನಿಯುಕ್ತಿಗೊಳಿಸಿದರು. ಆ ಹೊತ್ತಲ್ಲೇ ಅಸ್ಸಾಂ ತ್ರಿಪುರಾ ಅರುಣಾಚಲಪ್ರದೇಶ ಸಿಕ್ಕಿಂ ಮೇಘಾಲಯ ಮೊದಲಾದ ರಾಜ್ಯಗಳ ಹಂಗಾಮಿ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಆಚಾರ್ಯರದ್ದು. 

ಅಪ್ಪಟ ರಾಷ್ಟ್ರಭಕ್ತ : ಆಚಾರ್ಯರು ಅಸೀಮ ರಾಷ್ಟ್ರಭಕ್ತರು. ದೇಶದ ಬಗ್ಗೆ ಇನ್ನಿಲ್ಲದ ಪ್ರೀತಿ ಅಭಿಮಾನ. ಅನೇಕ ಬಾರಿ ಇದನ್ನು ಕಂಡಿದ್ದೇನೆ.

 ಈಶಾನ್ಯ ರಾಜ್ಯಗಳ ಏಳಿಗೆಗೆ  ಜೋಳಿಗೆ ಹಿಡಿದು ತಿರುಗಾಡಿದರು. ರಾಜ್ಯಪಾಲರಾಗುವ ಮೊದಲೇ ಸಂಘಕಾರ್ಯಕ್ಕಾಗಿ  ಆಪ್ರದೇಶಗಳಲ್ಲಿ  ತಿರುಗಾಡಿದ ಅನುಭವ ಇದ್ದುದರಿಂದ ಅಲ್ಲಿನ ಜನಜೀವನದ ಪೂರ್ಣ ಪರಿಚಯ ಅವರಿಗಿತ್ತು. ಆದ್ದರಿಂದ ಈಶಾನ್ಯ ರಾಜ್ಯದ ಆರ್ಥಿಕ ಪ್ರಗತಿಯಾಗಲೇವೇಕೆಂಬ ಅದಮ್ಯ ಕಾಳಜಿ ಅವರಲ್ಲಿತ್ತು. ಅದಕ್ಕಾಗಿ ರಾಜ್ಯಪಾಲರೆಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ  ಈ ಭಾಗದ ಪ್ರತಿಷ್ಠಿತ ಬ್ಯಾಂಕ್ ಗಳು ಉದ್ಯಮಿಗಳು ವಿತ್ತೀಯ ಸಂಸ್ಥೆಗಳು ಕೈಗಾರಿಕೋದ್ಯಮಿಗಳು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಠಾಧೀಶರು ಧರ್ಮಾಧಿಕಾರಿಗಳ ಬಾಗಿಲಿಗೆ ತೆರಳಿ ಆ ರಾಜ್ಯಗಳಲ್ಲಿ ತಮ್ಮ ಸೇವೆ, ಉದ್ಯಮ ಸಾಂಸ್ಕೃತಿಕ ಧಾರ್ಮಿಕ ಕಾರ್ಯಗಳು ಬ್ಯಾಂಕ್ ಶಾಖೆಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಹಕರಿಸುವಂತೆ  ಜೋಳಿಗೆ ಹಿಡಿದು ಬೇಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಒಬ್ಬ ರಾಜ್ಯಪಾಲರಿಗೆ ಈ ಬಗೆಯ ನಿಷ್ಠೆ ಕರ್ತವ್ಯ ಪ್ರಜ್ಞೆ ಇರಲು ಸಾಧ್ಯವೇ? ಅಂತ ಅನ್ನಿಸ್ತಾ ಇತ್ತು. ಈ ಮೂಲಕ ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದ ನಡುವೆ ಒಂದು ಸಮನ್ವಯ ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು  ಅವರು ಮಾಡಿದ್ದಾರೆ. 

 ಸಾಮಾನ್ಯ ಜನರಿಗೂ ರಾಜಭವನ ಮುಕ್ತ ಮುಕ್ತ: ಇದು ಆಚಾರ್ಯರ ಕಾರ್ಯವೈಖರಿಯ ಇನ್ನೊಂದು ಅಚ್ಚರಿಯ ಅಂಶ. ಒಂದು ರಾಜ್ಯದ ಘನತೆಯ ಶಕ್ತಿ ಸೌಧ ರಾಜಭವನವನ್ನು ಅಲ್ಲಿ ತೀರಾ ಸಾಮಾನ್ಯವರ್ಗದ ಜನರಿಗೂ ಮುಕ್ತವಾಗಿಟಗಟದ್ದು ಮಾತ್ರವಲ್ಲ; ತಾವೂ ಯಾವ ಬಿಗುಮಾನಗಳೂ ಇಲ್ಲದೆ ಅವರೊಂದಿಗೆ ಬೆರೆತರು.  ತಮ್ಮ ಅಧಿಕಾರಾವಧಿಯಲ್ಲಿ ನಾಗಾಲ್ಯಾಂಡಿನ ತರಕಾರಿ, ಜೀನಸು ವ್ಯಾಪಾರಸ್ಥರು , ಪೇಪರ್ ಹಾಲು ಸಪ್ಲೈ ಮಾಡುವವರು , ಧೋಬಿಗಳು ಕ್ಷೌರಿಕರು , ರಸ್ತೆ ಗುಡಿಸುವ ಜಾಡಮಾಲಿಗಳು , ಟೈಲರ್ ಗಳು , ಶಿಕ್ಷಕರು ವಿದ್ಯಾರ್ಥಿಗಳು, ತೋಟ , ಕಟ್ಟಡಗಳ  ಕಾರ್ಮಿಕರು ಹೀಗೆ ಸಮಾಜದ ತೀರಾ ಸಾಮಾನ್ಯ ವರ್ಗದವರನ್ನೂ ಆಗಾಗ್ಗೆ ರಾಜಭವನಕ್ಕೆ ಬರಮಾಡಿಕೊಂಡು ಉಭಯ ಕುಶಲೋಪರಿ ನಡೆಸಿ ಉಪಾಗಾರ ಇತ್ಯಾದಿಗಳ ಮೂಲಕ ಆತಿಥ್ಯ ನೀಡಿ ಕಳುಹಿಸುತ್ತಿದ್ದುದು ಪ್ರಾಯಃ ಈ ದೇಶದಲ್ಲೆ ಅತೀ ಅಪರೂಪದ ಘಟನೆಗಳಾಗಿ ದಾಖಲಾಗಬಹುದು. 

Ex Governor Shri PB Acharya passed away- a memory writen by  GA Vasudeva Bhatt Perampally rav

 ಯುವ ಸಮುದಾಯ ವಿದ್ಯಾರ್ಥಿ ಸಮುದಾಯದ ಬಗ್ಗೆ ಅತೀವ ಪ್ರೀತಿ ಅವರಿಗಿತ್ತು . ತಾವು ಕರ್ತವ್ಯ ನಿರ್ವಹಿಸಿದ ಎಲ್ಲ ರಾಜ್ಯಗಳಲ್ಲಿ ಮತ್ತು ಪ್ರವಾಸಗೈದ ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಯುವಕರೊಂದಿಗೆ ಅವರು ಅತ್ಯಂತ ಉತ್ಸಾಹದಿಂದ ಸಂವಾದ ನಡೆಸಿ ದೇಶದ ಬಗ್ಗೆ ಪ್ರೀತಿ ಅಭಿಮಾನವನ್ನು ಮೂಡಿಸಿ ರಾಷ್ಟ್ರೀಯ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿ ಮಾರ್ಗದರ್ಶನಗೈಯುತ್ತಿದ್ದರು ‌ ‌ ಉಡುಪಿ ಎಂ ಜಿಂ ಕಾಲೇಜಿನಲ್ಲೂ ಒಂದು ದಿನ ಅಕಸ್ಮಾತ್ತಾಗಿ ಆಗಮಿಸಿ ಕಾಲೇಜಿನ ಆವರಣದ ಮಾವಿನ ಮರಗಳ ಕೆಳಗೆ ಕುಳಿತು ಮುಕ್ತವಾಗಿ ಸಂವಾದ ನಡೆಸಿದ್ದಾರೆ .

Ex Governor Shri PB Acharya passed away- a memory writen by  GA Vasudeva Bhatt Perampally rav

 ಸಾರ್ಥಕಗೃಹಿಣಿ ಕವಿತಾ ಆಚಾರ್ಯ : ಆಚಾರ್ಯರ ಧರ್ಮಪತ್ನಿ ಕವಿತಾ ಅತ್ಯಂತ ಸಾತ್ವಿಕ ಸ್ವಭಾವದ ಸಾರ್ಥಕ ಗೃಹಿಣಿ ಆಚಾರ್ಯರಿಗೆ ನೆರಳಿಗೆ ನೆರಳಾಗಿ ನಿಂತವರು .ಅವರ ಎಲ್ಲ ವಿಚಾರಗಳಲ್ಲಿ ಸಹಮತವಿದ್ದವರು . ರಾಜ್ಯಪಾಲರ ಮಡದಿಯಾಗಿ ರಾಜಭವನದಲ್ಲಿ ಹಾಯಾಗಿ ಕುಳಿತುಕೊಳ್ಳಬಹುದಿತ್ತು ಆದರೆ ಹಾಗೆ ಮಾಡದೇ ಸುಶಿಕ್ಷಿತೆಯಾಗಿದ್ದ ಕವಿತಕ್ಕ ನಾಗಾಲ್ಯಾಂಡಿನ ಬುಡಕಟ್ಟು ಗುಡ್ಡಗಾಡು ಜನಾಂಗದ ಹತ್ತಾರು ಕಾರ್ಮಿಕರ ಬಡಮಕ್ಕಳನ್ನು ದತ್ತು ತೆಗೆದುಕೊಂಡು ತಾವೇ ಅವರಿಗೆ ಉಚಿತವಾಗಿ  ತರಗತಿಗಳನ್ನು ನಡೆಸಿ  ಶಿಕ್ಷಣ ನೀಡಿದ್ದು ಒಂದು ಮಾದರಿಯೇ ಸರಿ . ಈ ರೀತಿಯಾಗಿ ಪತಿ ಪತ್ನಿ ಇಬ್ಬರೂ ತಮ್ಮ ದಾಂಪತ್ಯದಲ್ಲಿ ಅನ್ಯೋನ್ಯರಾಗಿದ್ದು 50 ವರ್ಷಕ್ಕೂ ಹೆಚ್ಚು ಸಾರ್ಥಕ ದಾಂಪತ್ಯ. ಜೀವನ ನಡೆಸಿದ್ದು ಮಾತ್ರವಲ್ಲದೇ ರಾಜಭವನದಲ್ಲಿದ್ದೂ ಈ ರಾಜ್ಯದ ಸಮಗ್ರ ಏಳಿಗೆಯ ಹಿತಚಿಂತಕರಾಗಿ ಪೂರ್ಣಾವಧಿ ಜೊತೆಯಾಗಿಯೇ ಹೆಜ್ಜೆ ಹಾಕಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಒಂದು ಗೌರವದ ಸಲಾಂ ಹೇಳಲೇ ಬೇಕು .

ಲೋಕ ಕಲ್ಯಾಣಕ್ಕಾಗಿ ಅಮೆರಿಕಾದಲ್ಲೂ ನಡೆಯಿತು ನಾಗರಾಧನೆ!

ಇಂಥಹ ಒಬ್ಬ ಹಿರಿಯ ಬಂಧುವಾಗಿದ್ದ ಶ್ರೀಯುತ ಆಚಾರ್ಯರು ಇವತ್ತು ತಮ್ಮ ಸಾರ್ಥಕ ಜೀವನಯಾತ್ರೆ ಮುಗಿಸಿದ ವಿಷಯ ತಿಳಿದು ದುಃಖವಾಗಿದೆ ಅವರ ದಿವ್ಯಾತ್ಮಕ್ಕೆ ಶ್ರೀ ಕೃಷ್ಣನು ಪರಮಪದವನ್ನುಕರುಣಿಸಲೆಂದು ಪ್ರಾರ್ಥಿಸುತ್ತೇನೆ ..
ಓಂ ಶಾಂತಿಃ

Follow Us:
Download App:
  • android
  • ios