ಎರಡೂವರೆ ವರ್ಷಗಳ ಬಳಿಕ ಸಿಎಂ ಸ್ಥಾನ ಬಿಟ್ಟುಕೊಡುವ ಒಪ್ಪಂದದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಜಟಾಪಟಿ ನಡೆಯುತ್ತಿದೆ. ಈ ರಾಜಕೀಯ ಬಿಕ್ಕಟ್ಟಿನ ನಡುವೆಯೇ, ಡಿ.ಕೆ.ಶಿವಕುಮಾರ್   ಭವಿಷ್ಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ  ಆಡಿದ್ದ ಮಾತು  ವೈರಲ್ ಆಗುತ್ತಿವೆ.

ಎರಡೂವರೆ ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ, ಎರಡೂವರೆ ವರ್ಷಗಳ ಬಳಿಕ ಸಿಎಂ ಗದ್ದುಗೆಯನ್ನು ಬಿಟ್ಟುಕೊಡುವುದಾಗಿ ಡಿ.ಕೆ.ಶಿವಕುಮಾರ್​ ಅವರಿಗೆ ವಾಗ್ದಾನ ಮಾಡಿದ್ದರು. ಆದರೆ ಇದೀಗ ಕರ್ನಾಟಕದ ರಾಜಕೀಯದ ಸ್ಥಿತಿ ಅಯೋಮಯವಾಗಿದೆ. ಮುಖ್ಯಮಂತ್ರಿಯ ಖುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್​ ನಡುವೆ ಭಾರಿ ಜಿದ್ದಾಜಿದ್ದಿ ನಡೆದಿದ್ದು, ಇವುಗಳ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಇತರರೂ ಮಧ್ಯೆ ಬರುತ್ತಿರುವುದರಿಂದ ನವೆಂಬರ್​ ಕ್ರಾಂತಿ ಏನಾಗಲಿದೆ ಎನ್ನುವ ಕುತೂಹಲಕ್ಕಿನ್ನೂ ಉತ್ತರ ಸಿಗಬೇಕಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದ ರೀತಿಯಲ್ಲಿ ಸದ್ಯ ಕರ್ನಾಟಕದ ರಾಜಕೀಯ ನಡೆಯುತ್ತಿದೆ.

ಒಬ್ಬೊಬ್ಬರದ್ದು ಒಂದೊಂದು ಮಾತು

ಶಾಸಕರ ದೆಹಲಿ ಪ್ರವಾಸ ನಡೆದಿದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದವಾಗಿರಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನನ್ನದೇನೂ ಇಲ್ಲ, ಏನಿದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರೇ ಹೈಕಮಾಂಡ್ ನಿರ್ಧಾರ ಅಂತಿಮ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಖುರ್ಚಿ ನನಗೆ ಸಿಗದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್​ (D.K.Shivakumar) ಹೇಳುತ್ತಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಗುಸುಗುಸು ಕೂಡ ಶುರುವಾಗಿಬಿಟ್ಟಿದೆ.

ಯಡಿಯೂರಪ್ಪನವರ ವಿಡಿಯೋ ವೈರಲ್​

ಇವೆಲ್ಲವುಗಳ ನುವೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ಮಾತೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. 2018ರಲ್ಲಿ ಸೆಷನ್​ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಶಿವಕುಮಾರ್​ ಅವರ ಭವಿಷ್ಯವನ್ನೇ ನುಡಿದುಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆಗ ಯಡಿಯೂರಪ್ಪನವರು ಹೇಳಿದ ಮಾತಿಗೆ ಶಿವಕುಮಾರ್​ ಸುಮ್ಮನೇ ನಕ್ಕಿದ್ದರು. ಆದರೆ ಇದೀಗ ಅದೇ ನಿಜವಾಗುವಂತೆ ರಾಜ್ಯ ರಾಜಕೀಯದಲ್ಲಿ ಕಾಣಿಸುತ್ತಿದೆ.

ನಾಳೆ ಪಶ್ಚಾತ್ತಾಪ ಪಡುತ್ತೀರಿ ನೀವು...

ಅಷ್ಟಕ್ಕೂ ಯಡಿಯೂರಪ್ಪನವರು ಹೇಳಿದ್ದೇನು ಎಂದರೆ, ಡಿ.ಕೆ.ಶಿವಕುಮಾರ್​ ಅವರೇ, ನೀವು ನಾಳೆ ಪಶ್ಚಾತ್ತಾಪ ಪಡುವವರು ಇದ್ದೀರಿ. ಯಾರೂ ಮಾಡಬಾರದ ಒಂದು ಅಕ್ಷಮ್ಯ ಅಪರಾಧ ಮಾಡಿ, ಈ ನಾಡಿನ ಜನರ ನಂಬಿಕೆ, ವಿಶ್ವಾಸ ದ್ರೋಹ ಮಾಡಿರುವವರನ್ನು ಮುಖ್ಯಮಂತ್ರಿ ಮಾಡಿದ್ದೀರಿ ಎಂದಿದ್ದರು. ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ನನ್ನನ್ನೇ ನೀವು ಖಳನಾಯಕ ಎನ್ನುತ್ತೀರಾ ಎಂದು ಪ್ರಶ್ನಿಸಿದ್ದರು. ನೀವು ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಾ ಎಂದು ನಂಬಿದ್ದೀರಾ ಎಂದು ಹೇಳಿದಾಗ ಡಿ.ಕೆ.ಶಿವಕುಮಾರ್​ ಜೋರಾಗಿ ನಕ್ಕಿದ್ದರು. ಇದರ ವಿಡಿಯೋ ವೈರಲ್​ ಆಗುತ್ತಿದ್ದು, ಶಿವಕುಮಾರ್​ ಅವರು ಮುಖ್ಯಮಂತ್ರಿ ಆಗಲ್ಲ ಎನ್ನುವ ವಿಶ್ವಾಸ ಅಂದೇ ಯಡಿಯೂರಪ್ಪನವರಿಗೆ ಇತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಬಾಯಲ್ಲಿ ಮಚ್ಚೆ ಇದ್ಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

View post on Instagram