ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

 ಮೈಸೂರು : ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಬ್ಯಾಂಕ್‌ ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣ ತೆಗೆಯುವುದು ಕಂಡುಬಂದಲ್ಲಿ ನಿಗವಹಿಸಿ ಪರಿಶೀಲಿಸಿ ವರದಿ ನೀಡುವಂತೆ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ನಡೆಸಿ ತಿಳಿಸಲಾಗಿದೆ ಎಂದರು.

ಚುನಾವಣಾ ವೇಳಾಪಟ್ಟಿಪ್ರಕಟವಾದ ದಿನಾಂಕದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಈ ಬಾರಿ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಸಂಭಾವ್ಯ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರೆ ಮೂಲಗಳಿಂದ ಮತದಾರರಿಗೆ ಹಣದ ಆಮಿಷ ಒಡ್ಡುವುದು, ಬೇರೆ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಲ್ಲಿ ದಾಳಿ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಚುನಾವಣಾ ಆಯೋಗ ನೀಡುವ ಸೂಚನೆ ಪಾಲಿಸಬೇಕು. ಈಗಿನಿಂದಲೇ ಚುನಾವಣೆಗೆ ಸಂಬಂಧಿಸಿದಂತೆ ಇರುವ ನಿಯಮ ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಖಾಸಗಿ ಮನೆ, ಗೋಡೆ ಹಾಗೂ ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ , ಸ್ಥಳೀಯ ಸಂಸ್ಥೆಗಳ ಕಟ್ಟಡಗಳು ಹಾಗೂ ಇತ್ಯಾದಿಗಳಲ್ಲಿ ರಾಜಕೀಯ ಪಕ್ಷದ ವಿಷಯಗಳ ಕುರಿತ ಗೋಡೆ ಬರಹ, ಪೋಸ್ಟರ್ಸ್‌, ಬ್ಯಾನರ್‌, ಕಟೌಟ್‌ಗಳು ಹಾಕಲಾಗಿದ್ದು ಅದನ್ನು ಇಂದಿನಿಂದ ತೆರವುಗೊಳಿಸಲು ಸೂಚಿಸಲಾಗಿದೆ.

ಈ ಸಂಬಂಧ ಪ್ಲೆಕ್ಸ್‌ ಅಳವಡಿಸಲು ಅಧಿಕೃತವಾಗಿ ಸ್ಧಳೀಯ ಸಂಸ್ಧೆಗಳಿಂದ ಹಾಗೂ ನಗರ ವ್ಯಾಪ್ತಿಯಲ್ಲಿ ನಗರ ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು ಅನುಮತಿ ಪಡೆಯದೆ ಅನಧಿಕೃತ ಗೋಡೆ ಬರಹ ಪ್ಲೆಕ್ಸ್‌ ಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಗೂ ಮನ್ನವೇ ರಾಜಕೀಯ ಪಕ್ಷದವರು ಬೈಕ್‌ ರಾರ‍ಯಲಿ ಮಾಡುವುದಕ್ಕೆ ರಾಜಕೀಯ ಪಕ್ಷಗಳ ಸಭೆ ಸಮಾರಂಭ ಮಾಡುವುದಕ್ಕೆ ಅನುಮತಿ ಪಡೆಯಬೇಕು. ರಾಜಕೀಯ ಸಮಾರಂಭಗಳಲ್ಲಿ ಪೆಂಡಾಲ್‌ ಹಾಕುವುದು ಹಾಗೂ ಧ್ವನಿ ವರ್ಧಕ ಬಳಸುವ ಮುನ್ನ ನಿಯಾಮನುಸಾರ ಅನುಮತಿ ಪಡೆಯಬೇಕು. ಧ್ವನಿವರ್ಧಕಗಳಿಂದ ನಿಯಾಮನುಸಾರ ಹೆಚ್ಚನ ಡೆಸಬಲ್‌ಗಿಂತ ಶಬ್ಧ ಬರದಂತೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ಜಾಗೃತಿ ವಹಿಸಿಬೇಕು. ಅನುಮತಿ ಪಡೆಯದೆ ಇದ್ದರೆ ಕರ್ನಾಟಕ ಪೊಲೀಸ್‌ ಕಾಯ್ದೆ ಹಾಗೂ ಮೋಟರ್‌ ವೆಹಿಕಲ್‌ ಕಾಯ್ದೆ ಅನ್ವಯ ಕ್ರಮ ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಉತ್ತನಹಳ್ಳಿ ಶಿವಣ್ಣ, ಬಿಜೆಪಿ ಪಕ್ಷದ ಗೋಕುಲ್‌ ಗೋವರ್ಧನ್‌, ಎಚ್‌.ಎಸ್‌. ಚೇತನ್‌ ಹಾಗೂ ಇತರ ಪಕ್ಷದ ಮುಂಖಡರು ಇದ್ದರು.