ಕಾರ್ಮಿಕರ ಆರೋಗ್ಯಕ್ಕಾಗಿ ಇಎಸ್‌ಐ ಆಸ್ಪತ್ರೆ: ರವಿ

ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮುತ್ತಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯದ 118ನೇ ಇಎಸ್‌ಐ ಚಿಕಿತ್ಸಾಲಯ ತೆರೆಯುವ ಮೂಲಕ ಕೈಗಾರಿಕೆಗಳ ಜೀವಾಳವಾಗಿರುವ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಎನ್‌.ಜಿ.ರವಿಕುಮಾರ್‌ ತಿಳಿಸಿದ್ದಾರೆ.

ESI Hospital for Labor Health: Ravi snr

  ತುಮಕೂರು (ಜ.10): ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮುತ್ತಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯದ 118ನೇ ಇಎಸ್‌ಐ ಚಿಕಿತ್ಸಾಲಯ ತೆರೆಯುವ ಮೂಲಕ ಕೈಗಾರಿಕೆಗಳ ಜೀವಾಳವಾಗಿರುವ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಎನ್‌.ಜಿ.ರವಿಕುಮಾರ್‌ ತಿಳಿಸಿದ್ದಾರೆ.

ನಗರದ ವಸಂತನರಸಾಪುರ ಮೊದಲ ಹಂತದ ಕೈಗಾರಿಕಾ ಪ್ರದೇಶ ಸೈಟ್‌ ಸಂಖ್ಯೆ 230-231ರಲ್ಲಿ ಇಎಸ್‌ಐ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಸ್ಪತ್ರೆಯಲ್ಲಿ ಮೊದಲ ಹಂತದ ಚಿಕಿತ್ಸೆಗಳು ದೊರೆಯಲಿದ್ದು, ಅತ್ಯಂತ ಗಂಭೀರ ಪ್ರಕರಣಗಳು ಕಂಡು ಬಂದರೆ ಈಗಾಗಲೇ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಸಿದ್ದಾರ್ಥ, ಸಿದ್ದಗಂಗಾ ಮತ್ತು ಶ್ರೀದೇವಿ ಮೆಡಿಕಲ್‌ ಕಾಲೇಜುಗಳಿಗೆ ಹೆಚ್ಚಿನ ಚಿಕಿತ್ಸೆಗೆ ರೇಫರ್‌ ಮಾಡಲಾಗುವುದು. ಎಷ್ಟೇ ತಾಂತ್ರಿಕತೆ ಬೆಳೆದರೂ ಕಾರ್ಮಿಕನಿಲ್ಲದ ಕೈಗಾರಿಕೆಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಕಾರ್ಮಿಕ ದೇವೋಭವ ಎನ್ನುವ ಕಾಲ ಇದಾಗಿದೆ. ವಸಂತನರಸಾಪುರ ಕರಾವೇ ಚಿಕಿತ್ಸಾಲಯದಲ್ಲಿ 21 ಸಾವಿರ ಕಾರ್ಮಿಕರಿಗೆ ಚಿಕಿತ್ಸೆ ದೊರೆಯಲಿದೆ ಎಂದು ರವಿಕುಮಾರ್‌ ತಿಳಿಸಿದರು.

ವಸಂತನರಸಾಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ಕಾರ್ಮಿಕರೇ ಕೈಗಾರಿಕೆಗಳ ಬೆನ್ನೆಲುಬು. ಕೈಗಾರಿಕೆಗಳು, ಕಾರ್ಮಿಕರು ಮತ್ತು ಮಾಲೀಕರು ಈ ಮೂವರು ಒಂದನ್ನು ಬಿಟ್ಟು ಮತ್ತೊಂದನ್ನು ಊಹಿಸಲು ಸಾಧ್ಯವಿಲ್ಲ. ಸುಮಾರು 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತುತ 15 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಇದರ ಭಾಗವಾಗಿ ಸರ್ಕಾರ ಇಂದು ಇಎಸ್‌ಐ ಚಿಕಿತ್ಸಾಲಯ ತೆರೆದಿದೆ. ಇದರ ಸದುಪಯೋಗವನ್ನು ಎಲ್ಲ ಕಾರ್ಮಿಕರು ಪಡೆದುಕೊಳ್ಳಬೇಕು, ಹಾಗೆಯೇ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಸಕಾಲದಲ್ಲಿ ಅಗತ್ಯ ಇರುವ ಚಿಕಿತ್ಸೆ ನೀಡಿ, ಕಾರ್ಮಿಕರಿಗೆ ನೆರವಾಗುವಂತೆ ಮನವಿ ಮಾಡಿದರು.

ವಸಂತನರಸಾಪುರ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಹರೀಶ್‌ ಮಾತನಾಡಿ, 2011ರಲ್ಲಿ ನಮ್ಮ ಸಂಘ ಸ್ಥಾಪನೆಯಾದ ಸಂದರ್ಭದಲ್ಲಿಯೇ ಇಲ್ಲಿ ಇಎಸ್‌ಐ ಆಸ್ಪತ್ರೆ ತೆರೆಯಬೇಕೆಂದು ಮನವಿ ಸಲ್ಲಿಸಿದ್ದೇವು. ಇದರ ಭಾಗವಾಗಿಯೇ ಇಂದು ಚಿಕಿತ್ಸಾ ಕೇಂದ್ರ ಆರಂಭಗೊಂಡಿದೆ. ಹಲವಾರು ಸೌಲಭ್ಯಗಳು ದೊರೆಯಲಿದೆ. ಕೆಲಸದ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟಆನಾಹುತಗಳಿಗೆ ಚಿಕಿತ್ಸೆ ದೊರೆಯಲಿದೆ. ಕಾರ್ಮಿಕರು ಮತ್ತು ಅವರ ಕುಟುಂಬದವರು ಇದರ ಸೌಲಭ್ಯ ಪಡೆಯಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ಕೆಐಎಡಿಬಿ ಎಇಇ ಟಿ.ಎಸ್‌.ಲಕ್ಷ್ಮೀಶ್‌, ವಸಂತನರಸಾಪುರ ಕೈಗಾರಿಕಾ ಸಂಘಗಳ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಕಾರ್ಯದರ್ಶಿ ಡಾ.ಸಿ.ವಿ.ಹರೀಶ್‌, ಜಂಟಿ ಕಾರ್ಯದರ್ಶಿ ಸತ್ಯನಾರಾಯಣ್‌,ಖಜಾಂಚಿ ಬಾಬುಲಾಲ್‌ ಜೈನ್‌, ಮಾನವ ಸಂಪನ್ಮೂಲ ಅಧಿಕಾರಿ ಮಹೇಶ್‌, ಎಚ್‌, ತುಮಕೂರು ಇಎಸ್‌ಐ ವೈದ್ಯರಾದ ಡಾ.ಆನಂದ್‌ ಮತ್ತಿತರರು ಉಪಸ್ಥಿತರಿದ್ದರು.

ಎರಡು ವರ್ಷದಲ್ಲಿ ಆಸ್ಪತ್ರೆ ಆರಂಭ: ನಾಗೇಶ್‌

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್‌ ಮಾತನಾಡಿ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ವಿಮಾ ಇಲಾಖೆ ರಾಜ್ಯ ಘಟಕದಿಂದ ಒಂದು ವಿಮಾ ಚಿಕಿತ್ಸಾಲಯವನ್ನು ಇಂದು ತೆರೆಯಲಾಗುತ್ತಿದೆ. ಇಲ್ಲಿಗೆ ಬರುವ ರೋಗಿಗಳನ್ನು ಪರಿಶೀಲಿಸಿ, ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ಕೇಂದ್ರ ಸರ್ಕಾರದಿಂದ 100 ಬೆಡ್‌ ಆಸ್ಪತ್ರೆ ಸಹ ಮಂಜೂರಾಗಿದ್ದು, ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದೆ. ಕೆಐಎಡಿಬಿ ವತಿಯಿಂದ 5 ಎಕರೆ ಜಾಗ ನೀಡಲಾಗಿದೆ. ಎರಡು ವರ್ಷದಲ್ಲಿ ಆಸ್ಪತ್ರೆ ಆರಂಭವಾಗಲಿದೆ. ಹಾಗಾಗಿ ಕಾರ್ಮಿಕರು ಈ ವಿಮಾ ಚಿಕಿತ್ಸಾಲಯದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Latest Videos
Follow Us:
Download App:
  • android
  • ios