ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಬೆಂಗಳೂರು (ಏ.18): ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು. ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು. ವಿಕಾಸಸೌಧದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್.ಕೆ.ಸಿಸಿಐ) ಆಯೋಜಿಸಿದ್ದ ‘ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ 2026’ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯೇ ಚಾಲಕ ಶಕ್ತಿಯಾಗಿದೆ ಎಂದರು.

50 ಕೋಟಿ ವೆಚ್ಚದಲ್ಲಿ ಜೈವಿಕ ಉದ್ಯಾನ

ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಶತಮಾನದ ತರುವಾಯ 153 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದಕ್ಕಾಗಿ 50 ಕೋಟಿ ರು. ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ಎಫ್‌ಕೆಸಿಸಿಐ ಸಿಎಸ್ಆರ್ ಮತ್ತು ಸುಸ್ಥಿರತೆ ಸಮಿತಿ ಅಧ್ಯಕ್ಷ ಕೆ. ಕೀರ್ತನ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಪೂರ್ಣಕಲಾ – ದಿ ಆರ್ಟ್ ವಿಲೇಜ್ ಸಂಸ್ಥಾಪಕ ನವ್ ಕಿಶ್ಲೇ, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಸೇರಿ ಮತ್ತಿತರರು ಇದ್ದರು.