Asianet Suvarna News Asianet Suvarna News

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಶುರುವಾಯ್ತು ಎಸ್ಕಲೇಟರ್ ಸೌಲಭ್ಯ..!

ಪ್ರಯಾಣಿಕರಿಗೆ ಈ ಸೌಕರ್ಯದಿಂದ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ. ಒಂದನೇ ಪ್ಲಾಟ್‌ಫಾರಂನಿಂದ ಎರಡನೇ ಪ್ಲಾಟ್‌ಫಾರಂಗೆ ತೆರಳಲು ಒದ್ದಾಡುತ್ತಿದ್ದ ಪ್ರಯಾಣಿಕರು ಈಗ ನಿರಾಳರಾಗಿದ್ದಾರೆ.

Escalator Facility Finally Started at Ballari Railway Station grg
Author
First Published Nov 6, 2023, 2:20 AM IST

ಕೆ.ಎಂ. ಮಂಜುನಾಥ್

ಬಳ್ಳಾರಿ(ನ.06):  ಗಣಿ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಂತೆ ಇಲ್ಲಿನ ಕೇಂದ್ರೀಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯ ಶುರುವಾಗಿದೆ. ಪ್ರಯಾಣಿಕರಿಗೆ ಈ ಸೌಕರ್ಯದಿಂದ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ. ಒಂದನೇ ಪ್ಲಾಟ್‌ಫಾರಂನಿಂದ ಎರಡನೇ ಪ್ಲಾಟ್‌ಫಾರಂಗೆ ತೆರಳಲು ಒದ್ದಾಡುತ್ತಿದ್ದ ಪ್ರಯಾಣಿಕರು ಈಗ ನಿರಾಳರಾಗಿದ್ದಾರೆ.

ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ನೀಡುವ ಬಳ್ಳಾರಿಗೆ ಪ್ರಯಾಣಿಕ ಸೇವೆಗಳು ಹೆಚ್ಚಾಗಬೇಕು ಎಂಬ ಕೂಗಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್ ಹಾಗೂ ಲಿಫ್ಟ್ ಸೌಲಭ್ಯ ಕಲ್ಪಿಸಲು ಮುಂದಾಗಿತ್ತು. ಲಿಫ್ಟ್ ಸೇವೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಶುರುವಾಗಿತ್ತು. ಆದರೆ, ಎಸ್ಕಲೇಟರ್ ಕಾಮಗಾರಿಗೆ ನಿಧಾನಗತಿಯಲ್ಲಿ ನಡೆದಿತ್ತು. ಇದು ಸ್ಥಳೀಯ ಪ್ರಯಾಣಿಕರ ತೀವ್ರ ಅಸಮಾಧಾನಕ್ಕೂ ಕಾರಣವಾಗಿತ್ತು. ಕೊನೆಗೂ ಈ ಭಾಗದ ಜನರ ಒತ್ತಾಸೆಯಂತೆಯೇ ಎಸ್ಕಲೇಟರ್ ಸೇವೆಗೆ ರೈಲ್ವೆ ಇಲಾಖೆ ಚಾಲನೆ ನೀಡಿದೆ.

ಮಾರು ವೇಷದಲ್ಲಿ ಆರ್‌ಟಿಒ ಕಚೇರಿಗೆ ಬಂದ ಶಾಸಕ ಭರತ್ ರೆಡ್ಡಿ; ತಪ್ಪಿಸಿಕೊಂಡು ಓಡಿಹೋದ ಬ್ರೋಕರ್‌ಗಳು!

ನಾಲ್ಕು ತಿಂಗಳ ಹಿಂದೆಯೇ ಶುರುವಾಗಬೇಕಿತ್ತು:

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ₹1.58 ಕೋಟಿ ವೆಚ್ಚದಲ್ಲಿ ಎರಡು ಲಿಫ್ಟ್‌ಗಳನ್ನು ನಿರ್ಮಿಸಲಾಗಿದ್ದು, ₹2.4 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ ನಿರ್ಮಿಸುವ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ಈ ಎರಡು ಕಾಮಗಾರಿಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಆರಂಭಿಸಲಾಗಿತ್ತು. ನಿಗದಿಯಂತೆ ಲಿಫ್ಟ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸೇವೆಗೆ ನೀಡಲಾಯಿತು. ಆದರೆ, ಎಸ್ಕಲೇಟರ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಎಸ್ಕಲೇಟರ್ ಸೇವೆ ಆರಂಭಿಸಬೇಕಾಗಿತ್ತು. ಆದರೆ, ನಾನಾ ಕಾರಣಗಳನ್ನೊಡ್ಡಿ ಇಲಾಖೆ ಕಾಮಗಾರಿಯನ್ನು ನಿಧಾನಗೊಳಿಸಿತ್ತು. ಈ ಭಾಗದ ರೈಲ್ವೆ ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಮುಖಂಡರ ನಿರಂತರ ಒತ್ತಾಯ ಹಾಗೂ ಸಂಸದರ ಸ್ಪಂದನೆಯಿಂದ ಎಸ್ಕಲೇಟರ್ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಅಣಿಯಾಗಿದೆ.

ಭಾರ ಹೊತ್ತು ಸಾಗುವ ಸಂಕಷ್ಟ ತಪ್ಪಿತು:

ಎಸ್ಕಲೇಟರ್ ಸೇವೆ ಆರಂಭಕ್ಕೆ ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ರೈಲ್ವೆ ನಿಲ್ದಾಣದಿಂದ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಅದರಲ್ಲೂ ವೃದ್ಧರು, ಮಹಿಳೆಯರು ಹಾಗೂ ರೋಗಿಗಳು ಒಂದು ಪ್ಲಾಟ್‌ಫಾರಂನಿಂದ ಮತ್ತೊಂದೆಡೆ ಭಾರದ ಬ್ಯಾಗ್‌ಗಳನ್ನು ಹಿಡಿದು ತೆರಳಲು ಕಷ್ಟವಾಗಿತ್ತು. ಎಸ್ಕಲೇಟರ್ ಸೇವೆ ಆರಂಭದಿಂದ ಅನುಕೂಲವಾಗಿದೆ ಎಂದು ''ಕನ್ನಡಪ್ರಭ''ಕ್ಕೆ ಪ್ರತಿಕ್ರಿಯಿಸಿದರು.
ಬಳ್ಳಾರಿ ಜಿಲ್ಲೆಯ ಅತ್ಯುತ್ಕೃಷ್ಟ ಕಬ್ಬಿಣದ ಅದಿರನ್ನು ನಿತ್ಯ ಗೂಡ್ಸ್‌ಗಳ ಮೂಲಕ ಕಳುಹಿಸಿಕೊಡಲಾಗುತ್ತಿದೆ. ಇದರಿಂದ ರೈಲ್ವೆ ಇಲಾಖೆಗೆ ವಾರ್ಷಿಕ ಸಾವಿರಾರು ಕೋಟಿ ರು. ಆದಾಯವಿದೆ. ಹಾಗೆ ನೋಡಿದರೆ ಬಳ್ಳಾರಿಗೆ ಈ ಮೊದಲೇ ಲಿಫ್ಟ್ ಹಾಗೂ ಎಸ್ಕಲೇಟರ್ ಸೌಲಭ್ಯ ಕಲ್ಪಿಸಬೇಕಿತ್ತು. ತಡವಾಗಿಯಾದರೂ ರೈಲ್ವೆ ಇಲಾಖೆ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದು ತಿಳಿಸಿದರು.

ಮಂಡ್ಯ ರೈತರ ಕಾವೇರಿ ಹೋರಾಟದ ಮಾದರಿಯಲ್ಲಿ, ತುಂಗಭದ್ರಾ ನೀರಿಗೆ ಬಳ್ಳಾರಿ ರೈತರ ಹೋರಾಟ ಆರಂಭ

ಎಸ್ಕಲೇಟರ್ ಸೇವೆಗೆ ಚಾಲನೆ

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಅಭಯಕುಮಾರ್ ಹಾಗೂ ಸುವಾಲಿ ರಾಜಾನಾಯಕ್ ಅವರು ಶುಕ್ರವಾರ ಎಸ್ಕಲೇಟರ್ ಸೇವೆಗೆ ಚಾಲನೆ ನೀಡಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲಸ ಪೂರ್ಣಗೊಂಡ ತಕ್ಷಣ ಎಸ್ಕಲೇಟರ್ ಸೇವೆಯನ್ನು ಲೋಕಾರ್ಪಣೆಗೊಳಿಸಿದ್ದಾಗಿ ''ಕನ್ನಡಪ್ರಭ''ಕ್ಕೆ ತಿಳಿಸಿದರು. ಎಸ್ಕಲೇಟರ್ ಸೇವೆ ಶುರು ಮಾಡಲು ಸಾಕಷ್ಟು ಕೆಲಸ ಬಾಕಿಯಿತ್ತು. ಹೀಗಾಗಿ ತಡವಾಯಿತು ಎಂದು ರೈಲ್ವೆ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗದ ಸೀನಿಯರ್ ಎಂಜಿನಿಯರ್ ಸುವಾಲಿ ರಾಜಾನಾಯಕ್ ''ಕನ್ನಡಪ್ರಭ''ಕ್ಕೆ ವಿವರಿಸಿದರು.

ಎಸ್ಕಲೇಟರ್ ಸೇವೆ ಶುರು ಮಾಡಿರುವುದು ಸಂತಸದ ಸಂಗತಿ. ಈಗಿರುವ ಎಸ್ಕಲೇಟರ್ ಏಕಮುಖವಾಗಿದೆ. ದ್ವಿಮುಖವಾಗಿ ನಿರ್ಮಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ತಿಳಿಸಿದ್ದಾರೆ. 

Follow Us:
Download App:
  • android
  • ios