Gavisiddeshwara Swamiji speech ಹಗರಿಬೊಮ್ಮನಹಳ್ಳಿಯ ಕಡಲಬಾಳು ಗ್ರಾಮದಲ್ಲಿ ನಡೆದ ಧರ್ಮಸಭೆಯಲ್ಲಿ, ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಜಾತಿ ಪಕ್ಷಗಳು ಮಾನವನ ವಿಕಾಸಕ್ಕೆ ಅಡ್ಡಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. 

ಹಗರಿಬೊಮ್ಮನಹಳ್ಳಿ (ಫೆ.18): ಕೂಡಿ ಬಾಳುವ ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ದೇಶದಲ್ಲಿರುವ ಜಾತಿ ಪಕ್ಷಗಳು ಮಾನವನ ವಿಕಾಸಕ್ಕೆ ಅಡ್ಡಿಯಾಗುತ್ತಿವೆ. ದೇವರು ಧರ್ಮಗಳ ಸಹಯೋಗದಲ್ಲಿ ಜಾತಿ ಪಕ್ಷಗಳನ್ನು ಹೊರಗಿಟ್ಟು ಸಮಾಜ ಬೆಳೆಸುವಂತೆ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸಲಹೆ ನೀಡಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಶಾಖಾ ಗವಿಮಠದ ನೂತನ ಪೀಠಾಧಿಪತಿಗಳ ಪುರ ಪ್ರವೇಶ ನಿಟ್ಟಿನಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ. ಧಾರ್ಮಿಕ ಶ್ರೀಮಂತಿಕೆ ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿಯನ್ನು ಮರೆಯಬೇಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಗ್ರಾಮದ ಶಾಖಾ ಗವಿ ಮಠದ ನೂತನ ಪೀಠಾಧಿಪತಿ ಮರಿ ಶಾಂತವೀರ ಮಹಾಸ್ವಾಮಿಗಳು ಮಾತನಾಡಿ, ಜಾತಿ ಕಳಚಿಟ್ಟು ಮಠಕ್ಕೆ ಬಂದವರಿಗೆ ಸ್ವಾಗತವಿದೆ. ಸಮಾಜದಲ್ಲಿ ಮೇಲು-ಕೀಳು ತೊಲಗಿಸುವ ಹಾಗೂ ಸಹೋದರತೆಯ ತತ್ವ ಬಲಗೊಳಿಸಲು ಗ್ರಾಮಸ್ಥರ ಸಹಾಯ ಯಾಚಿಸುತ್ತಿದ್ದೇನೆ ಎಂದು ಕೋರಿದರು.

ಶಾಸಕರಾದ ನೇಮಿರಾಜ ನಾಯ್ಕ ಮಾತನಾಡಿ, ಕೊಪ್ಪಳದ ಗವಿಮಠದ ಶ್ರೀಗಳು ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಬಡ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ದೀಕ್ಷೆಯಲ್ಲಿ ತೊಡಗಿದ್ದಾರೆ. ಹಾಗೆಯೇ ಕಡಲಬಾಳು ಗ್ರಾಮದ ಶ್ರೀಗಳೂ ಬಡಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಬಡ ಮಕ್ಕಳ ಲೌಕಿಕ ಪ್ರಕಾಶಕ್ಕಿಂತಲೂ ಅಂತರ್ಯದ ಪ್ರಕಾಶ ಬೆಳಗಿಸುವುದಕ್ಕೆ ಒತ್ತು ನೀಡಬೇಕು ಎಂದು ವಿನಂತಿಸಿಕೊಂಡರು.

ಹಡಗಲಿಯ ಶಾಖಾ ಗವಿಮಠದ ಡಾ. ಹಿರಿ ಶಾಂತವೀರ ಶ್ರೀಗಳು, ಉತ್ತಂಗಿಯ ಸೋಮಶಂಕರ ಶ್ರೀಗಳು, ಸಂತೆಕಲ್ಲೂರಿನ ಗುರುಬಸವ ಶ್ರೀಗಳು, ಸೊನ್ನ ವಿರಕ್ತ ಮಠದ ಡಾ. ಶಿವಾನಂದ ಶ್ರೀಗಳು, ನಂದೀಪುರ ಡಾ. ಮಹೇಶ್ವರ ಶ್ರೀಗಳು, ಹಾಲ ಸಿದ್ದೇಶ್ವರ ಶ್ರೀಗಳು, ನೆಲೋಗಿಯ ಡಾ.ಸಿದ್ಧಲಿಂಗ ಶ್ರೀಗಳು ಸಭೆಯಲ್ಲಿ ಆಶೀರ್ವಚನ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಬುಕೆಟಗಾರ ಗಂಗಣ್ಣ, ನಾಗರಾಜ್ ಜನ್ನು, ನವೀನ್ ಕುಮಾರ್, ಮುಖಂಡರಾದ ಕೃಷ್ಣಮೂರ್ತಿ ಶೆಟ್ರು, ಕನ್ನಿಹಳ್ಳಿ ಚಂದ್ರಶೇಖರ್, ಸಿ.ಎಚ್. ಸಿದ್ಧರಾಜ್, ಇಟಗಿ ಕೊಟ್ರೇಶ್ ಮತ್ತಿತರರಿದ್ದರು,

ಹೂವಿನ ಹಡಗಲಿಯ ಗವಿಸಿದ್ದೇಶ್ವರ ಸ್ವರ ಸಂಚಾರ ಕಲಾ ತಂಡ ವಚನ ಗಾಯನ ನಡೆಸಿದರು. ಗವಿಸಿದ್ದಪ್ಪ ಮತ್ತು ಬ್ಯಾಟಿ ನಾಗರಾಜ್ ನಿರ್ವಹಿಸಿದರು. 

YouTube video player