Koppal Gavisiddheshwara Mutt ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಬಿಸರಳ್ಳಿ ಹಾಗೂ ಕಡಲಬಾಳು ಶಾಖಾ ಮಠಗಳಿಗೆ ನೂತನ ಪೀಠಾಧಿಪತಿಗಳನ್ನು ನೇಮಿಸಲಾಗಿದೆ.

ಕೊಪ್ಪಳ (ಫೆ.11) ದಕ್ಷಿಣದ ಕುಂಭಮೇಳ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಆಡಳಿತಕ್ಕೆ ಒಳಪಟ್ಟ ಪ್ರಮುಖ ಶಾಖಾ ಮಠಗಳಿಗೆ ಅಂತಿಮವಾಗಿ ಪೀಠಾಧಿಪತಿಗಳನ್ನು ನೇಮಕ ಮಾಡಲಾಗಿದೆ. ಇಂದು ಬೆಳಿಗ್ಗೆ ಶ್ರೀಮಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳ ಮೂಲಕ ಇಬ್ಬರು ಯುವ ಸಾಧಕರಿಗೆ ಪೀಠದ ಜವಾಬ್ದಾರಿ ವಹಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗವಿಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸರಳ ನೇಮಕಾತಿ ಪ್ರಕ್ರಿಯೆ

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಇಂದು ಬೆಳಿಗ್ಗೆ ಶ್ರೀಮಠದ ಆವರಣದಲ್ಲಿ ಅತ್ಯಂತ ಸರಳ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮ ಜರುಗಿತು. ಈ ಹಿಂದೆ ಪೀಠಾಧಿಪತಿಗಳಿಲ್ಲದೆ ಖಾಲಿ ಉಳಿದಿದ್ದ ಕೊಪ್ಪಳ ತಾಲೂಕಿನ ಬಿಸರಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಕಡಲಬಾಳು ಶಾಖಾ ಮಠಗಳಿಗೆ ನೂತನ ಶ್ರೀಗಳನ್ನು ಆಯ್ಕೆ ಮಾಡುವ ಮೂಲಕ ಭಕ್ತರ ದಶಕಗಳ ನಿರೀಕ್ಷೆಗೆ ತೆರೆ ಬಿದ್ದಿದೆ.

ವೀರೇಶ ದೇವರು ಹಾಗೂ ಪ್ರಶಾಂತ ದೇವರಿಗೆ ಪೀಠದ ಜವಾಬ್ದಾರಿ

ಶ್ರೀಮಠದ ಪರಂಪರೆಯಂತೆ ಬಿಸರಳ್ಳಿ ಗವಿಸಿದ್ದೇಶ್ವರ ಮಠಕ್ಕೆ ವೀರೇಶ ದೇವರು ಅವರನ್ನು ಹಾಗೂ ಕಡಲಬಾಳು ಮಠಕ್ಕೆ ಪ್ರಶಾಂತ ದೇವರು ಅವರನ್ನು ನೇಮಕ ಮಾಡಲಾಗಿದೆ. ಅಭಿನವ ಗವಿಸಿದ್ದೇಶ್ವರ ಶ್ರೀಗಳು ಉಭಯರಿಗೆ ಮಂತ್ರದೀಕ್ಷೆ ನೀಡಿ, ಮಠದ ಅಭಿವೃದ್ಧಿ ಹಾಗೂ ಸಮಾಜ ಸೇವೆಯ ಸಂಕಲ್ಪ ಮಾಡಿಕೊಟ್ಟರು.

ನೂತನ ಶ್ರೀಗಳಿಗೆ ನಾಮಕರಣ ಮಾಡಿದ ಅಜ್ಜನವರು

ನೇಮಕಾತಿ ಸಂದರ್ಭದಲ್ಲಿ ಉಭಯ ಶ್ರೀಗಳಿಗೆ ಹೊಸ ನಾಮಕರಣ ಮಾಡಲಾಗಿದ್ದು, ವೀರೇಶ ದೇವರು ಇನ್ನು ಮುಂದೆ 'ಶ್ರೀ ಶಿವಶಾಂತವೀರ ಸ್ವಾಮೀಜಿ' ಎಂದು ಹಾಗೂ ಪ್ರಶಾಂತ ದೇವರು ಇನ್ನು ಮುಂದೆ 'ಶ್ರೀ ಮರಿಶಾಂತವೀರ ಸ್ವಾಮೀಜಿ' ಎಂದು ಗುರುತಿಸಿಕೊಳ್ಳಲಿದ್ದಾರೆ.

ಶೀಘ್ರದಲ್ಲೇ ಅದ್ಧೂರಿ ಪೀಠಾರೋಹಣ ಮಹೋತ್ಸವ

ಇಂದು ಕೇವಲ ಶಾಸ್ತ್ರೋಕ್ತವಾಗಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಮುಂದಿನ ದಿನಗಳಲ್ಲಿ ಶುಭ ಮುಹೂರ್ತದಲ್ಲಿ ಉಭಯ ಮಠಗಳಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆ ಸಂದರ್ಭದಲ್ಲಿ ನಾಡಿನ ಗಣ್ಯರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಧಿಕೃತವಾಗಿ 'ಪೀಠಾರೋಹಣ' ಮಹೋತ್ಸವ ಜರುಗಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

YouTube video player