ಇಂಜಿನವಾರಿ ಹಳದೂರ ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮ. ಇದು ಮಲಪ್ರಭಾ ನದಿ ದಡದಲ್ಲಿದೆ. ಸಣ್ಣ ನೀರಾವರಿ ಇಲಾಖೆಯ ಆರ್‌ಐಡಿಎಫ್‌ 14ನೇ ಹಣಕಾಸು ಯೋಜನೆಯಡಿ 2010ರಲ್ಲೇ ಸುಮಾರು 4.99 ಕೋಟಿ ವೆಚ್ಚದಲ್ಲಿ ಸುಮಾರು 1225 ಎಕರೆ ಭೂಮಿಗೆ ನೀರು ಹರಿಸಲೆಂದು ಇಂಜಿನವಾರಿ ಏತ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಆದರೆ, ದಶಕವೇ ಕಳೆದರೂ ರೈತರ ಭೂಮಿಗೆ ಮಾತ್ರ ನೀರು ಹರಿದಿಲ್ಲ.

ಸಿ.ಎಂ.ಜೋಶಿ

ಗುಳೇದಗುಡ್ಡ(ಆ.12): ಕೃಷಿ ಭೂಮಿ ನೀರಾವರಿಗೆಂದು ಸರ್ಕಾರ ಕೋಟ್ಯಂತರ ರು. ಅನುದಾನ ಮೀಸಲಿಟ್ಟು ಯೋಜನೆ ಅನುಷ್ಠಾನಗೊಳಿಸುತ್ತಲೇ ಇರುತ್ತದೆ. ಆದರೆ, ಆರಂಭಿಕ ಹಂತದಲ್ಲಿಯೇ ಅಧಿಕಾರಿಗಳ ನಿರ್ಲಕ್ಷಕ್ಕೆ ಬಲಿಯಾಗಿ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಇಂಜಿನವಾರಿ ಏತ ನೀರಾವರಿ ಯೋಜನೆಯೇ ಇದಕ್ಕೊಂದು ತಾಜಾ ಉದಾಹರಣೆ.

ಇಂಜಿನವಾರಿ ಹಳದೂರ ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮ. ಇದು ಮಲಪ್ರಭಾ ನದಿ ದಡದಲ್ಲಿದೆ. ಸಣ್ಣ ನೀರಾವರಿ ಇಲಾಖೆಯ ಆರ್‌ಐಡಿಎಫ್‌ 14ನೇ ಹಣಕಾಸು ಯೋಜನೆಯಡಿ 2010ರಲ್ಲೇ ಸುಮಾರು 4.99 ಕೋಟಿ ವೆಚ್ಚದಲ್ಲಿ ಸುಮಾರು 1225 ಎಕರೆ ಭೂಮಿಗೆ ನೀರು ಹರಿಸಲೆಂದು ಇಂಜಿನವಾರಿ ಏತ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಆದರೆ, ದಶಕವೇ ಕಳೆದರೂ ರೈತರ ಭೂಮಿಗೆ ಮಾತ್ರ ನೀರು ಹರಿದಿಲ್ಲ.

ಬಾಗಲಕೋಟೆಯಲ್ಲಿ ರಾಜ್ಯಮಟ್ಟದ ಮನೋವೈದ್ಯರ ಸಮ್ಮೇಳನ: 300ಕ್ಕೂ ಅಧಿಕ ಮನೋವೈದ್ಯರು ಭಾಗಿ!

ಕಾಮಗಾರಿಗಷ್ಟೇ ಸೀಮಿತ:

ಇಂಜಿನವಾರಿ ಏತ ನೀರಾವರಿ ಯೋಜನೆ ಈಗ ಸಂಪೂರ್ಣ ಹಳ್ಳ ಹಿಡಿದಂತಿದೆ. ರೈತರ ಕೃಷಿ ಭೂಮಿಗೆ ಹನಿ ನೀರೂ ಹರಿಯದಾಗಿದೆ. ಇದನ್ನು ನೋಡಿದರೆ ಯೋಜನೆಗಳು ರೈತರಿಗೆ ತಲುಪುವುದಾದರೂ ಹೇಗೆ? ಕೇವಲ ಕಾಮಗಾರಿಗಳಿಗಷ್ಟೇ ಯೋಜನೆ ಸೀಮಿತವೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಏತ ನೀರಾವರಿ ಇಲ್ಲದೇ ಈ ಭಾಗದ ರೈತರನ್ನು ಕಾಡುತ್ತಿದೆ.

1225 ಎಕರೆ ಭೂಮಿಗೆ ನೀರಿಲ್ಲ:

ಸುಮಾರು ಏಳೆಂಟು ವರ್ಷಗಳ ಹಿಂದೆಯೇ ಅಂದರೆ ಬಿಜೆಪಿ ಸರ್ಕಾರದ ಆಡಳಿತದಲ್ಲೇ ಯೋಜನೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಯೋಜನೆಯಿಂದ 1225 ಎಕರೆ ಕೃಷಿ ಭೂಮಿಗೆ ಇದುವರೆಗೂ ನೀರು ಸಿಕ್ಕಿಲ್ಲ. ಇದರಿಂದ ಈ ಭಾಗದ ರೈತರ ಭೂಮಿಗಳು ನೀರಾವರಿಯಿಂದ ವಂಚಿತವಾಗಿವೆ. ರೈತರು ನೀರಿಗಾಗಿ ಹಲಬುವಂತಾಗಿದೆ. ಕಾಲುವೆ ನಿರ್ಮಿಸಿದರೂ ಅದಕ್ಕೆ ನೀರು ಹಾಯಿಸುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳದೇ ಗಾಢ ನಿದ್ರೆಯಲ್ಲಿದ್ದಾರೆ.

ಮುಳ್ಳು ಕಂಟಿಗಳು:

ಈ ಯೋಜನೆಗಾಗಿ ಮಲಪ್ರಭಾ ನದಿ ದಂಡೆ ಮೇಲೆ ಇಂಜಿನವಾರಿ ಗ್ರಾಮದ ಹತ್ತಿರ ನಿರ್ಮಿಸಿದ ಪಂಪ್‌ಹೌಸ್‌ ಬಂದ್‌ ಆಗಿದೆ. ಅದರ ನಿರ್ವಹಣೆಯಿಲ್ಲದೆ ಬೀಗ ಹಾಕಿ ವರ್ಷಗಳೇ ಕಳೆದಿವೆ. ಅಧಿಕಾರಿಗಳು ಈ ಯೋಜನೆ ಪೂರ್ಣಗೊಳಿಸಿದರೂ ಇಂಜಿನವಾರಿ ಹಾಗೂ ಬೂದಿನಗಡ ವ್ಯಾಪ್ತಿಯ ಸುಮಾರು 1225 ಎಕರೆ ಕೃಷಿ ಭೂಮಿ ಮಾತ್ರ ಇಂದಿಗೂ ನೀರಾವರಿಯಾಗುತ್ತಿಲ್ಲ.

ಯೋಜನೆಯಡಿ ನಿರ್ಮಿಸಿದ ಕಾಲುವೆಯೂ ಅಲ್ಲಲ್ಲಿ ಕುಸಿದು ಬೀಳುವ ಹಂತದಲ್ಲಿದೆ. ಕಾಲುವೆಯಲ್ಲಿ ಮುಳ್ಳುಕಂಠಿಗಳು ಬೆಳೆದು ನಿಂತಿವೆ. ಅಧಿಕಾರಿಗಳು ಕೇವಲ ಯೋಜನೆ ರೂಪಿಸಿ ಕಾಮಗಾರಿ ಹಾಗೂ ಕಾಲುವೆ ಪೂರ್ತಿಗೊಳಿಸಿದರೇ ವಿನಃ ರೈತರ ಭೂಮಿಗೆ ಹರಿಸುವಲ್ಲಿ ಮಾತ್ರ ವೈಫಲ್ಯರಾಗಿದ್ದಾರೆ ಎನ್ನುತ್ತಿದ್ದಾರೆ ನೊಂದ ರೈತರು.

ಭದ್ರಾ ಮೇಲ್ದಂಡೆ ಬಗ್ಗೆ ಡಿಕೆಶಿ ತಪ್ಪು ಗ್ರಹಿಕೆ: ಗೋವಿಂದ ಕಾರಜೋಳ

ಗಾಢ ನಿದ್ರೆಯಲ್ಲಿ ಸಣ್ಣ ನೀರಾವರಿ ಇಲಾಖೆ:

ಸರ್ಕಾರದ ಕೊಟ್ಯಾಂತರ ರೂಪಾಯಿ ಯೋಜನೆಗೆ ಖರ್ಚಾಗಿದೆ. ಆದರೆ ಯೋಜನೆ ಮಾತ್ರ ಜನರಿಗೆ ತಲುಪಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಗುತ್ತಿಗೆದಾರರಿಗೆ ಯೋಜನೆ ಕೆಲಸ ಕೊಟ್ಟಿತೇ ಹೊರತು ರೈತರ ಕೈಗಳಿಗೆ ಕೆಲಸ ಸಿಗಲಿಲ್ಲ. ಭೂಮಿ ನೀರು ಕಾಣಲಿಲ್ಲ. ಕಾಮಾಗಾರಿ ಪೂರ್ಣಗೊಂಡು ನಾಲ್ಕಾರು ವರ್ಷಗಳು ಕಳೆದರೂ ಇದರ ಕಡೆಗೆ ಯಾರ ಗಮನವೂ ಇಲ್ಲ. ಕಾಲುವೆಗೆ ನೀರು ಬಿಡದಿರುವುದರಿಂದ ರೈತರ ಬೆಳೆಗಳು ಬಾಡಿ ಹೋಗುತ್ತಿವೆ. ಈ ಮಧ್ಯೆ ಪ್ರತಿ ವರ್ಷ ಕಾಲುವೆಗಳಿಗೆ ನೀರು ಹರಿಸುವಂತೆ ಈ ಭಾಗದ ರೈತರು ಅಧಿಕಾರಿಗಳನ್ನು ಹಾಗೂ ಶಾಸಕರನ್ನು ಆಗ್ರಹಿಸಿದ್ದಾರೆ. 

ರೈತರ ಅನುಕೂಲಕ್ಕಾಗಿ ಏತ ನೀರಾವರಿ ಯೋಜನೆ ಮಾಡಿದೆ. ಆದರೆ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ಕಳೆದ ವರ್ಷ ಬೇಸಿಗೆಯಲ್ಲಿ ಕಾಲುವೆಗೆ ನೀರು ಬಿಟ್ಟಿದ್ದರು. ಆದರೆ ಈ ವರ್ಷ ಬಿಟ್ಟಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಕಾಲುವೆಗೆ ನೀರು ಬಿಡಿಸುವ ಕಾರ್ಯ ಮಾಡುತ್ತೇನೆ ಎಂದು ಬೂದಿನಗಡ ಜಿಪಂ ಮಾಜಿ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ತಿಳಿಸಿದ್ದಾರೆ.