ಬೆಂಗಳೂರು(ಜ.27): ಸ್ವಾಮಿ ವಿವೇಕಾನಂದರ ಜೀವನ ಕುರಿತು ಕಳೆದ ಹತ್ತು ದಿನಗಳಿಂದ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಭಾನುವಾರ ಲಕ್ಷಾಂತರ ಜನ ವೀಕ್ಷಣೆಯೊಂದಿಗೆ ತೆರೆ ಬಿದ್ದಿತ್ತು.

ಪ್ರದರ್ಶನದ ಅಂತಿಮ ದಿನ ಹಾಗೂ ಸರ್ಕಾರಿ ರಜೆ ದಿನವಾದ ಭಾನುವಾರ(ಜ.26) ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿತ್ತು. ಗಾಜಿನ ಮನೆಯಲ್ಲಿ ನೂರಾರು ಜನ ಏಕಕಾಲಕ್ಕೆ ಪ್ರವೇಶಿಸಿದ ಪರಿಣಾಮ ಕೆಲವು ಸಂದರ್ಭಗಳಲ್ಲಿ ನೂಕು ನುಗ್ಗಲು ಕಾಣಿಸಿಕೊಂಡಿತ್ತು.

ಲಾಲ್ ಬಾಗ್ ನಲ್ಲಿ ಜ.17ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ರಜೆ ದಿನವಾಗಿದ್ದರಿಂದ ನಗರದ ಐಟಿ, ಬಿಟಿ ಉದ್ಯೋಗಿಗಳು ಹಾಗೂ ಹೊರ ರಾಜ್ಯದವರೂ ಸೇರಿದಂತೆ ಉದ್ಯಾನದಲ್ಲಿ ಜನ ಜಂಗುಳಿಯೇ ತುಂಬಿತ್ತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಹರ ಸಾಹಸ ಪಟ್ಟರು.

ಫಲಪುಷ್ಪ ಪ್ರದರ್ಶನದ ಜೊತೆಗೆ ತೋಟಗಾರಿಕೆ ಇಲಾಖೆ ಮತ್ತು ರಾಮಕೃಷ್ಣ ಆಶ್ರಮದ ವತಿಯಿಂದ ಪೂಜಾಕುಣಿತ, ಡೊಳ್ಳು ಕುಣಿತ ಮತ್ತು ವೀರಗಾಸೆ, ಸ್ವಾಮಿ ವಿವೇಕಾನಂದ ಕಲಾಕೇಂದ್ರದ ಸದಸ್ಯರು ವಿವೇಕಾನಂದ ಜೀವನ ಕುರಿತ ನೃತ್ಯ ರೂಪಕ ಪ್ರದರ್ಶಿಸಿದರು.ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಸಾವಿರಾರು ಜನ ಲಾಲ್‌ಬಾಗ್‌ ಕೆಂಪೇಗೌಡ ಗೋಪರದ ಬಳಿಯ ಬಂಡೆಯ ಮೇಲೆ ನಿಂತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಒಂದು ಕೋಟಿ ಸಂಗ್ರಹ:

ಫಲಪುಷ್ಪ ಪ್ರದರ್ಶನದ ಅಂತಿಮ ದಿನವಾದ ಭಾನುವಾರ 65 ಸಾವಿರ ವಯಸ್ಕರು ಮತ್ತು 51 ಸಾವಿರಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಒಟ್ಟು 85 ಸಾವಿರ ಜನ ಭೇಟಿ ನೀಡಿದ್ದು ಒಟ್ಟು 39.23 ಲಕ್ಷ ಸಂಗ್ರಹವಾಗಿದೆ.
ಕಳೆದ ಹತ್ತು ದಿನಗಳಿಂದ ನಡೆದ ಪ್ರದರ್ಶನಕ್ಕೆ ಒಟ್ಟು 1,79,167 ವಯಸ್ಕರು, 51,776 ಮಕ್ಕಳು ಸೇರಿದಂತೆ 2,30,943 ಜನ ಭೇಟಿ ನೀಡಿದ್ದು, ಒಟ್ಟು 1 ಕೋಟಿ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.