ಬೆಂಗಳೂರು [ಜ.15]:  ಭಾರತದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನೋತ್ಸವ ಹಾಗೂ ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳದ 127 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಜ.17ರಿಂದ ಹತ್ತು ದಿನಗಳ ಕಾಲ ಸ್ವಾಮಿ ವಿವೇಕಾನಂದರ ಜೀವನ ಕುರಿತ ಫಲ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ.

ಲಾಲ್‌ಬಾಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್‌, ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸ್ವಾಮಿ ವಿವೇಕಾನಂದರಿಗೆ ಅರ್ಪಿಸಲಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕದ ಮಾದರಿಯಲ್ಲಿ ಗಾಜಿನ ಮನೆಯ ಮಧ್ಯಭಾಗದಲ್ಲಿ 80/40 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣಕ್ಕೆ ವಿವಿಧ ಬಗೆಯ ಸುಮಾರು 1.6 ಲಕ್ಷ ಹೂವುಗಳನ್ನು ಬಳಸುತ್ತಿದೆ. ಕನ್ಯಾಕುಮಾರಿಯ ವಿವೇಕಾನಂದ ಶಿಲೆಯ ಮಾದರಿಗೆ ಲಿಲಿಯಮ್ಸ್‌, ಹೆಲಿಕೋನಿಯಾ ಸಾಂಗ್‌ ಆಫ್‌ ಇಂಡಿಯಾ, ಸಾಂಗ್‌ ಆಫ್‌ ಜಮೈಕಾದ ಹೂವುಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೊಲ್ಕತ್ತಾದ ಬೇಲೂರು ಮಠದ ಸ್ವಾಮಿ ವಿವೇಕಾನಂದ ದೇವಾಲಯದ ಮಾದರಿಯನ್ನು ಪ್ರದರ್ಶನದ ಮುಖ್ಯ ಸ್ಮಾರಕದ ಮುಂಭಾಗದಲ್ಲಿ ನಿರ್ಮಿಸಲಾಗುವುದು. ಗಣ್ಯವ್ಯಕ್ತಿಗಳು ಪುಷ್ಪನಮನ ಸಲ್ಲಿಸುವ ಸಲುವಾಗಿ ಎರಡೂವರೆ ಅಡಿ ಎತ್ತರದ ಸ್ವಾಮಿ ವಿವೇಕಾನಂದ ಪುತ್ಥಳಿ ನಿರ್ಮಿಸಲಾಗುತ್ತಿದೆ ಎಂದರು.

ಇನ್ನುಮುಂದೆ ಲಾಲ್ ಬಾಗ್ ನಲ್ಲಿ ಸ್ಮಾರ್ಟ್ ಪಾರ್ಕಿಂಗ್...

ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಷಣ ಮಾಡುತ್ತಿರುವ ವೇದಿಕೆ ನಿರ್ಮಾಣಕ್ಕೆ 1.5 ಲಕ್ಷ ಹೂವುಗಳ ಬಳಕೆ ಮಾಡಲಾಗುತ್ತಿದೆ. ಅಲ್ಲದೆ, ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದ ಸಂದರ್ಭಗಳಲ್ಲಿ ಮೆಜೆಸ್ಟಿಕ್‌ ಬಳಿಯ ಕಾಳಪ್ಪ ಛತ್ರದ ಕಲ್ಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಮಾದರಿಯನ್ನು 13/13 ಅಡಿಯಲ್ಲಿ ನಿರ್ಮಿಸಲಾಗುವುದು. ಗಾಜಿನ ಮನೆಯ ಎಲ್ಲ ಹತ್ತು ಮೂಲೆಗಳಲ್ಲಿ ಹೂವುಗಳ ಪಿರಮಿಡ್‌ ನಡುವೆ ವಿವೇಕಾನಂದರ ಉಬ್ಬುಶಿಲ್ಪ ನಿರ್ಮಿಸಲಾಗುತ್ತಿದೆ. ಜೊತೆಗೆ ಮೂರು ಅಡಿ ಎತ್ತರದ ರಾಮಕೃಷ್ಣ ಪರಮಹಂಸರು, ಶಾರದಾದೇವಿ ಮತ್ತು ವಿವೇಕಾನಂದರ ಆಸೀನ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ದಿನ ಸಂಜೆ 5ರಿಂದ ಸ್ವಾಮಿ ವಿವೇಕಾನಂದ ಕುರಿತ ಗೀತಗಾಯನ ಭಜನೆ, ಯೋಗ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.

#GSTEffect: ಲಾಲ್‌ ಬಾಗ್‌ ಶುಲ್ಕ ಹೆಚ್ಚಳ..

ಗಾಜಿನ ಮನೆ ಹೊರ ಭಾಗದಲ್ಲಿ 13 ಅಡಿ ಎತ್ತರದ ವಿವೇಕ ವೃಕ್ಷ, ಪಂಚವಟಿಯಲ್ಲಿ ರಾಮಕೃಷ್ಣ ಪರಮಹಂಸರು ವಿವೇಕಾನಂದ ಮೊದಲಾದ ಶಿಷ್ಯರೊಂದಿಗೆ ಉಪದೇಶ ಮಾಡುತ್ತಿರುವ ಸನ್ನಿವೇಶ, ಸ್ವಾಮಿ ವಿವೇಕಾನಂದರ ಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಚಿತ್ರ ಬಿಡಿಸುವ ಸ್ಪರ್ಧೆ:

ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಕುರಿತ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಜ.16ರಂದು ಬೆಳಗ್ಗೆ 10ಕ್ಕೆ ಡಾ.ಎಂ.ಎಚ್‌.ಮರೀಗೌಡ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.

ತರಕಾರಿ ಕೆತ್ತನೆ:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಜ.18ರಿಂದ ಎರಡು ದಿನ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್‌, ಡಚ್‌ ಹೂವಿನ ಜೋಡಣೆ, ಥಾಯ್‌ ಆರ್ಟ್‌, ಜಾನೂರು ಒಣಹೂವಿನ ಜೋಡಣೆ ಕಲೆಗಳ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪಟ್‌ ಕಟೋಚ್‌, ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಬಿ.ಆರ್‌.ವಾಸುದೇವ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, ಉಪನಿರ್ದೇಶಕ ಎಂ.ಆರ್‌.ಜಗದೀಶ್‌ ಹಾಜರಿದ್ದರು.

70 ರು.: ವಯಸ್ಕರಿಗೆ ಪ್ರವೇಶ ಶುಲ್ಕ

20 ರು. : 12 ವರ್ಷದೊಳಗಿನ ಮಕ್ಕಳಿಗೆ ಶುಲ್ಕ