ಲಂಚ್ ಬ್ರೇಕ್ ತೆಗೆದುಕೊಳ್ಳದೆ ಕೆಲಸ ಮಾಡಿ, ಕಚೇರಿಯಿಂದ ಒಂದು ಗಂಟೆ ಮುಂಚಿತವಾಗಿ ಮನೆಗೆ ಹೋಗುತ್ತಿದ್ದ ಉದ್ಯೋಗಿಯನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಕಚೇರಿಯ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀಡಿ ಟರ್ಮಿನೇಷನ್ ಲೆಟರ್ ನೀಡಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು: ಒಂದು ಜಾಗಕ್ಕೆ ಕೆಲಸಕ್ಕೆ ಸೇರಿದಾಗ ಅಲ್ಲಿನ ನೀತಿ ನಿಯಮಗಳಿಗೆ ಕಟಿಬದ್ಧವಾಗಿರಬೇಕು. ಇದು ಪ್ರತಿ ಉದ್ಯೋಗಿಯಿಂದಲೂ ಕಂಪನಿ ಮಾಡುವ ನಿರೀಕ್ಷೆ. ರೂಲ್ಸ್ ಬ್ರೇಕ್ ಮಾಡಿ ದಾರಿ ತಪ್ಪಿದಾಗ ಕಂಪನಿಯ ನಿಯಮಗಳ ಪ್ರಕಾರದ ಅದು ತಪ್ಪಾಗುತ್ತದೆ. ಕೆಲವೊಮ್ಮೆ ಮಾನವೀಯ ದೃಷ್ಟಿಯಿಂದ ಸರಿ ಇದ್ದರೂ ನಿಮಯಗಳ ಪ್ರಕಾರ ತಪ್ಪು ತಪ್ಪೇ.
ಅಂತಹುದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಸರಿ ತಪ್ಪುಗಳ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಆಗಿದ್ದೇನು ಅಂತಾ ನೋಡೋದಾದರೆ.. ಪ್ರತೀಕ್ ಶೆಟ್ಟಿ ಅನ್ನೋರು ತಮ್ಮ ಲಿಂಕ್ಡ್ ಇನ್ನಲ್ಲಿ, ಉದ್ಯೋಗಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಲು ನೀಡಿರುವ ಮೇಲ್ ಸಂದೇಶವನ್ನು ಹಂಚಿಕೊಂಡಿದ್ದಾರೆ. ಮೇಲ್ನಲ್ಲಿ ಕೆಲಸದಿಂದ ತೆಗೆದು ಹಾಕಲು ಕಾರಣ ನೀಡಲಾಗಿದೆ.
ಓರ್ವ ಉದ್ಯೋಗಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಂಪನಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ಆ ವ್ಯಕ್ತಿಗೆ ವೈಯಕ್ತಿಕ ಕಾರಣಗಳಿಂದ ಪ್ರತಿದಿನ ತನ್ನ ಮಧ್ಯಾಹ್ನದ ಲಂಚ್ ಬ್ರೇಕ್ ಟೈಮ್ ತೆಗೆದುಕೊಳ್ಳುತ್ತಿರಲಿಲ್ಲ. ಊಟದ ಸಮಯದಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದ. ಊಟಕ್ಕೆ ಹೋಗದೇ ಕೆಲಸವನ್ನು ಬೇಗ ಮುಗಿಸಲು ಯತ್ನಿಸುತ್ತಿದ್ದ. ತಾನು ಊಟಕ್ಕೆ ಬ್ರೇಕ್ ತೆಗೆದುಕೊಳ್ಳುವುದಿಲ್ಲ. ಅದರ ಬದಲಾಗಿ ಒಂದು ಗಂಟೆ ಬೇಗ ಹೋಗ್ತೀನಿ ಎಂದು ಹೊರಟು ಹೋಗುತ್ತಿದ್ದ. ಅಂದರೆ ಸಂಜೆ 6 ಗಂಟೆಗೆ ಹೋಗಬೇಕಿತ್ತು. ಆದರೆ ಈತ ಐದು ಗಂಟೆಗೆ ಆಫೀಸ್ ಬಿಡುತ್ತಿದ್ದ. ಇದು ಕಂಪನಿಯ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದ್ದು, ಕೊನೆಗೂ ಆತನನ್ನು ಕೆಲಸದಿಂದ ವಜಾ ಮಾಡಿದೆ.
ವಜಾ ಮಾಡಲು ಕಂಪನಿ ಕೊಟ್ಟ ಕಾರಣ ಏನು?
Immediate Termination – Violation of Office Policy ಎಂಬ ಶೀರ್ಷಿಕೆ ಅಡಿಯಲ್ಲಿ ಕೆಲಸದಿಂದ ವಜಾ ಮಾಡಿದೆ. ಊಟದ ಸಮಯದಲ್ಲಿ ಕೆಲಸ ಮುಗಿಸಿದೆ ಎಂಬ ಮಾತ್ರಕ್ಕೆ ಕಚೇರಿಯಿಂದ ಮನೆಗೆ ಬೇಗ ಹೋಗೋದನ್ನು ಕಂಪನಿ ಒಪ್ಪುವುದಿಲ್ಲ. ಇಂಥ ಅಧಿಕಾರಿವನ್ನು ಕಂಪನಿ ಯಾವತ್ತೂ ನೀಡುವುದಿಲ್ಲ. ಈ ಕಂಪನಿ ನಿಮ್ಮದಲ್ಲ. ಇಲ್ಲಿನ ನಿಯಮಗಳನ್ನು ನಾವು ಮಾಡುತ್ತೇವೆ. ನೀವು ಅವುಗಳನ್ನು ಪಾಲಿಸಬೇಕು. ನೀವು ಕಚೇರಿಯಿಂದ ಬೇಗ ಹೋದರೆ ಕಂಪನಿಯ ಶಿಸ್ತಿಗೆ ದಕ್ಕೆ ಬೀಳುತ್ತದೆ. ಎಲ್ಲಾ ಉದ್ಯೋಗಿಗಳೂ ಅದನ್ನೇ ಮಾಡುತ್ತಾರೆ. ಇದಕ್ಕೆ ನಿಮ್ಮನ್ನು ವಜಾ ಮಾಡುತ್ತೇವೆ ಎಂದು ಉತ್ತರ ಸಮರ್ಥಿಸಿಕೊಂಡಿದೆ.
ಇಂಟರ್ನೆಟ್ ಏನಂತು?
ಅವರ ಪೋಸ್ಟ್ಗೆ ಇಂಟರ್ನೆಟ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಪನಿ ಮಾಡಿದ್ದು ಸರಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಪಾಪ ಆ ಉದ್ಯೋಗಿಗೆ ಏನು ಸಮಸ್ಯೆ ಇತ್ತೋ ಗೊತ್ತಿಲ್ಲ. ಮಾನವೀಯ ದೃಷ್ಟಿಯಿಂದ ಆತನಿಗೆ ಅಗತ್ಯ ಇದ್ದರೆ ಹಾಗೆ ಮಾಡಿರೋದು ತಪ್ಪು ಎನ್ನುತ್ತಿದ್ದಾರೆ. ಇದು ಎಲ್ಲಿ ನಡೆದಿದೆ ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಆದರೆ ಭಾರತದ ಕಾರಪೋರೆಟ್ ವಲಯದಲ್ಲಿ ಭಾರೀ ಚರ್ಚೆ ಆಗ್ತಿದೆ.












