ಮಡಿಕೇರಿ(ಫೆ.19): ರಾಜ್ಯದಲ್ಲಿ ಅತಿ ಹೆಚ್ಚು ಸಾಕಾನೆಗಳನ್ನು ಹೊಂದಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಂಗಾತಿಯನ್ನು ಹುಡುಕಿಕೊಂಡು ಆಗಾಗ್ಗೆ ಗಂಡಾನೆಗಳು ಕಾಡಿಗೆ ಹೋಗುತ್ತಿವೆ. ಇದರಿಂದಾಗಿ ಶಿಬಿರಕ್ಕೆ ಎರಡು ಹೆಣ್ಣಾನೆಯನ್ನು ಬೇರೆ ಕಡೆಯಿಂದ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ದುಬಾರೆ ಸಾಕನೆ ಶಿಬಿರದಲ್ಲಿ ಪ್ರಸ್ತುತ 30 ಸಾಕಾನೆಗಳಿದ್ದು, ಈ ಪೈಕಿ 28 ಗಂಡಾನೆಗಳಿಗೆ ಕೇವಲ 2 ಹೆಣ್ಣಾನೆಗಳಿವೆ. 41 ವರ್ಷ ಪ್ರಾಯದ ಕಾವೇರಿ, 5 ವರ್ಷದ ವಿದ್ಯಶ್ರೀ. ಮದವೇರಿದ ಸಂದರ್ಭ ಸಂಗಾತಿ ಅರಸಿಕೊಂಡ ಗಂಡಾನೆಗಳು ಕಾಡಿಗೆ ತೆರಳುತ್ತಿರುವ ಪ್ರಕರಣಗಳು ಸಾಕಷ್ಟುಬಾರಿ ನಡೆದಿದೆ. ಆದ್ದರಿಂದ ಹೆಣ್ಣಾನೆಗಳ ಕೊರತೆ ನೀಗಿಸಲು ರಾಜ್ಯದ ಇತರೆ ಸಾಕಾನೆ ಶಿಬಿರದಿಂದ ಅಥವಾ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿರುವ ಹೆಣ್ಣಾನೆಯನ್ನು ದುಬಾರೆಗೆ ಕರೆ ತರಲು ಪ್ರಯತ್ನ ನಡೆಯುತ್ತಿದೆ.

ಏಯ್ ಹೋಗತ್ಲಾಗೆ...: ಫೋಟೋ ಕ್ಲಿಕ್ ಮಾಡಿದವಳನ್ನು ತಳ್ಳಿ ಹಾಕಿದ ಆನೆ!

ದುಬಾರೆಗೆ ಎರಡು ಹೆಣ್ಣಾನೆಯನ್ನು ಬೇರೆ ಕಡೆಯಿಂದ ಸ್ಥಳಾಂತರ ಮಾಡುವ ಬಗ್ಗೆ ಜಿಲ್ಲೆಯ ಅರಣ್ಯಾಧಿ​ಕಾರಿಗಳು ಪ್ರಧಾನ ಅರಣ್ಯ ಸಂರಕ್ಷಣಾಧಿ​ಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಗಂಡಾನೆಗೆ ಸಂಗಾತಿ ಹಾಗೂ ದಸರಾ ಉತ್ಸವಕ್ಕೆ ಹೆಣ್ಣಾನೆಗಳು ಬೇಕೆಂಬ ನಿಟ್ಟಿನಲ್ಲಿ ಚರ್ಚೆ ಮಾಡಿದ್ದು, ಇದಕ್ಕೆ ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ವಿವಿಧ ಭಾಗದಲ್ಲಿ ನಾಡಿಗೆ ಬಂದು ಪುಂಡಾಟ ನಡೆಸುತ್ತಿರುವ ಹೆಣ್ಣಾನೆಗಳು ಇದ್ದರೆ ಅದನ್ನು ಸೆರೆ ಹಿಡಿದು ದುಬಾರೆ ಶಿಬಿರಕ್ಕೆ ಕರೆತರಲೂ ಚಿಂತನೆ ಮಾಡಲಾಗಿದೆ. ಇದಲ್ಲದೆ ರಾಜ್ಯದ ಸಾಕಾನೆ ಶಿಬಿರಗಳಲ್ಲಿರುವ ಹೆಣ್ಣಾನೆಗಳನ್ನು ದುಬಾರೆಗೆ ಸ್ಥಳಾಂತರ ಮಾಡುವ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅ​ಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ.

ಸಮಾನ ಪ್ರಮಾಣ:

ಕೆಲವು ವರ್ಷಗಳ ಹಿಂದೆ ದುಬಾರೆಯಲ್ಲಿ ಸಮಾನ ಪ್ರಮಾಣದಲ್ಲಿ ಗಂಡು ಹಾಗೂ ಹೆಣ್ಣಾನೆಗಳಿದ್ದವು. ಆ ಸಂದರ್ಭ ಸಂಗಾತಿಯನ್ನು ಹುಡುಕಿಕೊಂಡು ಗಂಡಾನೆಗಳು ಕಾಡಿಗೆ ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಬಿರದಲ್ಲಿ ಹೆಣ್ಣಾನೆಗಳ ಕೊರತೆ ಇರುವುದರಿಂದ ಮದ ಬಂದ ಸಂದರ್ಭ ಸಂಗಾತಿಯನ್ನು ಹುಡುಕಿಕೊಂಡು ಗಂಡಾನೆಗಳು ಕಾಡಿಗೆ ತೆರಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಛತ್ತೀಸ್‌ಗಡಕ್ಕೆ ಎರಡು ಹೆಣ್ಣಾನೆ:

2018ರ ಫೆಬ್ರವರಿ ತಿಂಗಳಲ್ಲಿ ಛತ್ತೀಸ್‌ಗಡÜಕ್ಕೆ ದುಬಾರೆ ಸಾಕಾನೆ ಶಿಬಿರದ ನಾಲ್ಕು ಸಾಕಾನೆಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹೆಣ್ಣಾನೆಗಳಾದ ಕಪಿಲ, ಶಿವಗಂಗೆ ಹಾಗೂ ಎರಡು ಗಂಡಾನೆಗಳನ್ನು ಕಳುಹಿಸಲಾಗಿತ್ತು.

ಪ್ರವಾಸಿಗರಿಗೆ ನಿಷೇಧ: ಗಂಡಾನೆಗಳು ಮದ ಬಂದ ಸಂದರ್ಭ ಸರಪಳಿ ಕಿತ್ತುಕೊಂಡು ಮಾವುತರ ಕಣ್ಣುತಪ್ಪಿಸಿ ಕಾಡಿಗೆ ತೆರಳುತ್ತವೆ. ಈ ಸಂದರ್ಭದಲ್ಲಿ ದುಬಾರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಹೈಅಲರ್ಟ್‌ ಘೋಷಣೆ ಮಾಡಲಾಗುತ್ತದೆ. ಕಾಡಿಗೆ ಹೋದ ಆನೆ ಹಿಂತಿರುವವರೆಗೂ ಪ್ರವಾಸಿಗರಿಗೆ ಶಿಬಿರದಲ್ಲಿ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿರುವ ಘಟನೆಗಳು ಹಲವು ಬಾರಿ ನಡೆದಿದೆ.

Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ದುಬಾರೆ ಸಾಕಾನೆ ಶಿಬಿರಕ್ಕೆ ಎರಡು ಹೆಣ್ಣಾನೆಯನ್ನು ಬೇರೆ ಕಡೆಯಿಂದ ಸ್ಥಳಾಂತರ ಮಾಡುವ ಬಗ್ಗೆ ಪ್ರಧಾನ ಅರಣ್ಯ ಸಂರಕ್ಷಣಾಧಿ​ಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇಲ್ಲಿನ ಗಂಡಾನೆಗಳಿಗೆ ಸಂಗಾತಿ ಹಾಗೂ ದಸರಾ ಉತ್ಸವಕ್ಕೆ ಹೆಣ್ಣಾನೆಗಳು ಬೇಕೆಂಬ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ಇದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಕೊಡಗು- ಮೈಸೂರು ಸಿಸಿಎಫ್‌ ಹೀರಾಲಾಲ್‌ ತಿಳಿಸಿದ್ದಾರೆ.

ದುಬಾರೆಯಲ್ಲಿ ಎರಡು ಹೆಣ್ಣಾನೆಗಳು ಮಾತ್ರ ಇವೆ. ಹಲವು ವರ್ಷದ ಹಿಂದೆ ಅರ್ಧಕರ್ಧದಷ್ಟುಹೆಣ್ಣು-ಗಂಡಾನೆಗಳಿತ್ತು. ಆದ್ದರಿಂದ ಕಾಡಿಗೆ ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಾನೆ ಕಡಿಮೆ ಇರುವುದರಿಂದ ಗಂಡಾನೆಗಳು ಸರಪಳಿ ಕಿತ್ತುಕೊಂಡು ಕಾಡಿಗೆ ಹೋಗಿ ಮದ ಇಳಿದ ನಂತರ ಕ್ಯಾಂಪ್‌ಗೆ ಹಿಂತಿರುಗುತ್ತವೆ ಎಂದು ದುಬಾರೆ ಶಿಬಿರ ಮಾವುತ ಡೋಬಿ ತಿಳಿಸಿದ್ದಾರೆ.

ಸರಪಳಿಯನ್ನೇ ಕಿತ್ತುಕೊಂಡು ಹೋಗುತ್ತವೆ!

ಮದವೇರಿದಾಗ ದುಬಾರೆ ಸಾಕಾನೆ ಶಿಬಿರದ ಕೆಲವು ಗಂಡಾನೆಗಳು ಸಪರಳಿ ಕಿತ್ತುಕೊಂಡು ಕಾಡಿಗೆ ಹೋಗಿರುವ ಘಟನೆಗಳು ಹಲವಾರು ಬಾರಿ ನಡೆದಿದೆ. ಕಾಡಿನಲ್ಲಿ ಸಂಗಾತಿಯನ್ನು ಹುಡುಕಿಗೊಂಡು ಹೋಗಿ ಕೆಲವು ದಿನ ಕಾಡಿನಲ್ಲೇ ಉಳಿದುಕೊಳ್ಳುತ್ತದೆ. ಮದ ಕಡಿಮೆಯಾದ ನಂತರ ಮತ್ತೆ ಶಿಬಿರಕ್ಕೆ ವಾಪಸ್‌ ಬರುತ್ತವೆ. ಗೋಪಿ, ಪ್ರಶಾಂತ ಸೇರಿದಂತೆ ಮತ್ತಿತರ ಗಂಡಾನೆಗಳು ಕಾಡಿಗೆ ಹೋಗಿ ಮತ್ತೆ ಹಿಂತಿರುಗಿವೆ.

ಹೆಣ್ಣಾನೆ ಹುಡುಕಿ ಕ್ಯಾಂಪ್‌ಗೆ ಮದಗಜ ಬಂದಿತ್ತು!

ಗಂಡಾನೆಗಳು ಸಂಗಾತಿ ಹುಡುಕಿ ಕಾಡಿಗೆ ಹೋಗಿದ್ದ ಪ್ರಕರಣ ಮಾತ್ರ ದುಬಾರೆಯಲ್ಲಿ ನಡೆದಿಲ್ಲ. ಬದಲಾಗಿ ಕಾಡಿನಲ್ಲಿರುವ ಗಂಡಾನೆಗಳೂ ಹೆಣ್ಣಾನೆಗಳನ್ನು ಹುಡುಕಿಕೊಂಡು ಶಿಬಿರಕ್ಕೆ ಬಂದಿದೆ. 2017ರ ಜನವರಿ ತಿಂಗಳಲ್ಲಿ ಮದಗಜವೊಂದು ಸಾಕಾನೆಯ ಸ್ನೇಹಗಳಿಸಿ ದುಬಾರೆ ಆನೆ ಕ್ಯಾಂಪ್‌ಗೆ ಆಗಮಿಸಿತ್ತು. ಆಹಾರಕ್ಕಾಗಿ ಸಾಕಾನೆಗಳನ್ನು ಕಾಡಿಗೆ ಪ್ರತಿನಿತ್ಯ ಬಿಡಲಾಗುತ್ತಿದ್ದು, ಸಂಜೆ ಕ್ಯಾಂಪ್‌ಗೆ ಹಿಂತಿರುಗುತ್ತವೆ. ಹೀಗೆ ಹಿಂತಿರುಗಿದಾಗ ಗಂಡಾನೆಯೊಂದು ಕ್ಯಾಂಪ್‌ಗೆ ಆಗಮಿಸಿತ್ತು. ಉಳಿದ ಸಾಕಾನೆಗಳು ಆಕ್ಷೇಪಿಸಿದ್ದರೂ ಮಣಿಯದ ಮದಗಜ ತಿರುಗಿ ದಾಳಿ ಮಾಡಿತ್ತು. ಪರಿಣಾಮ ತೀರ್ಥರಾಮ, ಅಜೇಯ, ಗೋಪಿ ಆನೆಗಳಿಗೆ ಗಾಯಗಳಾಗಿತ್ತು.

-ವಿಘ್ನೇಶ್‌ ಎಂ. ಭೂತನಕಾಡು