ಬೆಂಗಳೂರು(ಮಾ.10): ಕನಕಪುರ ರಸ್ತೆ ಉದೀಪಾಳ್ಯದಲ್ಲಿನ ಆರ್ಟ್‌ ಆಫ್‌ ಲಿವಿಂಗ್‌ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಸಾಕು ಆನೆಯೊಂದು ಮಾವುತನನ್ನು ತುಳಿದು ಸಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.

ಕೇರಳದ ಪಾಲಕ್ಕಾಡು ಜಿಲ್ಲೆಯ ಆರ್‌. ರಾಜೇಶ್‌(34) ಮೃತ ಮಾವುತ. ಕಳೆದ 12 ವರ್ಷಗಳಿಂದ ವಹೇಶ್ವರ ಎಂಬ ಗಂಡು ಆನೆಯನ್ನು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯವರು ಸಾಕುತ್ತಿದ್ದರು. ಮೂರು ವರ್ಷಗಳಿಂದ ಮಾವುತ ರಾಜೇಶ್‌, ಆನೆಯ ಆರೈಕೆ ಮಾಡಿಕೊಂಡು ಆಶ್ರಮದಲ್ಲೇ ನೆಲೆಸಿದ್ದ. ಮಾರ್ಚ್‌ 9ರ ಬೆಳಗ್ಗೆ 11.30ರಲ್ಲಿ ಆನೆ ಕಟ್ಟಿರುವ ಸ್ಥಳವನ್ನು ರಾಜೇಶ್‌ ಸ್ವಚ್ಛ ಮಾಡುತ್ತಿದ್ದ. ಈ ವೇಳೆ ಸಾಕು ಆನೆ ಇದ್ದಕ್ಕಿದಂತೆ ತನ್ನ ಕಾಲುಗಳಿಂದ ರಾಜೇಶ್‌ನನ್ನು ತುಳಿದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಕ್ಷಣ ಎಚ್ಚೆತ್ತ ಅಶ್ರಮದ ಇತರ ಉದ್ಯೋಗಿಗಳು ರಕ್ಷಣೆ ಮಾಡಲು ಯತ್ನಿಸಿದರು ಸಾಧ್ಯವಾಗಿಲ್ಲ. ಕೊನೆಗೆ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ಆನೆಯನ್ನು ತಹಬದಿಗೆ ತಂದು, ಬಳಿಕ ಮಾವುತನ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಆಶ್ರಮದ ಅಧಿಕಾರಿ ನಿಖಿಲೇಶ್‌ ಶೆಣೈ ಎಂಬುವರು ದೂರು ನೀಡಿದ್ದಾರೆ. ಈ ಮೇರೆಗೆ ಕಗ್ಗಲಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.