17 ರಿಂದ ದಸರಾ ಕವಿಗೋಷ್ಠಿ- 260ಕ್ಕೂ ಹೆಚ್ಚು ಕವಿಗಳ ಭಾಗಿ

ಅ. 17 ರಿಂದ ದಸರಾ ಕವಿಗೋಷ್ಠಿ ಪ್ರಾರಂಭವಾಗಲಿದೆ ಎಂದು ಪಾಲಿಕೆ ಉಪ ಆಯುಕ್ತ ಹಾಗೂ ದಸರಾ ಕವಿಗೋಷ್ಠಿ ಉಪ ಸಮಿತಿಯ ವಿಶೇಷಾಧಿಕಾರಿ ಡಾ. ಎಂ ದಾಸೇಗೌಡ ತಿಳಿಸಿದರು.

Dussehra Poetry from 17th- More than 260 poets involved snr

  ಮೈಸೂರು :  ಅ. 17 ರಿಂದ ದಸರಾ ಕವಿಗೋಷ್ಠಿ ಪ್ರಾರಂಭವಾಗಲಿದೆ ಎಂದು ಪಾಲಿಕೆ ಉಪ ಆಯುಕ್ತ ಹಾಗೂ ದಸರಾ ಕವಿಗೋಷ್ಠಿ ಉಪ ಸಮಿತಿಯ ವಿಶೇಷಾಧಿಕಾರಿ ಡಾ. ಎಂ ದಾಸೇಗೌಡ ತಿಳಿಸಿದರು.

ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 17 ರಿಂದ 21 ರವರೆಗೆ ವಿವಿಧ ವಿಭಾಗಗಳಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದರು.

ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಒಟ್ಟು 260 ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದು ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಪ ಸಮಿತಿಯಿಂದ ಕಲ್ಪಿಸಲಾಗಿದೆ. ದಸರಾ ಕವಿಗೋಷ್ಠಿಗೆ ಒಟ್ಟು 35 ಲಕ್ಷ ಅನುದಾನದಲ್ಲಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು

ಅ. 17 ರಂದು ಬೆಳಗ್ಗೆ11.30ಕ್ಕೆ ಕಲಾಮಂದಿರದಲ್ಲಿ ದಸರಾ ಕಾವ್ಯ ಸಂಭ್ರಮವನ್ನು ಹಮ್ಮಿಕೊಂಡಿದ್ದು, ಕವಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಾಹಿತಿ ಕುಂ. ವೀರಭದ್ರಪ್ಪ ಪಾಲ್ಗೊಳ್ಳಲಿದ್ದಾರೆ. ಹಾಸ್ಯ-ಚುಟುಕು- ಜಾನಪದ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗುರುರಾಜು ಮೈಸೂರು ತಂಡ ಮತ್ತು ದೇವಾನಂದ ವರಪ್ರಸಾದ ತಂಡದವರು ಕಾರ್ಯಕ್ರಮವನ್ನು ನಡೆಸಿಕೊಡುವರು.

ಅ. 18 ರಂದು ಬೆಳಗ್ಗೆ 11ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿಯನ್ನು ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸುವರು. ಕವಯತ್ರಿ ಎನ್.ಕೆ ಲೋಲಾಕ್ಷಿ ಅಧ್ಯಕ್ಷತೆ ವಹಿಸಲಿದ್ದು ಮಕ್ಕಳ ಸಾಹಿತಿ ಫಾ.ಗು ಸಿದ್ದಾಪುರ ಅತಿಥಿಯಾಗಿರುವರು. ಅದೇ ದಿನ ಮಧ್ಯಾಹ್ನ 2:30 ಕ್ಕೆ ಮಹಿಳಾ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು ಕವಯತ್ರಿ ಸವಿತಾ ನಾಗಭೂಷಣ್ ಅಧ್ಯಕ್ಷತೆ ವಹಿಸಲಿದ್ದು, ಕಲಾವಿದರಾದ ಚಿತ್ಕಳಾ ಬಿರಾದರ್ ಅತಿಥಿಯಾಗಿದ್ದು, ಕವಿ ಸತೀಶ್ ಕುಲಕರ್ಣಿ ಅವರು ಆಶಯ ಭಾಷಣ ಮಾಡುವರು.

ಅ. 19 ರಂದು ಬೆಳಗ್ಗೆ 11ಕ್ಕೆ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಪ್ರಾದೇಶಿಕ ಕವಿಗೋಷ್ಠಿಯನ್ನು ಕವಿ ಎಸ್.ಜಿ ಸಿದ್ದರಾಮಯ್ಯ ಉದ್ಘಾಟಿಸುವರು. ಕವಯತ್ರಿ ಚ ಸರ್ವಮಂಗಳಾ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಎಚ್.ಡಿ ಪೋತೆ ಭಾಗವಹಿಸುವರು. ಅದೇ ದಿನ ಮಧ್ಯಾಹ್ನ 2:30ಕ್ಕೆ ಯುವ ಕವಿಗೋಷ್ಠಿ ನಡೆಯಲಿದ್ದು, ಕವಯತ್ರಿ ಡಾ. ವಿನಯ ಒಕ್ಕುಂದ ಅಧ್ಯಕ್ಷತೆ ವಹಿಸುವರು., ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಎಸ್. ಶ್ರೀ ವತ್ಸ ಭಾಗವಹಿಸುವರು. ಕವಿ ಡಾ,ಎಚ್.ಎಸ್. ಸತ್ಯನಾರಾಯಣ ಅವರು ಆಶಯ ಭಾಷಣ ಮಾಡುವರು.

ಅ. 20 ರಂದು ಸಂಜೆ 7ಕ್ಕೆ ಬೆಂಗಳೂರು ರಸ್ತೆಯ ಕ್ಲಾಸಿಕ್ ಕನ್ವೆನ್ಷನ್ ಹಾಲ್್ ನಲ್ಲಿ ಉರ್ದು ಕವಿಗೋಷ್ಠಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಉದ್ಘಾಟಿಸುವರು. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಜಿ.ಟಿ. ದೇವೇಗೌಡ ಪಾಲ್ಗೊಳ್ಳುವರು.

ಅ. 21 ರಂದು ಬೆಳಗ್ಗೆ 11ಕ್ಕೆ ಕಲಾಮಂದಿರದಲ್ಲಿ ಪ್ರಧಾನ ಕವಿಗೋಷ್ಠಿಯನ್ನು ಕವಯತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸುವರು. ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು.

ಮಾನಸಗಂಗೋತ್ರಿಯ ಕನ್ನಡ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇಶಕಿ ಮತ್ತು ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯದರ್ಶಿ, ಪ್ರೊ, ವಿಜಯಕುಮಾರ್ ಎಸ್, ಕರಿಕಲ್, ಕಾರ್ಯದರ್ಶಿ ಗಿರಿಧರ್ ಮೊದಲಾದವರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios