ದೇವರಾಜು ಕಪ್ಪಸೋಗೆ

ಚಾಮರಾಜನಗರ [ಆ.12]:   ಕಣ್ಣು ಹಾಯಿಸಿದಷ್ಟುದೂರ ಪ್ರವಾಹದಂತೆ ಮುನ್ನುಗ್ಗುತ್ತಿರುವ ನೀರು. ನೀರಿನಲ್ಲಿ ಮುಳುಗಿ ಹೋಗಿರುವ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ವಿವಿಧ ಬೆಳೆ. ಪ್ರವಾಹದ ರೀತಿ ಹರಿದು ಬರುತ್ತಿರುವ ನೀರು ನೋಡಿ ಆತಂಕಗೊಂಡಿರುವ ಜನರು.

ಇಂತಹ ಆತಂಕಕಾರಿಯಾದ ದೃಶ್ಯ ಕಂಡು ಬಂದಿರುವುದು ಬರದನಾಡು ಎಂದೇ ಅಪಖ್ಯಾತಿ ಹೊಂದಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳಲ್ಲಿ.

ನಿಮಗೆ ಅಶ್ಚರ್ಯ ಎನಿಸಿದರೂ ಇದು ನಿಜ. ಕೊಡಗು ಮತ್ತು ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಬಿನಿ ಮತ್ತು ಕಾವೇರಿ ನದಿ ಮೈದುಂಬಿ ಹರಿಯುತ್ತಿವೆ. ಕಬಿನಿ ಮತ್ತು ಕೆಆರ್‌ಎಸ್‌ ಜಲಾಶಯಗಳಿಂದ ಸುಮಾರು 2. 65 ಲಕ್ಷ ಕ್ಯುಸೆಕ್‌ ನೀರು ಹರಿದು ಬಿಟ್ಟಿರುವುದರಿಂದ ಕಾವೇರಿ ಕೊಳ್ಳದ ಗ್ರಾಮಗಳಲ್ಲಿ ಆತಂಕ ಎದುರಾಗಿದೆ. ಅದರಲ್ಲೂ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರದ ಜನರಲ್ಲಿ ಆತಂಕ ತರಿಸಿದೆ. ಎರಡು ಜಲಾಶಯಗಳಿಂದ ನೀರು ಹೊರ ಬಿಟ್ಟಾಗಿನಿಂದ ಜನರಲ್ಲಿ ಆರಂಭವಾದ ಆತಂಕ ಇದೀಗ 2. 65 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿರುವುದರಿಂದ ಆತಂಕ ದುಪ್ಪಟ್ಟುಗೊಂಡಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ಪಾತ್ರದಲ್ಲಿ ಬರುವ ದಾಸನಪುರ, ಹಳೇ ಹಂಪಾಪುರ, ಮುಳ್ಳೂರು, ಯಡಕುರಿಯಾ, ಸತ್ತೇಗಾಲ, ಧನಗೆರೆ, ಸರಗೂರು, ಹರಳೆಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆತಂಕ ತರಿಸಿದೆ.

ಕಾವೇರಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಬೆಳೆಯಲಾಗಿರುವ ಭತ್ತ, ರಾಗಿ, ಕಬ್ಬು, ಜೋಳ, ಅರಶಿಣ, ತೆಂಗು ಸೇರಿದಂತೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿರುವ ಬೆಳೆಯ ಮಧ್ಯೆ ನೀರು ನಿಂತು ಕೊಂಡಿದೆ. ಅಷ್ಟೇ ಅಲ್ಲದೇ ನೂರಾರು ಪಂಪ್‌ ಸೆಟ್‌ಗಳು ಜಲಾವೃತಗೊಂಡಿವೆ. ದಾಸನಪುರ, ಹಳೇ ಹಂಪಾಪುರ, ಮುಳ್ಳೂರು ಮತ್ತು ಹಳೆ ಅಣಗಳ್ಳಿ ಗ್ರಾಮಗಳು ಬಹುತೇಕ ಜಲಾವೃತಗೊಂಡಿವೆ. ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

ಆತಂಕದಲ್ಲಿ ನದಿ ಪಾತ್ರದ ಗ್ರಾಮಸ್ಥರು:

ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ದಿನದಿಂದ ದಿನಕ್ಕೆ ಕಾವೇರಿ ನೀರಿನ ಹರಿವು ಹೆಚ್ಚಳವಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಬರುವ ಸಾವಿರಾರು ಹೆಕ್ಟೇರ್‌ ಪ್ರದೇಶದ ಬೆಳೆ ಜಲ ದಿಗ್ಬಂಧನಕ್ಕೆ ತುತ್ತಾಗಿವೆ. ದಾಸನಪುರದಲ್ಲಿ ಭಾನುವಾರ ಸಂಜೆ ವೇಳೆಗೆ ಮನೆಗಳಿಗೆ ನೀರು ನುಗ್ಗಲು ಆರಂಭಿಸಿದೆ. ಮುಳ್ಳೂರು ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಗ್ರಾಪಂ ಕಟ್ಟಡ ಸೇರಿದಂತೆ ಹಳ್ಳದಲ್ಲಿರುವ ಕೆಲ ಮನೆಗಳು ನೀರಿನಿಂದ ಜಲಾವೃತಗೊಂಡಿವೆ. ಮನೆ ನೀರು ನುಗ್ಗಿದ್ದರೂ ಜನರು ಮಾತ್ರ ಪರಿಹಾರ ಕೇಂದ್ರಗಳಿಗೆ ಧಾವಿಸಲು ಹಿಂದೇಟು ಹಾಕುತಿದ್ದಾರೆ. ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ನೇತೃತ್ವದ ತಂಡ ಮುರ್ನಾಲ್ಕು ದಿನಗಳಿಂದ ನಿತ್ಯವೂ ಜನರ ಮನವೂಲಿಸುವಲ್ಲಿ ನಿರತರಾಗಿದ್ದು, ಸಂತ್ರಸ್ಧ ರಿಗೆ ಬೇಕಾದ ಎಲ್ಲ ವ್ಯವಸ್ಧೆ ಮಾಡಿಕೊಂಡು ಕಾಯುತ್ತಿದ್ದರು. ಆದರೂ ಜನರು ಪರಿಹಾರ ಕೇಂದ್ರಗಳತ್ತ ಧಾವಿಸಲು ಮುಂದಾಗಿರಲಿಲ್ಲ. ಭಾನುವಾರ ಸಂಜೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ದಾಸನಪುರದ ಮನೆಗಳತ್ತ ನೀರು ನುಗಿದ್ದರಿಂದ ಕಡೆಗೂ ಸಂತ್ರಸ್ಧರು ಪರಿಹಾರ ಕೇಂದ್ರದತ್ತ ಮುಖ ಮಾಡಿದ್ದಾರೆ.

ಜಾನುವಾರು ಮತ್ತು ಮನೆ ಮಠವನ್ನು ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಆತಂಕದ ನಡುವೆಯೂ ಗ್ರಾಮದಲ್ಲಿ ಕೆಲವರು ವಾಸ್ತವ್ಯ ಹೊಡಿದ್ದು, ದಾಸನಪುರ ಗ್ರಾಮದಲ್ಲಿ ಕಂಡು ಬಂದಿತು. ಇನ್ನೂ ಕೆಲವರು ಪ್ರವಾಹ ಬರಬಹುದು ಎಂಬ ಎಚ್ಚರಿಕೆಯಿಂದ ಗ್ರಾಮದಲ್ಲಿನ ತಾರಸಿ ಮನೆಗಳಿಗೆ ಮತ್ತು ಎತ್ತರದ ಪ್ರದೇಶಗಳಲ್ಲಿರುವ ಮನೆಗಳಿಗೆ ದವಸ ಧಾನ್ಯ ಸಾಗಿಸುವ ತಯಾರಿಯಲ್ಲಿದ್ದ ದೃಶ್ಯ ಕಂಡು ಬಂದಿತು.

ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬದವರೊಂದಿಗೆ ಚರ್ಚಿಸಿದರು. ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಿಕೊಂಡರು. ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನಾವೃಷ್ಟಿಯಿಂದಾಗಿ ಚಾಮರಾಜನಗರ ಜಿಲ್ಲೆಯ ಕಾವೇರಿ ನದಿ ಪಾತ್ರದ ರೈತರು ಹೈರಾಣಾಗಿ ಹೋಗಿದ್ದು, ಮತ್ತೊಂದು ಕಡೆ ಕಾವೇರಿಯಿಂದ ಉಂಟಾಗಿರುವ ಅತಿವೃಷ್ಟಿಕಾವೇರಿ ನದಿ ಪಾತ್ರದ ಜನರಲ್ಲಿ ಮತ್ತೊಷ್ಟುಆತಂಕ ಸೃಷ್ಟಿಸಿದೆ. ಪ್ರವಾಹದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಕೂಡ ಕ್ರಮ ವಹಿಸಿದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಆದರೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಇಮ್ಮಡಿಗೊಂಡಿದೆ.