ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್‌ ಪ್ರಯಾಣವು ಯಶಸ್ವಿಯತ್ತಾ ಸಾಗುತ್ತಿದೆ. ಅನ್ನಭಾಗ್ಯದ ಗೊಂದಲಕ್ಕೆ ಈಗಾಗಲೇ ತೆರೆಬಿದ್ದಿದೆ. ಆಗಸ್ಟ್‌ ಮಾಹೆಯಿಂದ ರಾಜ್ಯದ ಜನತೆಗೆ 200 ಯೂನಿಟ್‌ ವಿದ್ಯುತ್‌ ಉಚಿತ ಕಾರ್ಯಕ್ರಮಕ್ಕೆ ಕಲ್ಬುರ್ಗಿಯಲ್ಲಿ ಚಾಲನೆ ನೀಡುತ್ತೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಕೊರಟಗೆರೆ : ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್‌ ಪ್ರಯಾಣವು ಯಶಸ್ವಿಯತ್ತಾ ಸಾಗುತ್ತಿದೆ. ಅನ್ನಭಾಗ್ಯದ ಗೊಂದಲಕ್ಕೆ ಈಗಾಗಲೇ ತೆರೆಬಿದ್ದಿದೆ. ಆಗಸ್ಟ್‌ ಮಾಹೆಯಿಂದ ರಾಜ್ಯದ ಜನತೆಗೆ 200 ಯೂನಿಟ್‌ ವಿದ್ಯುತ್‌ ಉಚಿತ ಕಾರ್ಯಕ್ರಮಕ್ಕೆ ಕಲ್ಬುರ್ಗಿಯಲ್ಲಿ ಚಾಲನೆ ನೀಡುತ್ತೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪಟ್ಟಣ, ಕಸಬಾ, ಕೋಳಾಲ ಮತ್ತು ಕೋರಾ ಹೋಬಳಿ ವ್ಯಾಪ್ತಿಯಲ್ಲಿ ಅರಣ್ಯ, ಪ್ರವಾಸೋದ್ಯಮ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ 17 ಕೋಟಿಗೂ ಅಧಿಕ ಅನುದಾನದ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

Congress guarantee: ಗೃಹಜ್ಯೋತಿಗೆ ನೀರಸ ಪ್ರತಿಕ್ರಿಯೆ; 1 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿಲ್ಲ!

ಕೇಂದ್ರ ಸರ್ಕಾರದ ಬಳಿ ಅಕ್ಕಿಯ ದಾಸ್ತಾನು ಲಭ್ಯವಿದ್ದರೂ, ರಾಜ್ಯದ ಜನರಿಗೆ ಅಕ್ಕಿ ನೀಡಲು ನಿರಾಕರಿಸಿದೆ. ನಮ್ಮ ಸರ್ಕಾರ ನೀಡಿದ ಮಾತಿನಂತೆ 5 ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಕೆ.ಜಿ. ಅಕ್ಕಿಗೆ 34 ರು. ಹಣ ನೀಡುತ್ತಿದ್ದೇವೆ. ಪದವಿ ಪಡೆದವರಿಗೆ 3000 ಮತ್ತು ಡಿಪ್ಲೊಮೊ ಮಾಡಿದವರಿಗೆ 1500 ರು. ನೀಡಲು ರಾಜ್ಯ ಸರ್ಕಾರ ಈಗಾಗಲೇ ಯುವನಿ​ಧಿಗೂ ರೂಪುರೇಷೆ ತಯಾರಿಸಿದೆ ಎಂದು ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೆ ವೇಳೆ ನಾವು ರಾಜ್ಯದ ಜನತೆಗೆ ನೀಡಿದ ಭರವಸೆಯಲ್ಲಿ 5 ಗ್ಯಾರಂಟಿಗೆ ಈಗಾಗಲೇ ಸಂಪುಟದ ಒಪ್ಪಿಗೆಯು ಸಿಕ್ಕಿದೆ. ರಾಜ್ಯದ ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತೇನೆ, ಯಾವುದೇ ಅನುಮಾನ ಬೇಡ. ನನ್ನ ಕ್ಷೇತ್ರದಲ್ಲಿ 3 ಕೋಟಿ 50 ಲಕ್ಷ ವೆಚ್ಚದ 2 ಆಸ್ಪತ್ರೆಗಳು ಈಗಾಗಲೇ ನಿರ್ಮಾಣ ಆಗಿವೆ. ಕೋಳಾಲದಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್‌, ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌, ಜಿಪಂ ಸಿಇಒ ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಅರಣ್ಯ ಇಲಾಖೆಯ ಸಂರಕ್ಷಣಾ ಅಧಿಕಾರಿ ರಮೇಶ್‌, ಉಪ ಸಂರಕ್ಷಣಾ ಅಧಿಕಾರಿ ಅನುಪಮಾ, ತಹಸೀಲ್ದಾರ್‌ ಮುನಿಶಾಮಿರೆಡ್ಡಿ, ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್ಥನಾರಾಯಣ್‌, ಅರಣ್ಯಾಧಿಕಾರಿ ಸುರೇಶ್‌, ಸತೀಶಚಂದ್ರ, ಮಲ್ಲಿಕಾರ್ಜುನಪ್ಪ, ಸುಬ್ಬರಾವ್‌, ಮಹೇಶ್‌ಮಲ್ಲಗಟ್ಟಿ, ಚಿಕ್ಕರಾಜೇಂದ್ರ, ನಾಗರಾಜು ಸೇರಿದಂತೆ ಇತರರು ಇದ್ದರು.

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

17 ಕೋಟಿಯ ವಿವಿಧ ಕಾಮಗಾರಿಗೆ ಚಾಲನೆ:

ಅರಣ್ಯ ಇಲಾಖೆಯ ವೃಕ್ಷೋದ್ಯಾನ ಯೋಜನೆಯಡಿ 2 ಕೋಟಿ 50 ಲಕ್ಷ ವೆಚ್ಚದ ಟ್ರೀಪಾರ್ಕ್ ಲೋಕಾರ್ಪಣೆ, ಪ್ರವಾಸೋದ್ಯಮ ಇಲಾಖೆಯ 9 ಕೋಟಿ ವೆಚ್ಚದ ಗೋಕುಲಕೆರೆಯ ಉದ್ಯಾನವನ, ಸಮಾಜ ಕಲ್ಯಾಣ ಇಲಾಖೆಯ 2 ಕೋಟಿ 75 ಲಕ್ಷ ವೆಚ್ಚದ 14 ಅಂಬೇಡ್ಕರ್‌ ಭವನ, ಜಿಪಂಯ 2 ಕೋಟಿ ವೆಚ್ಚದಲ್ಲಿ ಕಾವರ್ಗನ್‌ ಕಂಬದಹಳ್ಳಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭೂಮಿಪೂಜೆ ನೆರವೇರಿಸಿದರು.

ಅವೈಜ್ಞಾನಿಕ ಕೌನ್ಸಿಲಿಂಗ್‌ ರದ್ದತಿಗೆ ಮನವಿ:

ಟಿಸಿಎಂಎಸ್‌ ಕಾಯ್ದೆಯು ಅರಣ್ಯ ಇಲಾಖೆಯ ನೌಕರರಿಗೆ ಮಾರಕವಾಗಿದೆ. ಕೆಳಹಂತದ ನೌಕರರಿಗೆ ಸ್ವಂತ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಗೋದಿಲ್ಲ. ಅಪರಾಧ ತಡೆಗೆ ಕಾಯ್ದೆಯಿಂದ ಹಿನ್ನಡೆಯಾಗುವ ಸಾಧ್ಯತೆಯು ಹೆಚ್ಚಿದೆ. ಭವಿಷ್ಯದ ಅರಣ್ಯ ಸಂಪತ್ತು ಸಂರಕ್ಷಣೆಗಾಗಿ ಕೌನ್ಸಿಲಿಂಗ್‌ ಪದ್ದತಿ ರದ್ದಾಗಬೇಕಿದೆ. ಅವೈಜ್ಞಾನಿಕ ಕೌನ್ಸೆಲಿಂಗ್‌ ವರ್ಗಾವಣೆ ಪದ್ದತಿ ರದ್ದು ಮಾಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಅರಣ್ಯ ಇಲಾಖೆಯ ಸಿಬ್ಬಂದಿ ವೃಕ್ಷೋದ್ಯಾನ ಕಾರ್ಯಕ್ರಮದ ವೇಳೆ ಮನವಿ ಸಲ್ಲಿಸಿದರು.

ಬಯಲುಸೀಮೆ ರೈತರ ಬಹುದೊಡ್ಡ ಕನಸಾದ ಎತ್ತಿನಹೊಳೆ ಯೋಜನೆಯು 2 ವರ್ಷದಲ್ಲಿ ಪೂರ್ಣ ಆಗಲಿದೆ. ಕಾಮಗಾರಿ ಪೂರ್ಣಕ್ಕೆ ಅನುದಾನ ಬಿಡುಗಡೆ ಮಾಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಕೊರಟಗೆರೆ ಕ್ಷೇತ್ರದ ಮನೆ ಮನೆಗೆ ನೀರಿನ ಸಂಪರ್ಕಕ್ಕಾಗಿ ಜಲಜೀವನ್‌ ಮಿಷನ್‌ ಯೋಜನೆಯಡಿ 198 ಕೋಟಿಯ ಕಾಮಗಾರಿ ಈಗಾಗಲೇ ಪ್ರಾರಂಭ ಆಗಿದೆ. ಕೊರಟಗೆರೆ ಕ್ಷೇತ್ರದ ಜನತೆಗೆ 5000 ಸೈಟ್‌ ನೀಡಲು ಅಂಕಿಅಂಶದ ರೂಪುರೇಷೆ ತಯಾರಿಸಲು ಜಿಪಂ ಸಿಇಒಗೆ ಸೂಚನೆ ನೀಡಲಾಗಿದೆ.

ಡಾ.ಜಿ.ಪರಮೇಶ್ವರ್‌ ಗೃಹ ಸಚಿವರು, ಕರ್ನಾಟಕ ಸರ್ಕಾರ