ತಲಕಾಡಿನಲ್ಲಿ ಕುಡಿಯುವ ನೀರು ಸರಬರಾಜು : ಕೊರತೆಯಾಗದಂತೆ ಪ್ಲಾನ್

ಈ ಬಾರಿಯ ರಣ ಬೇಸಿಗೆ ಜೀವಜಲದ ಬರ ಎಲ್ಲೆಡೆ ಕಾಡುವಂತೆ ಮಾಡಿದೆ. ಹನಿ ಹನಿ ನೀರಿಗೂ ಜನ ತತ್ವಾರ ಪಡುತ್ತಿದ್ದಾರೆ. ಆದರೆ,ತಲಕಾಡು ಗ್ರಾಪಂ ನಲ್ಲಿಯ 9 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಸರಬರಾಜು ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದೆ.

Drinking water supply in Talakad: Plan to avoid water shortage snr

 ಅಕ್ರಂಪಾಷ ತಲಕಾಡು

 ತಲಕಾಡು :  ಈ ಬಾರಿಯ ರಣ ಬೇಸಿಗೆ ಜೀವಜಲದ ಬರ ಎಲ್ಲೆಡೆ ಕಾಡುವಂತೆ ಮಾಡಿದೆ. ಹನಿ ಹನಿ ನೀರಿಗೂ ಜನ ತತ್ವಾರ ಪಡುತ್ತಿದ್ದಾರೆ. ಆದರೆ,ತಲಕಾಡು ಗ್ರಾಪಂ ನಲ್ಲಿಯ 9 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಸರಬರಾಜು ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದೆ.

ಇಲ್ಲಿನ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಾಕಷ್ಟು ಕೊಳವೆ ಬಾವಿಗಳಿದ್ದರೂ ಬೇಸಿಗೆಯಲ್ಲಿ ನೀರಿಲ್ಲದೆ ಕೆಲವು ಬತ್ತಿ ಹೋಗಿವೆ. ಬತ್ತಿದ ಕೊಳವೆ ಬಾವಿಗಳಲ್ಲಿದ್ದ ಮೋಟಾರ್ ಪಂಪ್ ಗಳನ್ನು ಕೂಡಲೆ ತೆರವುಗೊಳಿಸಲು ಮುಂದಾಗಿರುವ ಇಲ್ಲಿನ ಪಂಚಾಯಿತಿ, ಊರಲ್ಲಿ ಬಹುಕಾಲದಿಂದ ಉಪಯೋಗಿಸದೆ ಕೈ ಬಿಟ್ಟಿರುವ ಹಳೆಯ ಕೈಪಂಪು ಕೊಳವೆಬಾವಿಗಳಿಗೆ ಅಳವಡಿಸಿ ಗ್ರಾಮದಲ್ಲಿ ನೀರಿನ ಕೊರತೆಯಾಗದಂತೆ ನಿರ್ವಹಿಸಲು ಯಶಸ್ವಿಯಾಗಿದೆ.

ಇಲ್ಲಿನ ಹಾಲಿನ ಡೇರಿ ಬಳಿ ಗ್ರಾಮಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯಲ್ಲಿ, ಈ ಬಾರಿಯ ಬೇಸಿಗೆಯಲ್ಲಿ ನೀರು ಬತ್ತಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಹಾಗಾಗಿ ಇದೇ ಘಟಕದ ಪಕ್ಕದ ಅರಳೀಮರದ ಬಳಿಯ ಮತ್ತೊಂದು ಕೈಪಂಪು ಕೊಳವೆ ಬಾವಿಯಿದ್ದು, ಇದೂ ಕೂಡ ಬಳಕೆಯಲ್ಲಿಲ್ಲದೆ ಬಹು ವರ್ಷದಿಂದ ನಿಸ್ತೇಜವಾಗಿತ್ತು.

ನಿಸ್ತೇಜವಾಗಿದ್ದ ಇಲ್ಲಿನ ಕೊಳವೆ ಬಾವಿಯಲ್ಲಿ ಅಂತರ್ಜಲವಿರುವ ವಿಶ್ವಾಸದಲ್ಲಿ ಇಲ್ಲಿನ ಪಂಚಾಯಿತಿ ಅಧ್ಯಕ್ಷರು, ಮತ್ತೊಂದು ಕೊಳವೆಬಾವಿ ಮೋಟಾರ್ ಪಂಪನ್ನು ಇಲ್ಲಿ ಅಳವಡಿಸಲು ಮುಂದಾದರು. ನಿಸ್ತೇಜವಾಗಿದ್ದ ಘಟಕದಲ್ಲಿ ಈಗ ಭರಪೂರವಾಗಿ ನೀರು ಹೊರ ಹೊಮ್ಮುತ್ತಿದ್ದು, ಇದರಿಂದ ಬಡಾವಣೆ ನಿವಾಸಿಗಳ ನೀರಿನ ದಾಹ ತಣಿಸಲು ನೆರವಾಗಿದೆ.

\Bಬಿರುಬೇಸಿಗೆ ನೀರಿನ ಬಳಕೆ ದುಪ್ಪಟ್ಟು:\B

ಇದಲ್ಲದೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಬಳಿಯ ಕೊಳವೆಬಾವಿ ಮೋಟಾರ್ ಘಟಕ ಕೂಡ ನೀರಿಲ್ಲದೆ ಬತ್ತಿ ಹೋಗಿದ್ದು, ಇಲ್ಲಿಯ ಬೋರ್ ವೆಲ್ ನಲ್ಲಿ ಅಳವಡಿಸಿದ್ದ ಮೋಟಾರ್ ಹಾಗು ಪೈಪ್ ಲೈನ್ ಕಳಚಿ, ಗ್ರಾಮದೇವತೆ ದೇಗುಲದ ಬಳಿಯ ಮತ್ತೊಂದು ಕೊಳವೆ ಬಾವಿ ಘಟಕಕ್ಕೆ ಅಳವಡಿಸುವ ಮೂಲಕ ಗ್ರಾಮದಲ್ಲಿ ಕುಡಿಯುವ ನೀರು ವ್ಯತ್ಯಯವಾಗದಂತೆ ಪಂಚಾಯ್ತಿ ಮುಂಜಾಗ್ರತೆ ವಹಿಸಿದೆ.

ಈ ಬಾರಿ ಬೇಸಿಗೆ ರಣಬಿಸಿಲ ತಾಪಮಾನ ತಲಕಾಡಿನಲ್ಲಿ ಹೆಚ್ಚಿದ್ದು ನೀರಿನ ಬೇಡಿಕೆ ಕೂಡ ಅಧಿಕವಾಗಿದೆ. ಈ ನಿಟ್ಟಿನಲ್ಲಿ ತಿ.ನರಸೀಪುರ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ನದಿಮೂಲದ ಜೆಜೆಎಂ ಘಟಕ ಹಾಗೂ ಪಂಚಾಯಿತಿ ವ್ಯಾಪ್ತಿಯ 28 ಕೊಳವೆ ಬಾವಿ ಘಟಕಗಳ ನೆರವಿನಲ್ಲಿ ಇಲ್ಲಿನ ಗ್ರಾಪಂ ಈ ಬಾರಿಯ ಬಿರು ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಾರಿಯ ಬಿರುಬೇಸಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರೊದಗಿಸಲು ಸವಾಲೊಡ್ಡಿದೆ. ಹಾಗಾಗಿ ಮುಂಜಾಗ್ರತೆ ವಹಿಸಿರುವ ಪಂಚಾಯಿತಿ ಆಯಾವಾರ್ಡ್ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಸ್ಥಳಗಳಿಗೆ ತಕ್ಷಣವೇ ಬೇಟಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

- ಶೋಭಾ ಮಲ್ಲಾಣಿ, ಗ್ರಾಪಂ ಅಧ್ಯಕ್ಷರು, ತಲಕಾಡು

Latest Videos
Follow Us:
Download App:
  • android
  • ios