ಬೆಂಗಳೂರಿನಲ್ಲಿ ಇಸ್ರೋ ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಪತ್ನಿಯ ಭವಿಷ್ಯದ ಚಿಂತೆಯಿಂದ ಆಕೆಯನ್ನು ಹತ್ಯೆ ಮಾಡಿದ್ದಾರೆ. ಈ ದುರಂತದ ಬಳಿಕ, ಅಮೆರಿಕದಲ್ಲಿರುವ ಅವರ ಏಕೈಕ ಪುತ್ರಿ ತಾಯಿಯ ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದ್ದಾರೆ.
ಬೆಂಗಳೂರು (ಫೆ.21): ವೈಟ್‌ಫೀಲ್ಡ್ ಸಮೀಪದ ಹಿರಿಯ ನಾಗರಿಕರ ಅಪಾರ್ಟ್‌ಮೆಂಟ್‌ನಲ್ಲಿಇಸ್ರೋ ನಿವೃತ್ತ ಉದ್ಯೋಗಿ ತಮ್ಮ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣವು ಈಗ ಮತ್ತೊಂದು ಅತ್ಯಂತ ವೇದನೆಯ ತಿರುವು ಪಡೆದುಕೊಂಡಿದೆ. ತನ್ನ ಹೆತ್ತ ತಾಯಿ ಕೊಲೆಯಾಗಿದ್ದರೂ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಏಕೈಕ ಪುತ್ರಿ ವೈಯಕ್ತಿಕ ಕಾರಣಗಳನ್ನು ನೀಡಿ ಭಾರತಕ್ಕೆ ಬರಲು ನಿರಾಕರಿಸಿದ್ದಾರೆ.
ಅವಲಹಳ್ಳಿ ಪೊಲೀಸ್ ವ್ಯಾಪ್ತಿಯ ಬೊಮ್ಮನಹಳ್ಳಿಯ 'ವರ್ಚುಯೋಸೊ ಅಪಾರ್ಟ್‌ಮೆಂಟ್ಸ್' ಹೆಸರಿನ ಹಿರಿಯ ನಾಗರಿಕರ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18ರಂದು ಭೀಕರ ಘಟನೆ ನಡೆದಿತ್ತು. ಇಸ್ರೋದ ಮಾಜಿ ನೌಕರ 70 ವರ್ಷದ ನಾಗೇಶ್ವರ ರಾವ್, ತಮ್ಮ 63 ವರ್ಷದ ಪತ್ನಿ ಸಂಧ್ಯಾ ಶ್ರೀ ಅವರನ್ನು ಹತ್ಯೆ ಮಾಡಿದ್ದರು. 2022ರಿಂದ ಅವರು ಇಲ್ಲಿ ವಾಸವಾಗಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಪತ್ನಿಯ ಶವ ಅಡುಗೆ ಮನೆಯಲ್ಲಿ ಬಿದ್ದಿದ್ದರೆ, ನಾಗೇಶ್ವರ ರಾವ್ ಸೋಫಾ ಮೇಲೆ ಕುಳಿತಿದ್ದರು. "ಹೌದು, ನಾನೇ ಕೊಂದೆ. ನನ್ನ ಸಾವಿನ ನಂತರ ಅವಳನ್ನು ನೋಡಿಕೊಳ್ಳುವವರು ಯಾರು? ನಾನು ಹೆಚ್ಚೆಂದರೆ ಇನ್ನೆರಡು ಮೂರು ವರ್ಷ ಬದುಕಬಹುದು ಅಷ್ಟೆ. ನಮಗೆ ಹತ್ತಿರದ ಸಂಬಂಧಿಕರೂ ಇಲ್ಲ" ಎಂದು ರಾವ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು.
ಘಟನೆ ನಡೆದ ದಿನವೇ ಪೊಲೀಸರು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ದಂಪತಿಯ ಏಕೈಕ ಪುತ್ರಿಯನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದರು. ಆರಂಭದಲ್ಲಿ ಆಕೆ ತಾನು ಭಾರತಕ್ಕೆ ಬರುವುದಾಗಿ ತಿಳಿಸಿದ್ದರು. ಈ ಕಾರಣಕ್ಕೆ ಪೊಲೀಸರು ಮಗಳ ಆಗಮನಕ್ಕಾಗಿ ಮರಣೋತ್ತರ ಪರೀಕ್ಷೆ ಹಾಗೂ ಇತರ ಕಾನೂನು ಪ್ರಕ್ರಿಯೆಗಳನ್ನು ತಡೆಹಿಡಿದಿದ್ದರು. ಆದರೆ, ನಂತರ ಆಕೆ ತನ್ನ ನಿಲುವನ್ನು ಬದಲಿಸಿ, ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿರುವುದು ಪೊಲೀಸರಿಗೆ ಆಘಾತ ತಂದಿದೆ.
ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, "ಆಕೆ ದಂಪತಿಯ ಏಕೈಕ ಮಗಳು. ತಾಯಿ ಮೃತಪಟ್ಟಿದ್ದಾರೆ, ತಂದೆ ಜೈಲು ಪಾಲಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಕಾನೂನು ಮತ್ತು ಭಾವನಾತ್ಮಕ ದೃಷ್ಟಿಯಿಂದ ಆಕೆಯ ಉಪಸ್ಥಿತಿ ಬಹಳ ಮುಖ್ಯವಾಗಿತ್ತು. ನಾವು ಎಷ್ಟೇ ಮನವೊಲಿಸಿದರೂ ಆಕೆ ಬರಲು ಒಪ್ಪಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅನಾಥವಾದ ಶವಕ್ಕೆ ಆಪ್ತರೇ ಆಸರೆ
ಮಗಳು ಕೈಬಿಟ್ಟ ನಂತರ ಪೊಲೀಸರಿಗೆ ನಾಗೇಶ್ವರ ರಾವ್ ಅವರ ದೂರದ ಸಂಬಂಧಿ, ಜೆಬಿ ನಗರದ ನಿವಾಸಿ ವಿಜಯ್ ಬಾಬು ಅವರನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಪೊಲೀಸರ ಮನವಿಗೆ ಸ್ಪಂದಿಸಿದ ನಾಗೇಶ್ವರ ರಾವ್ ಅವರ ಭಾವಮೈದುನ ವಿಜಯ್ ಬಾಬು ಅವರು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ಸಂಧ್ಯಾ ಶ್ರೀ ಅವರ ಅಂತ್ಯಕ್ರಿಯೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದಾರೆ.
ಪತ್ನಿಯ ಭವಿಷ್ಯದ ಆತಂಕದಲ್ಲಿ ಪತಿಯೇ ಪ್ರಾಣ ತೆಗೆದರೆ, ಹೆತ್ತ ತಾಯಿಯ ಅಂತಿಮ ದರ್ಶನಕ್ಕೂ ಬಾರದ ಮಗಳ ವರ್ತನೆ ಸಮಾಜದಲ್ಲಿ ಹಿರಿಯ ನಾಗರಿಕರ ಒಂಟಿತನ ಮತ್ತು ಕೌಟುಂಬಿಕ ಬಾಂಧವ್ಯದ ಪತನವನ್ನು ಎತ್ತಿ ತೋರಿಸುವಂತಿದೆ.


