ಬೆಂಗಳೂರು[ಮಾ.22]: ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಸಭೆ, ಸಮಾರಂಭ, ಜಾತ್ರೆ, ರಥೋತ್ಸವಗಳಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರೂ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಸಿದ್ಧತೆ ನಡೆದಿದೆ.

ಸರ್ಕಾರದ ಸ್ಪಷ್ಟ ಆದೇಶದ ನಡುವೆಯೂ ಶ್ರೀ ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮ ದೇವಾಲಯದ ಆಡಳಿತ ಮಂಡಳಿ ಇಂತಹದ್ದೊಂದು ತೀರ್ಮಾನ ಕೈಗೊಂಡು ವಿವಾದಕ್ಕೀಡಾಗಿದೆ. ಈಗಾಗಲೇ ಕರಗ ಮಹೋತ್ಸವಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆ ಮುದ್ರಣಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜನತಾ ಕರ್ಫ್ಯೂಗೆ ಇಡೀ ರಾಜ್ಯ ಸನ್ನದ್ಧ: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಆಹ್ವಾನ ಪತ್ರಿಕೆಯಲ್ಲಿ ಮಾಹಿತಿಯಂತೆ ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮಾಚ್‌ರ್‍ 31ರಿಂದ ಏಪ್ರಿಲ್‌ 10ರವರೆಗೂ ದ್ರೌಪದಪ್ಪ ಕರಗ ಶಕ್ತ್ಯೋತ್ಸವ ಹಾಗೂ ಮಹಾರಥೋತ್ಸವದ ಧಾರ್ಮಿಕ ಕಾರ್ಯಗಳು ಜರುಗಲಿವೆ. ಮಾ.31ರ ರಾತ್ರಿ ರಥೋತ್ಸವ ಮತ್ತು ಧ್ವಜಾರೋಹಣ, ಏ.1ರಿಂದ 4ರವರೆಗೆ ಪ್ರತಿದಿನದ ವಿಶೇಷ ಪೂಜೆಗಳು, ಏ.5ರಂದು ಆರತಿ ದೀಪಗಳು, ಏ.6ರಂದು ಹಸಿ ಕರಗ, ಏ.7ರಂದು ಪೊಂಗಲ್ಲು ಸೇವೆ, ಏ.8ರಂದು ರಾತ್ರಿ 12 ಗಂಟೆಗೆ ಕರಗ ಶಕ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವ, ಏ.9ರಂದು ಪುರಾಣ ಪ್ರವಚನ ಹಾಗೂ ಗಾವು ಶಾಂತಿ, ಏ.10ರಂದು ವಸಂತೋತ್ಸವ, ಧ್ವಜಾರೋಹಣ ನಡೆಯಲಿದೆ. ಕರಗ ಪೂಜಾರಿ ಎ.ಜ್ಞಾನೇಂದ್ರ ಅವರು ಈ ಬಾರಿ ಕರಗ ಹೊರಲಿದ್ದಾರೆ ಎಂದು ತಿಳಿಸಲಾಗಿದೆ.

ಲಕ್ಷಾಂತರ ಜನ ಸೇರಿದರೆ ಸಮಸ್ಯೆ: 

ಸರ್ಕಾರ ಯಾವುದೇ ಮದುವೆ, ಸಭೆ ಸಮಾರಂಭಗಳಲ್ಲೂ 100ರಿಂದ 150 ಜನರಿಗಿಂತ ಹೆಚ್ಚು ಜನ ಸೇರಬಾರದೆಂದು ಹೇಳಿದೆ. ಅಲ್ಲದೆ, ಜಾತ್ರೆ, ರಥೋತ್ಸವದಂತಹ ಸಾವಿರಾರು ಜನರು ಸೇವು ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ. ಆದರೆ, ಧರ್ಮರಾಯಸ್ವಾಮಿಯು ಆಡಳಿತ ಮಂಡಳಿಯು ಕೊರೋನಾ ಆತಂಕದ ನಡುವೆ ಸರ್ಕಾರದ ನಿರ್ಬಂಧವನ್ನೂ ಪರಿಗಣಿಸದೆ ಲಕ್ಷಾಂತರ ಜನರು ಸೇರುವ ಬೆಂಗಳೂರು ಕರಗ ಮಹೋತ್ಸವಕ್ಕೆ ಸಮಯ ನಿಗದಿಪಡಿಸಿ ಸಿದ್ಧತೆ ನಡೆಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಸಕ್ಕರೆ ಪ್ರಸಾದ ಸ್ವೀಕರಿಸಿದವರು ಕ್ವಾರಂಟೈನ್‌!

ವಿಶೇಷವೆಂದರೆ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ರೋಹಿಣಿ ಸಿಂಧೂರಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಹೆಸರನ್ನು ಮುದ್ರಿಸಲಾಗಿದೆ.