ಚಿಕ್ಕಬಳ್ಳಾಪುರ(ಮಾ.22): ಜಿಲ್ಲೆಯಲ್ಲಿ ಏಕಕಾಲದಲ್ಲಿ ಇಬ್ಬರಿಗೆ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತಂಕ ಮನೆಮಾಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್‌ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಇಬ್ಬರು ಸೋಂಕಿತರ ಜತೆಗೆ ಸಂಪರ್ಕಕ್ಕೆ ಬಂದಿದ್ದ ಒಟ್ಟು 24 ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲು ಕ್ರಮಕೈಗೊಳ್ಳಲಾಗಿದೆ. ಉಳಿದವರ ಮಾಹಿತಿ ಕಲೆ ಹಾಕುವ ಕೆಲಸ ಆರಂಭವಾಗಿದೆ.

ಗೌರಿಬಿದನೂರು ನಗರಕ್ಕೆ ಹೊಂದಿಕೊಂಡಿರುವ ಹಿರೇಬಿದನೂರು ಗ್ರಾಮದ ಚೌಡೇಶ್ವರಿ ಲೇಔಟ್‌ನಲ್ಲಿ ನೆಲೆಸಿದ್ದ ಕುಟುಂಬವೊಂದರ ತಾಯಿ ಮಗ ಹಾಗೂ ಸಂಬಂಧಿಕ ಮಹಿಳೆಯೊಬ್ಬರು ಇತ್ತೀಚೆಗೆ ಮೆಕ್ಕಾ ಪ್ರವಾಸಕ್ಕೆ ಹೋಗಿದ್ದು, ಇವರಲ್ಲಿ ತಾಯಿ-ಮಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇವರ ಜತೆಗಿದ್ದ ಮೂರನೇ ಮಹಿಳೆಯನ್ನೂ ಐಸೋಲೇಷನ್‌ನಡಿ ಇಡಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಡೀ ಗೌರಿಬಿದನೂರು ಪಟ್ಟಣವನ್ನು ಸ್ವಚ್ಛಗೊಳಿಸಿ, ಚರಂಡಿಗಳಿಗೆ ಬ್ಲೀಚಿಂಗ್‌ ಪೌಡರ್‌ ಹಾಕಲಾಗಿದೆ. ಹಿರೇಬಿದನೂರು ಹಾಗೂ ಚೌಡೇಶ್ವರಿ ಲೇಔಟ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಸೋಂಕಿತರ ನಿವಾಸಕ್ಕೆ ಔಷಧ ಸಿಂಪಡಿಸಲಾಗಿದ್ದು, ಅಕ್ಕಪಕ್ಕದ 9 ಮನೆಗಳ ನಿವಾಸಿಗಳನ್ನೂ ಸ್ಥಳಾಂತರಿಸಲಾಗಿದೆ. ಜತೆಗೆ, ಚೌಡೇಶ್ವರಿ ಲೇಔಟ್‌ಗೆ ಜನಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಭದ್ರತೆಗೆ ಪೊಲೀಸರನ್ನೂ ನಿಯೋಜಿಸಲಾಗಿದೆ.

ವೈದ್ಯರೂ ಕ್ವಾರಂಟೈನ್‌:

ಸೋಂಕಿತ ವ್ಯಕ್ತಿಗಳು ಮೆಕ್ಕಾದಿಂದ ಗೌರಿಬಿದನೂರಿಗೆ ವಾಪಸ್‌ ಆದ ನಂತರ ಗೌರಿಬಿದನೂರಿನ ಖಾಸಗಿ ವೈದ್ಯರ ಬಳಿ ಜ್ವರ ಮತ್ತು ನೆಗಡಿಗಾಗಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಸ್ವಯಪ್ರೇರಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೋಂಕಿತರು ಕೊಟ್ಟ ಸಕ್ಕರೆ ಪ್ರಸಾದ ತಿಂದವರಿಗೆ ಆತಂಕ

ಚಿಕ್ಕಬಳ್ಳಾಪುರ: ಕೊರೋನಾ ಸೋಂಕು ದೃಢಪಟ್ಟಿರುವ ಗೌರಿಬಿದನೂರಿನ ಒಂದೇ ಕುಟುಂಬದ ಇಬ್ಬರು ಮೆಕ್ಕಾದಿಂದ ತಂದಿದ್ದ ಸಕ್ಕರೆ ರೂಪದ ಪ್ರಸಾದವನ್ನು ತಮ್ಮ ಕುಟುಂಬದವರಿಗೆ, ಆತ್ಮೀಯರಿಗೆ ಹಂಚಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಪಾಲಿಗೆ ತಲೆನೋವು ಸೃಷ್ಟಿಸಿದೆ. ಇವರು ಯಾರಾರ‍ಯರಿಗೆ ಪ್ರಸಾದ ವಿತರಿಸಿದ್ದಾರೆ, ಇವರು ಯಾರ ಜತೆ ಸಮಯ ಕಳೆದಿದ್ದಾರೆ ಅವರೆಲ್ಲರಿಗೂ ಕೊರೋನಾ ಹರಡಿರುವ ಆತಂಕ ಶುರುವಾಗಿದೆ.

ಮೆಕ್ಕಾ ಪ್ರವಾಸಕ್ಕೆ ಹೋಗಿದ್ದ ತಾಯಿ-ಮಗ ಹಾಗೂ ಸಂಬಂಧಿಕ ಮಹಿಳೆಯೊಬ್ಬರು ಮಾ.16ರಂದು ಮುಂಜಾನೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಅಲ್ಲಿಂದ ಹಿಂದೂಪುರಕ್ಕೆ ಬರಲು ಎರಡು ಬಸ್‌ ಬದಲಾಯಿಸಿದ್ದಾರೆ. ಅಲ್ಲಿಂದ ಇವರ ಸಂಬಂಧಿಕರೊಬ್ಬರು ಕಾರಿನಲ್ಲಿ ಗೌರಿಬಿದನೂರಿಗೆ ಕರೆತಂದಿದ್ದಾರೆ. ಇವರಲ್ಲಿ ಪುತ್ರನಿಗೆ ಬಂದ ದಿನದಿಂದಲೇ ಜ್ವರ, ನೆಗಡಿ ಶುರುವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ನಂತರ ಮಾ.19ರಂದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಪರೀಕ್ಷೆ ನಡೆಸಿದಾಗ ಸೋಂಕು ದೃಢವಾಗಿದೆ. ನಂತರ ತಾಯಿಯ ಪರೀಕ್ಷೆ ನಡೆಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಈಗ ಹಿಂದೂಪುರದಿಂದ ಇವರ ಜತೆ ಪ್ರಯಾಣಿಸಿದವರು, ಅಲ್ಲಿ ಇವರು ಭೇಟಿಯಾದವರು, ಹಿಂದೂಪುರದಲ್ಲಿ ಇವರು ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಸೇರಿ ಎಲ್ಲರನ್ನೂ ಐಸೋಲೇಷನ್‌ಗೆ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸಾಮಾನ್ಯ ಶೀತ, ಜ್ವರ ಎಂಬ ಕಾರಣಕ್ಕೆ ಆರಂಭದಲ್ಲಿ ಇವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನೂ ಕ್ವಾರಂಟೇನ್‌ ಮಾಡಲಾಗಿದೆ. ಇವರು ಹೈದರಾಬಾದ್‌ನಲ್ಲಿ ಬಸ್‌ನಲ್ಲಿ ಪ್ರಯಾಣಿಸಿದ್ದ ಹಿನ್ನೆಲೆಯಲ್ಲಿ ಆಂಧ್ರ ಮತ್ತು ತೆಲಂಗಾಣದ ಅಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.