ಬೆಂಗಳೂರು (ಸೆ.07): ಕೊರೋನಾ ನಡುವೆಯೂ ನಗರದ ಸ್ವಚ್ಛತೆಯಲ್ಲಿ ತೊಡಗಿರುವ ಬಿಬಿಎಂಪಿಯ ಆಯ್ದ ಪೌರಕಾರ್ಮಿಕರು ಮತ್ತು ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ಆಯುರ್ವೇದ ತಜ್ಞ ಡಾ.ಗಿರಿದರ ಕಜೆ ಅವರು ಸಿದ್ದಪಡಿಸಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಪಾಲಿಕೆ ಆವರಣದಲ್ಲಿ 1200 ಮಂದಿ ಪೌರಕಾರ್ಮಿಕರು ಹಾಗೂ ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ಈ ಮಾತ್ರೆಗಳನ್ನು ವಿತರಣೆ ಮಾಡಿದರು.

ಗುಣಹೊಂದಿದ ಮಹಿಳೆಗೆ ಮತ್ತೆ ಕೊರೋನಾ! ಎಚ್ಚರ! ..

ಬಳಿಕ ಮಾತನಾಡಿದ ಅವರು, ಕೊರೋನಾ ಆತಂಕದ ನಡುವೆಯೂ ನಮ್ಮ ಪೌರಕಾರ್ಮಿಕರು ಕಸದ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ನಗರದ ಸ್ವಚ್ಛತೆ ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಪೌರಕಾರ್ಮಿಕರಿಗೆ ಪ್ರಶಾಂತಿ ಆಯುರ್ವೇದಿಕ್‌ ಸೆಂಟರ್‌ನ ಮುಖ್ಯಸ್ಥ ಡಾ.ಗಿರಿದರ ಕಜೆ ಅವರು ಉಚಿತವಾಗಿ ರೋಗ ನಿರೋಧಕ ಶಕ್ತಿ ಮಾತ್ರೆಗಳನ್ನು ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ಅವರ ಸಾಮಾಜಿಕ ಕಳಕಳಿಯನ್ನು ತೊರುತ್ತದೆ ಎಂದರು.

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2! ..

ಆಯುರ್ವೇದ ತಜ್ಞ ಡಾ.ಗಿರಿದರೆ ಕಜೆ ಮಾತನಾಡಿ, ಭವ್ಯ ಎಂಬ ಹೆಸರಿನ 60 ಮಾತ್ರೆಗಳು ಮತ್ತು ಸ್ವಾತ್ಮ್ಯ ಎಂಬ ಹೆಸರಿನ 30 ಮಾತ್ರೆಗಳು ನಮ್ಮ ಸಂಸ್ಥೆ ವಿತರಿಸಿರುವ ಡಬ್ಬಿಯಲ್ಲಿವೆ. ನಿತ್ಯ ಮೂರು ಬಾರಿ 2 ಭವ್ಯ ಹಾಗೂ 1 ಸಾತ್ಮ್ಯ ಮಾತ್ರೆಗಳನ್ನು ಊಟದ ಬಳಿಕ 10 ದಿನಗಳ ಕಾಲ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಈಗಾಗಲೇ 17,000 ಮಾತ್ರೆಗಳನ್ನು ವಿತರಿಸಲಾಗಿದೆ. ರಾಜ್ಯದಾದ್ಯಂತ 70,000 ಮಾತ್ರೆಗಳನ್ನು ಉಚಿತವಾಗಿ ವಿತರಿಸಿರುವುದಾಗಿ ಹೇಳಿದರು.

ಉಪ ಮೇಯರ್‌ ರಾಮಮೋಹನ ರಾಜು, ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ರಾಜು, ಮಾಜಿ ಮೇಯರ್‌ ಕಟ್ಟೆಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.