ಗುಣಮುಖ ಹೊಂದಿದ ಮಹಿಳೆಗೆ ಇದೀಗ ಮತ್ತೆ ಎರಡನೇ ಬಾರಿ ಕೊರೋನಾ ಸೋಂಕು ಮರುಕಳಿಸಿದೆ. ಇದರಿಂದ ಆಕಷ್ಟು ಆತಂಕಕ್ಕೆ ಎಡೆ ಮಾಡಿದೆ. 

 ಬೆಂಗಳೂರು (ಸೆ.07): ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಮಹಾಮಾರಿ ಮರುಕಳಿಸುತ್ತಿದ್ದು, ಬೆಂಗಳೂರಿನಲ್ಲಿ ಇಂತಹ ಮೊದಲ ಪ್ರಕರಣ ದೃಢಪಟ್ಟಿದೆ. 27 ವರ್ಷದ ಮಹಿಳೆಗೆ ಸೋಂಕಿನಿಂದ ಗುಣಮುಖವಾದ 1 ತಿಂಗಳಿಗೆ ಮತ್ತೆ ಮರುಕಳಿಸಿದ್ದು, ಈ ಪ್ರಕರಣ ಸಾರ್ವಜನಿಕರನ್ನು ಮಾತ್ರವಲ್ಲದೆ ಆರೋಗ್ಯ ಇಲಾಖೆಯನ್ನೂ ಆತಂಕಕ್ಕೆ ದೂಡಿದೆ.

ಹೀಗಾಗಿ ಸೋಂಕಿನಿಂದ ಗುಣಮುಖರಾಗಿದ್ದರೂ ಮತ್ತೆ ಸೋಂಕು ಉಂಟಾಗಬಹುದಾಗಿರುವುದರಿಂದ ಎಚ್ಚರ ತಪ್ಪಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೋಂಕಿತರು ಒಂದು ಬಾರಿ ಸೋಂಕಿನಿಂದ ಗುಣಮುಖರಾದ ಕೂಡಲೇ ತಾವು ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಮಾಸ್ಕ್‌ ಧರಿಸುವುದು, ಕೈಗಳ ಸ್ವಚ್ಛತೆ ಹಾಗೂ ದೈಹಿಕ ಅಂತರ ಕಾಪಾಡುವುದು ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2! ...

ಗುಣಮುಖರಾದವರಲ್ಲಿ ಸೋಂಕು ಮರುಕಳಿಸಿರುವ ಬಗ್ಗೆ ಮೇ ತಿಂಗಳಲ್ಲಿ ಬೆಳಗಾವಿಯಲ್ಲಿ ಒಂದು ಪ್ರಕರಣ ವರದಿಯಾಗಿತ್ತು. ಏಪ್ರಿಲ್‌ 15ರಂದು ಸೋಂಕು ದೃಢಪಟ್ಟಿದ್ದ ವ್ಯಕ್ತಿಗೆ ಏಪ್ರಿಲ್‌ 30 ಹಾಗೂ ಮೇ 1ರಂದು ಎರಡು ಬಾರಿ ನೆಗೆಟಿವ್‌ ವರದಿ ಬಂದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಆದರೆ ಮೇ 5ಕ್ಕೆ ಮತ್ತೆ ಸೋಂಕು ದೃಢಪಟ್ಟಿತ್ತು. ಆ ವ್ಯಕ್ತಿಯಲ್ಲಿ ದೀಘರ್ಕಾಲೀನ ಅನಾರೋಗ್ಯ ಸಮಸ್ಯೆ ಇತ್ತು. ಜತೆಗೆ ಅವರಲ್ಲಿ ಆ್ಯಂಟಿಬಾಡೀಸ್‌ ಉತ್ಪತ್ತಿಯಾಗಿತ್ತೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ.

ಇದೀಗ ಬೆಂಗಳೂರಿನ ಬನ್ನೇರುಘಟ್ಟಫೋರ್ಟಿಸ್‌ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆಗೆ ಸೋಂಕಿನಿಂದ ಗುಣಮುಖವಾದ ಬರೋಬ್ಬರಿ ಒಂದು ತಿಂಗಳ ಬಳಿಕ ಮತ್ತೆ ಸೋಂಕು ಮರುಕಳಿಸಿದೆ. ಅಲ್ಲದೆ, ಪರೀಕ್ಷೆ ವೇಳೆ ಪ್ರತಿಕಾಯ (ಆ್ಯಂಟಿಬಾಡೀಸ್‌) ಇಲ್ಲದಿರುವುದು ಪತ್ತೆಯಾಗಿದ್ದು, ಸೋಂಕಿತರೆಲ್ಲರಿಗೂ ಪ್ರತಿಕಾಯ ಶಕ್ತಿ ವೃದ್ಧಿಸುತ್ತಿದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಜು.24ಕ್ಕೆ ಡಿಸ್‌ಚಾರ್ಜ್ ಆಗಿದ್ದರು: 27 ವರ್ಷದ ಮಹಿಳೆ ಜುಲೈ 6ರಂದು ಜ್ವರ, ಕೆಮ್ಮು, ಗಂಟಲು ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾಗಿ ನೆಗೆಟಿವ್‌ ವರದಿ ಬಂದ ಬಳಿಕ ಜುಲೈ 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಕಳೆದ ವಾರ ಮತ್ತೆ ಸಣ್ಣ ಪ್ರಮಾಣದಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿವೆ. ಪರೀಕ್ಷೆ ನಡೆಸಿದರೆ ಸೋಂಕು ದೃಢಪಟ್ಟಿದೆ ಎಂದು ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯರಾದ ಡಾ.ಪ್ರತೀಕ್‌ ಪಾಟಿಲ್‌ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಪುತ್ರನಿಗೆ ಕೊರೋನಾ: ಆಸ್ಪತ್ರೆಗೆ ದಾಖಲು

ಆ್ಯಂಟಿಬಾಡೀಸ್‌ ಪತ್ತೆ ಮಾಡುವ ಕೊರೋನಾ ಇಮ್ಯುನೋಗ್ಲೋಬಿನ್‌ ಜಿ (ಐಜಿಜಿ) ಆ್ಯಂಟಿಬಾಡಿ ಪರೀಕ್ಷೆ ನಡೆಸಿದ್ದು, ಈ ರೋಗಿಯಲ್ಲಿ ನೆಗೆಟಿವ್‌ ಬಂದಿದೆ. ಅಪರೂಪವಾದ ಈ ವರದಿಯನ್ನು ಎರಡು ಪ್ರತ್ಯೇಕ ಪ್ರಯೋಗಾಲಯಗಳಲ್ಲಿ ದೃಢಪಡಿಸಿಕೊಳ್ಳಲಾಗಿದೆ. ಈ ಮೂಲಕ ಸೋಂಕಿತೆಗೆ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಬೆಳೆದಿಲ್ಲ. ಅಥವಾ ಪ್ರತಿಕಾಯ ಶಕ್ತಿ ಉತ್ಪಾದನೆಯಾಗಿ ಒಂದು ತಿಂಗಳಲ್ಲಿ ಕಡಿಮೆಯಾಗಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆತಂಕ ಪಡುವ ಅಗತ್ಯವಿಲ್ಲ. ಅಪರೂಪದ ಪ್ರಕರಣಗಳಲ್ಲಿ ಈ ರೀತಿ ಸೋಂಕು ಮರುಕಳಿಸುವ ಸಾಧ್ಯತೆ ಇರುತ್ತದೆ. ರಾಜ್ಯದಲ್ಲಿ ಸೋಂಕು ಪ್ರಾರಂಭವಾದ ದಿನಗಳಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು. ಆದರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ನಡೆಸುತ್ತೇವೆ. ಜತೆಗೆ ಆ್ಯಂಟಿಬಾಡೀಸ್‌ನ ಜೀವಿತಾವಧಿ ಎಷ್ಟುಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ. ಜತೆಗೆ ಸೋಂಕಿತೆ ಮೊದಲು ಸೋಂಕಿಗೆ ಒಳಗಾದಾಗ ಅವರಿಗೆ ಆ್ಯಂಟಿಬಾಡೀಸ್‌ ಉತ್ಪತ್ತಿಯಾಗಿತ್ತೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಆ್ಯಂಟಿಬಾಡೀಸ್‌ ಉತ್ಪತ್ತಿಯಾಗಿ ಬೇಗ ನಶಿಸಿದೆಯೇ ಅಥವಾ ಉತ್ಪತ್ತಿಯೇ ಆಗಿಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಕೊರೋನಾ ಪ್ರಯೋಗಾಲಯದ ನೋಡಲ್‌ ಅಧಿಕಾರಿಯೂ ಆದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ಸೆಲ್ಯುಲರ್‌ ಇಮ್ಯುನಿಟಿ ಇಲ್ಲದಿದ್ದರೆ ಇಂತಹವು ನಡೆಯುತ್ತದೆ. ಇಂತಹ ಪ್ರಕರಣಗಳು ತುಂಬಾ ಅಪರೂಪವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.