ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.03): ಪ್ರತಿವರ್ಷ ಉಕ್ಕಿ ಹರಿದು ನವಲಗುಂದ ತಾಲೂಕಿನ ಜನರ ನಿದ್ದೆಗೆಡಿಸುವ ತುಪರಿಹಳ್ಳ ಯೋಜನೆಗೆ ಕೊನೆಗೂ ಡಿಪಿಆರ್‌ (ಡಿಟೈಲ್‌ ಪ್ರೋಜೆಕ್ಟ್ ರಿಪೋರ್ಟ್‌) ಸಿದ್ಧಗೊಂಡಿದ್ದು, ಸರ್ಕಾರದಿಂದ ಅನುಮೋದನೆ ಪಡೆಯುವುದೊಂದೇ ಬಾಕಿಯುಳಿದಿದೆ. 3 ಹಂತಗಳಲ್ಲಿ ನಡೆಯಲಿರುವ ಯೋಜನೆಗೆ ಬರೋಬ್ಬರಿ 700 ಕೋಟಿ ವೆಚ್ಚವಾಗಲಿದೆ ಎಂದು ಡಿಪಿಆರ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ತಿಂಗಳಲ್ಲಿ ಸರ್ಕಾರದಿಂದ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ.

ಧಾರವಾಡ ಜಿಲ್ಲೆಯಲ್ಲಿ ಯಾವುದೇ ನದಿ ಹರಿದಿಲ್ಲ. ಆದರೆ ತುಪರಿಹಳ್ಳ ಹಾಗೂ ಬೆಣ್ಣಿಹಳ್ಳ ಯಾವ ನದಿಗೂ ಕಮ್ಮಿಯಿಲ್ಲದಂತೆ ಪ್ರತಿವರ್ಷ ಮೈದುಂಬಿ ಹರಿಯುತ್ತವೆ. ಬೇಸಿಗೆಯಲ್ಲಿ ಇದ್ದೂ ಇಲ್ಲದಂತೆ ಇರುವ ಈ ಎರಡು ಹಳ್ಳಗಳು ಮಳೆಗಾಲದಲ್ಲಿ ಮಾತ್ರ ಉಗ್ರಾವತಾರ ತಾಳಿ ನವಲಗುಂದ ತಾಲೂಕನ್ನು ಅಕ್ಷರಶಃ ನಲುಗಿಸಿ ಬಿಡುತ್ತವೆ. ಎಂಟ್ಹತ್ತು ಹಳ್ಳಿಗಳಿಗೆ ನೀರು ನುಗ್ಗಿ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಈ ಎರಡು ಹಳ್ಳಗಳು ಎಷ್ಟೋ ಜನರನ್ನು ಬಲಿಪಡೆದಿರುವುದುಂಟು.

ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂಬ ಬೇಡಿಕೆ ಬಹುವರ್ಷಗಳದ್ದು. ಇದಕ್ಕಾಗಿ ಪರಮಶಿವಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರದಿ ಪಡೆದಿತ್ತು. ಆದರೆ ಅದು ಅನುಷ್ಠಾನಗೊಂಡಿರಲಿಲ್ಲ. ಇದೀಗ ಇಲ್ಲಿ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತುಪರಿಹಳ್ಳದ ಸಮೀಕ್ಷೆ ಮುಗಿಸಿದೆ. ಡ್ರೋಣ ಮತ್ತು ಡಿಜಿಪಿಎಸ್‌ ಮೂಲಕ ಸಮೀಕ್ಷೆ ನಡೆಸಿರುವ ಸರ್ಕಾರ, ಹೈಡ್ರೋಲಜಿ ತಜ್ಞ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ನ ನಿವೃತ್ತ ಪ್ರಾಧ್ಯಾಪಕ ರಾಮಪ್ರಸಾದ್‌ ಅವರಿಂದ ವರದಿ ತಯಾರಿಸಿದೆ. ಇದರೊಂದಿಗೆ ಜಲಸಂಪನ್ಮೂಲ ಇಲಾಖೆಯ ಹೈಡ್ರೋಲಜಿ ವಿಭಾಗದ ಅಧಿಕಾರಿಗಳ ತಂಡವೂ ವರದಿ ತಯಾರಿಸಿದೆ. ಈ ಎರಡು ವರದಿಯ ಅನುಸರಿಸಿ ಡಿಪಿಆರ್‌ ತಯಾರಿಸಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರೆ ಮುಗಿತು. ಕೆಲಸ ಶುರು ಮಾಡಬಹುದು. ಇನ್ನೊಂದು ವಾರದಲ್ಲಿ ನೀರಾವರಿ ನಿಗಮದ ಸಭೆಯಲ್ಲಿ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಧಾರವಾಡ: ಮತ್ತೆ ಆರ್ಭಟಿಸಿದ ವರುಣ, ಪ್ರವಾಹ ಭೀತಿ

ಏನಿದು ಯೋಜನೆ?:

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಉಗಮಿಸುವ ತುಪರಿಹಳ್ಳ ಒಟ್ಟು 82 ಕಿಮೀ ವ್ಯಾಪ್ತಿಯಲ್ಲಿ ಹರಿಯುತ್ತದೆ. ಇದರಲ್ಲಿ 42 ಕಿಮೀ ಕೆಂಪುಮಣ್ಣಿನಿಂದ ಕೂಡಿದ್ದರೆ, ಉಳಿದ 40 ಕಿಮೀ ಸಂಪೂರ್ಣ ಕರಿಮಣ್ಣಿನಿಂದ ಕೂಡಿದೆ. ತುಪರಿಹಳ್ಳದಲ್ಲಿ ಹೈ ಫ್ಲಡ್‌ ಲೇವಲ್‌ ಯಾವ ಮಟ್ಟದಲ್ಲಿದೆ. ಇಷ್ಟುವರ್ಷಗಳ ಕಾಲ ಇದು ಸೃಷ್ಟಿಸಿದ ಅನಾಹುತದ ಪ್ರಮಾಣ ಎಷ್ಟುಎಂಬುದನ್ನೆಲ್ಲ ಸಮೀಕ್ಷೆ ವೇಳೆ ಕಂಡುಕೊಳ್ಳಲಾಗಿದೆ. 3 ಹಂತಗಳಲ್ಲಿ ತುಪರಿಹಳ್ಳದ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ 3 ಹಂತ ಸೇರಿ ಒಟ್ಟು . 700 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ.

ಒತ್ತುವರಿ ತೆರವು:

ಮೊದಲ ಹಂತದಲ್ಲಿ ಪ್ರವಾಹ ನಿಯಂತ್ರಣ ಮಾಡುವುದು. ಅಂದರೆ ಮೂಲ ಹಳ್ಳ ಎಷ್ಟಿತ್ತು. ಅದೇ ರೂಪಕ್ಕೆ ಹಳ್ಳವನ್ನು ತರುವುದು. ಅಂದರೆ ಒತ್ತುವರಿ ತೆರವುಗೊಳಿಸಿ ಕಾಲುವೆ ಸದೃಢಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು, ಹಳ್ಳದ ನೀರು ನುಗ್ಗಿ ಸಂಪರ್ಕ ಕಡಿತಗೊಳ್ಳುವ ಶಿರೂರು, ಗುಮ್ಮಗೋಳ, ಮೊರಬ, ಶಿರಕೋಳ, ಶಾನವಾಡ, ಹಾಳಕುಸುಗಲ್‌, ಗೊಬ್ಬರಗುಂಪಿ, ಜಾವೂರು ಗ್ರಾಮಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸುವುದು. ಶಿರಕೋಳ, ಹನಸಿ, ಜಾವೂರು, ಬಳ್ಳೂರುಗಳಲ್ಲಿ ಕೆಳಹಂತದಲ್ಲಿರುವ ಸೇತುವೆಗಳನ್ನು ಎತ್ತರ ಹೆಚ್ಚಿಸಲು ಮರುನಿರ್ಮಾಣ ಮಾಡುವುದು. ಹೊಲಗಳಿಗೆ ನುಗ್ಗುವ ನೀರನ್ನು ತಡೆಯಲು ಏರಿಗಳ ನಿರ್ಮಿಸುವುದು. ಇದಕ್ಕಾಗಿ . 200 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ.

ತಿರುವು ಯೋಜನೆ:

2ನೇ ಹಂತದಲ್ಲಿ ತುಪರಿಹಳ್ಳದ ತಿರುವುಗೊಳಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಧಾರವಾಡ ತಾಲೂಕು ಲೋಕೂರುನಿಂದ ಲಿಂಗದಹಳ್ಳಿವರೆಗೆ ಅಂದರೆ ಮಲಪ್ರಭಾ ನದಿಗೆ ಹಳ್ಳವನ್ನು ತಿರುಗಿಸುವುದಾಗಿದೆ. 15 ಕಿಮೀ ದೂರದಲ್ಲಿ ಸಿಗುವ ಮಲಪ್ರಭಾ ನದಿಗೆ ಹಳ್ಳವನ್ನು ತಿರುಗಿಸಿದರೆ ಕನಿಷ್ಠ 0.5 ಟಿಎಂಸಿ ಅಡಿಯಿಂದ 1.5 ಟಿಎಂಸಿ ಅಡಿ ನೀರು ನದಿ ಸೇರಲಿದೆ. ಇದರಿಂದ ಮಲಪ್ರಭಾ ನದಿಯಲ್ಲಿನ ನೀರಿನ ಕೊರತೆ ನೀಗಿಸಬಹುದಾಗಿದೆ. ಇದಕ್ಕೆ . 300 ಕೋಟಿ ವರೆಗೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಜಲಾಶಯ ನಿರ್ಮಾಣ:

ಇನ್ನು 3ನೇ ಹಂತದಲ್ಲಿ ಧಾರವಾಡ ತಾಲೂಕಿನ ಪುಡಕಲ್‌ಕಟ್ಟಿಗ್ರಾಮದ ಬಳಿ 0.25 ಟಿಎಂಸಿ ಸಾಮರ್ಥ್ಯದ ಚಿಕ್ಕ ಡ್ಯಾಂ ನಿರ್ಮಿಸಿ ಸಂಗ್ರಹಿಸಿಟ್ಟುಕೊಳ್ಳುವುದು, ಈ ನೀರನ್ನು ಗುರುತ್ವಾಕರ್ಷಣೆ ಮೂಲಕ ಉಪ್ಪಿನ ಬೆಟಗೇರಿ, ಕಲ್ಲೂರು, ಹಾರೋಬೆಳವಡಿ ಗ್ರಾಮಗಳ 3500 ಎಕರೆ ಜಮೀನಿಗೆ ನೀರಾವರಿ ಒದಗಿಸುವುದು. ಹೀಗೆ ತುಪರಿಹಳ್ಳದ ಶಾಶ್ವತ ಪರಿಹಾರ ಕಂಡುಕೊಳ್ಳುವ ಜತೆಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ನೀರಾವರಿಗೆ ಬಳಕೆ ಮಾಡಿಕೊಳ್ಳುವ ಯೋಜನೆ ಸಿದ್ಧಪಡಿಸಲಾಗಿದೆ. ಆದಷ್ಟುಶೀಘ್ರವೇ ಇದಕ್ಕೆ ಸರ್ಕಾರದಿಂದ ಅನುಮೋದನೆ ದೊರೆತು ಚಾಲನೆ ದೊರೆಯಲಿ ಎಂಬುದು ರೈತರ ಅಭಿಲಾಷೆ.

ತುಪರಿಹಳ್ಳದಿಂದ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ತಜ್ಞರಿಂದ ವರದಿ ತಯಾರಿಸಲಾಗಿದೆ. ಶೀಘ್ರವೇ ಸರ್ಕಾರದಿಂದ ಅನುಮೋದನೆ ಪಡೆದು ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ. 

ತುಪರಿಹಳ್ಳದ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಇನ್ನೊಂದು ತಿಂಗಳಲ್ಲಿ ಸರ್ಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಾಜೇಶ ಅಮ್ಮಿನಬಾವಿ ಹೇಳಿದ್ದಾರೆ.