ನವಲಗುಂದ(ಆ.06): ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಣ್ಣಿಹಳ್ಳ, ತುಪರಿಹಳ್ಳಗಳು ಭರ್ತಿಯಾಗಿದ್ದು, ಆಹೆಟ್ಟಿಗ್ರಾಮವೂ ನಡುಗಡ್ಡೆಯಂತಾಗಿ ಸಂಪರ್ಕ ಕಡಿತಗೊಂಡಿದೆ. ಸದ್ಯ ಗ್ರಾಮಗಳಿಗೆ ನೀರು ನುಗ್ಗಿಲ್ಲ. ಆದರೆ ಇನ್ನೆರಡು ದಿನಗಳ ಕಾಲ ಇದೇ ರೀತಿ ಮಳೆಯಾದರೆ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಈ ನಡುವೆ ಮೊರಬ ಗ್ರಾಮದಲ್ಲಿ ತುಪರಿಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ಮಂಗಳವಾರ ರಾತ್ರಿಯಿಂದ ಬಿಟ್ಟು ಬಿಡದೇ ಸುರಿಯುತ್ತಿದೆ. ಬುಧವಾರ ಸಂಜೆ ಕೆಲಕಾಲ ಮಾತ್ರ ಬಿಡುವು ನೀಡಿದೆ. ಹುಬ್ಬಳ್ಳಿ, ಕುಂದಗೋಳ, ಸವಣೂರ, ಧಾರವಾಡ, ನರೇಂದ್ರ, ಬೆಟಗೇರಿ, ನವಲಗುಂದ ತಾಲೂಕಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳೆರಡು ಮೈದುಂಬಿ ಹರಿಯುತ್ತಿವೆ.

ಪ್ರತಿಪಕ್ಷಕ್ಕೆ ನೋಟಿಸ್‌ ಪ್ರಜಾಪ್ರಭುತ್ವ ವಿರೋಧಿ: ಆರ್‌.ವಿ.ದೇಶಪಾಂಡೆ ಆಕ್ರೋಶ

ನೆಲಕಚ್ಚಿದ ದೇವಸ್ಥಾನ:

ಸತತ ಮಳೆಯಿಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಮಳೆಯಿಂದ ಮಾರುತಿ ದೇವಸ್ಥಾನವು ಕುಸಿದು ಬಿದ್ದಿದೆ. ಅರೆಕುರಹಟ್ಟಿಮತ್ತು ಕಾಲವಾಡ ಗ್ರಾಮದಲ್ಲಿ ತಲಾ 1ರಂತೆ ಮನೆಗಳು ಬಿದ್ದಿವೆ. ಅಮರಗೋಳ-2, ನವಲಗುಂದದಲ್ಲಿ 2 ಮನೆ ಸೇರಿ ಒಟ್ಟು 6 ಮನೆಗಳು ಭಾಗಶಃ ಕುಸಿದಿವೆ. ಇನ್ನೂ ಗುಡಿಸಾಗರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೊಲಗಳಿಗೆಲ್ಲ ನೀರು ನುಗ್ಗಿದೆ.

ನಡುಗಡ್ಡೆಯಾದ ಆಹೆಟ್ಟಿ:

ಇನ್ನೂ ನವಲಗುಂದ ತಾಲೂಕಿನ ಆಹೆಟ್ಟಿ ಗ್ರಾಮದ ಸುತ್ತಲೂ ತುಪರಿಹಳ್ಳ ಹರಿದಿದ್ದರಿಂದ ಗ್ರಾಮ ನಡುಗಡ್ಡೆಯಂತಾಗಿದೆ. ಗ್ರಾಮ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಗ್ರಾಮಕ್ಕೆ ಇನ್ನೂ ನೀರು ನುಗ್ಗಿಲ್ಲ. ಆದರೆ ಸುತ್ತುವರಿದಿದೆ. ಮಳೆಯಿಂದ ಹಳ್ಳಕ್ಕೆ ಹೊಂದಿಕೊಂಡಿರುವ ಅಕ್ಕಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆದಿರುವಂತಹ ಹೆಸರು, ಹತ್ತಿ, ಗೋವಿನಜೋಳ, ಈರುಳ್ಳಿ ಮುಂತಾದ ಬೆಳೆಗಳಿಗೆ ನೀರಲ್ಲಿ ನಿಂತಿವೆ. ಇನ್ನೆರಡು ದಿನಗಳ ಕಾಲ ಮಳೆ ಹೀಗೆ ಸುರಿದರೆ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಭೀತಿ ಜನರಲ್ಲಿ ಮೂಡಿದೆ. ಈ ಮಳೆಯಿಂದಾಗಿ ಬೆಳೆದ ಬೆಳೆಗಳು ಸಾಕಷ್ಟುಪ್ರಮಾಣದಲ್ಲಿ ಹಾನಿಯಾಗಿವೆ. ಶೀಘ್ರವೇ ಸಮೀಕ್ಷೆ ನಡೆಸಲಾಗುವುದು ಎಂದು ತಹಸೀಲ್ದಾರ್‌ ನವೀನ ಹುಲ್ಲೂರ ತಿಳಿಸಿದ್ದಾರೆ.

ಕಳೆದ ವರ್ಷ ರೈತರ ಹಾಗೂ ಜನ ಸಾಮಾನ್ಯರ ಮನೆಗಳನ್ನು ಕಸಿದುಕೊಂಡು ತನ್ನ ಆರ್ಭಟವನ್ನು ಸೃಷ್ಟಿಮಾಡಿತ್ತು. ಅದರಂತೆ ಈಗಲೂ ಧಾರಾಕಾರ ಮಳೆ ಆಗುತ್ತಿರುವುದರಿಂದ ಜನರಲ್ಲಿ ವರುಣ ಆತಂಕವನ್ನುಂಟು ಮಾಡಿದ್ದಾನೆ.