Electricity Bill: ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳುವ ಗ್ರಾಹಕರೇ ಎಚ್ಚರ: ವಿದ್ಯುತ್ ಬಿಲ್ ದುಪ್ಪಟ್ಟಾದ ಅಳಲು ಕೇಳಿ
ರಾಜಧಾನಿಯಲ್ಲಿ ಬೆಸ್ಕಾಂ ವತಿಯಿಂದ ಎಲ್ಲ ಕಟ್ಟಡಗಳಿಗೆ ಉಚಿತವಾಗಿ ಹಳೆಯ ಮೀಟರ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಈ ಮೀಟರ್ ಬದಲಾವಣೆಗೆ ಗ್ರಾಹಕರಿಂದ ಗುತ್ತಿಗೆ ಸಂಸ್ಥೆಯವರು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ.
ಬೆಂಗಳೂರು (ಡಿ.21) : ರಾಜ್ಯ ರಾಜಧಾನಿಯಲ್ಲಿ ಬೆಸ್ಕಾಂ ವತಿಯಿಂದ ಎಲ್ಲ ಕಟ್ಟಡಗಳಿಗೆ ಉಚಿತವಾಗಿ ಹಳೆಯ ಮೀಟರ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಈ ಮೀಟರ್ ಬದಲಾವಣೆಗೆ ಗ್ರಾಹಕರಿಂದ ಗುತ್ತಿಗೆ ಸಂಸ್ಥೆಯವರು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಜೊತೆಗೆ, ಕರೆಂಟ್ ಬಿಲ್ ಕೂಡ ದುಪ್ಪಟ್ಟು ಆಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಬೆಂಗಳೂರಿನ ನಿವಾಸಿಗಳು ಈಗಾಗಲೇ ಅಗತ್ಯ ವಸ್ತುಗಳ ಬೆಲೆಯಲ್ಲಿ ಉಂಟಾಗಿರುವ ಹೆಚ್ಚಳದಿಂದ ಹೈರಾಣಾಗಿದ್ದಾರೆ. ಜೊತೆಗೆ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಕೂಡ ಆರ್ಥಿಕ ಹೊರೆಯನ್ನು ಉಂಟುಮಾಡಿತ್ತು. ಆದರೆ, ಕೆಲವು ಗ್ರಾಹಕರು ವಿದ್ಯುತ್ ಕಳ್ಳತನ ಮಾಡುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ನಿಖರ ವಿದ್ಯುತ್ ಅಳತೆಗಾಗಿ ಬೆಸ್ಕಾಂ ವತಿಯಿಂದ ಎಲ್ಲ ಮನೆಗಳಿಗೆ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್‌ಗಳನ್ನು ಡಿಎಲ್ ಎಂಎಸ್ ಸ್ಟ್ಯಾಟಿಕ್ ಮಾಪನಗಳಿಗೆ (ಡಿಜಿಟಲ್ ಮೀಟರ್) ಬದಲಾಯಿಸುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭ ಮಾಡಲಾಗಿದೆ.
6.22 ಲಕ್ಷ ಮೀಟರ್ ಅಳವಡಿಕೆ: ನಗರದಲ್ಲಿ ಒಟ್ಟು 25 ಲಕ್ಷಕ್ಕೂ ಅಧಿಕ ಕಟ್ಟಗಳಿಗೆ ಎಂದು ಅಂದಾಜಿಸಲಾಗಿದೆ. ಆದರೆ, ಈವರೆಗೆ ಬೆಸ್ಕಾಂ ವತಿಯಿಂದ ಒಟ್ಟು 6.22 ಲಕ್ಷಕ್ಕೂ ಅಧಿಕ ಡಿಎಲ್‌ಎಂಎಸ್ ಡಿಜಿಟಲ್ ಮೀಟರ್ ಗಳನ್ನು ಗ್ರಾಹಕರ ಕಟ್ಟಡಗಳಿಗೆ ಅಳವಡಿಸಿದೆ. ಆದರೆ, ಹೀಗೆ ಮೀಟರ್ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಗ್ರಾಹಕರ ಮನೆಗಳಲ್ಲಿ ಸೂಕ್ತ ಉಪಕರಣಗಳಿರುವುದಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಹಲವು ಕಡೆಗಳಲ್ಲಿ ಮೀಟರ್ ಬದಲಾವಣೆ ಮಾಡುತ್ತಿರುವ ಕಾರ್ಮಿಕರು 150 ರೂಪಾಯಿಗಳಿಂದ 400 ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
3 ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಲೈಸೆನ್ಸ್ ರದ್ದು
ಡಿಜಿಟಲ್ ಮೀಟರ್‌ನಿಂದ ವಿದ್ಯುತ್ ಬಿಲ್ ದುಪ್ಪಟ್ಟು: ಸಾರ್ವಜನಿಕರೊಬ್ಬರು ತಮ್ಮ ಮನೆಯ ಸಂಪರ್ಕವನ್ನು ಹೊಸ ಡಿಜಿಟಲ್ ಮೀಟರ್‌ಗೆ ಬದಲಾಯಿಸಿದ ಬಳಿಕ ನಮಗೆ ಬರುವ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. ಹಲವು ವರ್ಷಗಳಿಂದ ಇದ್ದ ಮೀಟರ್‌ನ್ನು ಹೊಸ ಡಿಜಿಟಲ್ ಮೀಟರ್‌ಗೆ ಏಕಾಏಕಿ ಬದಲಾಯಿಸಿರುವುದು ಸರಿಯಲ್ಲ. ಹೊಸ ವಿದ್ಯುತ್ ಬಿಲ್ ನೋಡಿ ಆಶ್ಚರ್ಯವಾಯಿತು. ಸರಕಾರ ಸಾಮಾನ್ಯ ಜನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಹೀಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಎರಡು ಎಲೆಕ್ಟೋ ಮೆಕಾನಿಕಲ್ ಮೀಟರ್ ಗಳಿದ್ದಾಗ ತಿಂಗಳಿಗೆ 1,400 ರೂ.ಗಳಿಂದ 1,700 ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಹೊಸ ಡಿಎಲ್ ಎಮ್‌ಎಸ್ ಡಿಜಿಟಲ್ ಮೀಟರ್ ಅಳವಡಿಸಿದ ಬಳಿಕ 4,400 ರು.ವಿದ್ಯುತ್ ಶುಲ್ಕ ಬರುತ್ತಿದೆ ಎಂದು ಮತ್ತೋರ್ವ ಗ್ರಾಹಕ ಹೇಳುತ್ತಾರೆ.
ಸಣ್ಣ ಪ್ರಮಾಣದ ವಿದ್ಯುತ್ ಬಳಕೆಯ ಅಳತೆ: ಈ ಮೊದಲು ಅಳವಡಿಸಲಾಗಿದ್ದ ಹಳೆಯ ಎಲೆಕ್ಟ್ರೋ ಮೀಟರ್‌ಗಳು ಗ್ರಾಹಕರು ಸಣ್ಣ ಪ್ರಮಾಣದ ವಿದ್ಯುತ್ ಬಳಸಿದಲ್ಲಿ ಅದನ್ನು ಮೀಟರ್‌ಗಳು ದಾಖಲಿಸುತ್ತಿರಲಿಲ್ಲ. ಆದರೆ, ಈಗ ಅಳವಡಿಕೆ ಮಾಡುತ್ತಿರುವ ಡಿಎಲ್ ಎಂಎಸ್ ಡಿಜಿಟಲ್ ಮೀಟರ್ ಸಣ್ಣ ವಿದ್ಯುತ್ ಬಳಕೆಯನ್ನು ದಾಖಲಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತಿರಬಹುದು. ಆದ್ದರಿಂದ ಡಿಜಿಟಲ್ ಮೀಟರ್‌ನಲ್ಲಿ ದೋಷಗಳಿಲ್ಲ. ಒಂದೊಮ್ಮೆ ಗ್ರಾಹಕರಿಗೆ ತಮ್ಮ ಕಟ್ಟಡದಲ್ಲಿರುವ ಮೀಟರ್ ದೋಷವಿದೆ ಎಂದು ಅನಿಸಿದಲ್ಲಿ ಹತ್ತಿರದ ಉಪವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿ ಸೂಕ್ತ ಶುಲ್ಕ ಕಟ್ಟಿದರೆ, ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿರುವ ಮೀಟರ್ ಟೆಸ್ಟಿಂಗ್ ಅಧಿಕಾರಿಗಳು ತಮ್ಮೊಂದಿಗೆ ಸ್ಟಾಂಡರ್ಡ್ ಪವರ್ ಮೀಟರ್ ತಂದು, ಪರಿಶೀಲನೆ ನಡೆಸಿ ಮೀಟರ್ ಸಾಮರ್ಥ್ಯದ ಬಗ್ಗೆ ಪ್ರಮಾಣಪತ್ರ ನೀಡುತ್ತಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕೂಲಿ ಕಾರ್ಮಿಕನ ಜೇಬಿಗೆ ಬರೆ ಎಳೆದ ಬೆಸ್ಕಾಂ: ಶೀಟ್ ಮನೆಗೆ 22 ಸಾವಿರ ಬಿಲ್
ಇನ್ನು ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ ತೆರಿಗೆ, ವೈರಿಂಗ್ ಮತ್ತು ಅಳವಡಿಕೆ ವೆಚ್ಚ ಸೇರಿ 1,497 ರಿಂದ 1,507 ರೂ. ಮತ್ತು 3 ಫೇಸ್ ಮೀಟರ್‌ಗೆ 3,612 ರಿಂದ 3,652 ರೂಪಾಯಿ ವೆಚ್ಚವಾಗಲಿದ್ದು, ಇದನ್ನು ಬೆಸ್ಕಾಂ ಸಂಸ್ಥೆಯಿಂದಲೇ ಭರಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಡಿಜಿಟಲ್ ಮೀಟರ್ ಅನುಕೂಲಗಳು ಏನು?
- ಸ್ಥಾಯಿ ವಿದ್ಯುತ್ ಮೀಟರ್‌ಗಳು ನಿಖರತೆ ವರ್ಗ 1.0 ಆಗಿದೆ.
- ಸ್ಥಾಯಿ ವಿದ್ಯುತ್ತಿನ ಶಕ್ತಿ ಮೀಟರ್‌ಗಳು ಡಿಎಲ್‌ಎಮ್‌ಎಸ್ ಪೂರಕವಾಗಿದೆ.
- ಮೀಟರ್‌ನಲ್ಲಿ ದಾಖಲಾದ ಬೇಡಿಕೆ, ತತ್ ಕ್ಷಣದ ಶಕ್ತಿ, ವೋಲ್ವೇಜ್, ಕರೆಂಟ್ ಮತ್ತು ಇತರ ವಿದ್ಯುತ್ ನಿಯತಾಂಕಗಳನ್ನು ಅಳೆಯಲು ಸಾಧ್ಯವಾಗುತ್ತದೆ.
- ಕಡಿಮೆ ಲೋಡ್‌ಗಳನ್ನು ಮತ್ತು ಕಡಿಮೆ ವೋಲ್ವೇಜ್‌ಗಳಲ್ಲೂ ವಿದ್ಯುತ್ ಬಳಕೆ ಅಳೆಯಲು ಸಾಧ್ಯವಾಗಲಿದೆ.
ಎಲೆಕ್ಟೋಮೆಕಾನಿಕಲ್ (ಹಳೆಯ) ಮೀಟರ್‌ಗಳ ಅನಾನುಕೂಲಗಳು:
- ನಿರಂತರ ಓವರ್‌ಲೋಡ್, ಏರಿಳಿತಗಳು ಅಥವಾ ಇತರ ಕಾರಣದಿಂದ ಮೀಟರ್ ಸುಡುವ ಸಾಧ್ಯತೆಯಿರುತ್ತದೆ.
- ತಾಪಮಾನ, ಆದ್ರತೆ ಮತ್ತು ಕಂಪನದಂತಹ ಪರಿಸರ ಬದಲಾವಣೆಗಳಿಗೆ ಎಲೆಕ್ಟೋಮೆಕಾನಿಕಲ್ ಮೀಟ ಸಂವೇದನಾಶೀಲವಾಗಿದೆ.
- ಭವಿಷ್ಯದಲ್ಲಿನ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡು ಮಾಡುವ/ ಹೊಸ ನಾವೀನ್ಯತೆಗೆ ಸೂಕ್ತವಾಗಿಲ್ಲ.
- ವಿದ್ಯುತ್ ಕಳ್ಳತನ/ದುರುಪಯೋಗಕ್ಕೆ ಒಳಗಾಗುವುದು.